ನವದೆಹಲಿ :  ಮೇಕೆದಾಟು ಅಣೆಕಟ್ಟೆನಿರ್ಮಾಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ತನ್ನ ತಗಾದೆ ಮುಂದುವರಿಸಿದೆ. ಇತ್ತೀಚೆಗಷ್ಟೇ ಮೇಕೆದಾಟು ಯೋಜನಾ ವರದಿ ತಯಾರಿಸದಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಕೋರಿದ್ದ ತಮಿಳುನಾಡು ಸರ್ಕಾರ, ಈಗ ಕೇಂದ್ರೀಯ ಜಲ ಆಯೋಗ, ಕರ್ನಾಟಕ ಸರ್ಕಾರ, ಕಾವೇರಿ ನೀರಾವರಿ ನಿಗಮ ಹಾಗೂ ಕರ್ನಾಟಕ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

‘ಮೇಕೆದಾಟು ಅಣೆಕಟ್ಟೆ ನಿರ್ಮಾಣ ವಿಚಾರದಲ್ಲಿ ಕೇಂದ್ರೀಯ ಜಲ ಆಯೋಗವು (ಸಿಡಬ್ಲ್ಯುಸಿ), ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಕಾರ್ಯಸಾಧು ವರದಿಯನ್ನು ಒಪ್ಪಿಕೊಂಡಿದೆ ಹಾಗೂ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಂತೆ ಸೂಚಿಸಿದೆ. ಇದು 2007ರಲ್ಲಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನದಿ ನ್ಯಾಯಾಧಿಕರಣ ನೀಡಿದ ಐತೀರ್ಪು ಹಾಗೂ ಇದೇ ವರ್ಷ ಫೆಬ್ರವರಿಯಲ್ಲಿ ಸರ್ವೋಚ್ಚ ನ್ಯಾಯಾಲಯವು, ಇದೇ ವಿವಾದದ ಕುರಿತಂತೆ ನೀಡಿದ ಅಂತಿಮ ತೀರ್ಪಿನ ಸ್ಪಷ್ಟಉಲ್ಲಂಘನೆಯಾಗಿದೆ’ ಎಂದು ತನ್ನ ಅರ್ಜಿಯಲ್ಲಿ ತಮಿಳುನಾಡು ವಾದಿಸಿದೆ.

ಇದೇ ವೇಳೆ, ‘22.11.2018ರಂದು ಕೇಂದ್ರೀಯ ಜಲ ಆಯೋಗವು ಮೇಕೆದಾಟು ಯೋಜನೆಯ ಡಿಪಿಆರ್‌ ಸಿದ್ಧಪಡಿಸುವಂತೆ ಸೂಚಿಸಿ ಕರ್ನಾಟಕ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದು, ಈ ಪ್ರಕರಣ ಇತ್ಯರ್ಥವಾಗುವವರೆಗೂ ಪತ್ರಕ್ಕೆ ತಡೆ ನೀಡಬೇಕು’ ಎಂದು ತಮಿಳುನಾಡು ಕೋರಿದೆ.

‘ಕಾವೇರಿ ಅಂತಿಮ ಐತೀರ್ಪು ಹಾಗೂ ಸುಪ್ರೀಂ ಕೋರ್ಟ್‌ ಆದೇಶಗಳಲ್ಲಿ, ನದಿ ಮೇಲ್ಪಾತ್ರದಲ್ಲಿರುವ ರಾಜ್ಯವಾದ ಕರ್ನಾಟಕವು ಕೆಳ ಪಾತ್ರದಲ್ಲಿರುವ ತಮಿಳುನಾಡಿನ ಹರಿಯುವ ನೀರಿಗೆ ಅಡ್ಡಿಯುಂಟು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಮೇಕೆದಾಟು ಯೋಜನೆಯು ಈ ಆದೇಶದ ನಿಂದನೆಯಾಗಿದೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

‘ಕರ್ನಾಟಕ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಡಿ.7ರಂದು ಮೇಕೆದಾಟು ಪ್ರಸ್ತಾವಿತ ಯೋಜನಾ ಸ್ಥಳಕ್ಕೆ ಸ್ಥಳ ಪರಿಶೀಲನೆಗೆ ತೆರಳುತ್ತೇವೆ ಎಂದು ಹೇಳಿದ್ದಾರೆ. ಇದು ಕೂಡ ನ್ಯಾಯಾಲಯ ನಿಂದನೆಯಾಗುತ್ತದೆ’ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಶಿವಕುಮಾರ್‌ ಅವರ ಹೇಳಿಕೆಗಳನ್ನು ತಮಿಳುನಾಡು ಲಗತ್ತಿಸಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌, ಜಲ ಆಯೋಗದ ದಕ್ಷಿಣ ವಿಭಾಗದ ಯೋಜನಾ ನಿರ್ದೇಶಕ ಎನ್‌. ಮುಖರ್ಜಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕರ್ನಾಟಕ ಜಲಸಂಪನ್ಮೂಲ ಇಲಾಖೆ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಹಾಗೂ ಸಚಿವ ಶಿವಕುಮಾರ್‌ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.