ಬೆಂಗಳೂರು (ಸೆ.20): ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ಹೊರ ಬಿದ್ದಿದೆ. ಈ ಬಾರಿಯಾದರೂ ನಮ್ಮ ಪರ ತೀರ್ಪು ಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕಕ್ಕೆ ಮತ್ತೆ ಹಿನ್ನೆಡೆಯಾಗಿದೆ. ಇದರ ಜೊತೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆದೇಶಿಸಿದೆ. ಇದು ಕರ್ನಾಟಕದ ಮೇಲೆ ಬರೆ ಎಲೆದಂತಾಗಿದೆ.

ಯಾವ ವಿಚಾರವನ್ನು ಕರ್ನಾಟಕ ವಿರೋಧಿಸುತ್ತಾ ಬಂದಿದೆಯೋ ಅದೇ ವಿಚಾರವನ್ನು ಇಂದು ಸುಪ್ರೀಂಕೋರ್ಟ್ ಪ್ರಸ್ತಾಪಿಸಿದೆ. ಉಭಯ ರಾಜ್ಯಗಳ ನಡುವಿನ ಕಾವೇರಿ ವ್ಯಾಜ್ಯ ಬಗೆಹರಿಯಲು ಕಾವೇರಿ ನಿರ್ವಹಣಾ ಮಂಡಳಿ ಅಗತ್ಯ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಒಂದು ವೇಳೆ ನಿರ್ವಹಣಾ ಮಂಡಳಿ ರಚನೆಯಾದರೆ ನಮ್ಮ ಡ್ಯಾಂನ ಯಜಮಾನತ್ವವನ್ನು ಆ ಮಂಡಳಿಗೆ ಬಿಟ್ಟುಕೊಟ್ಟಂತಾಗುತ್ತದೆ. ಕಾವೇರಿ ನೀರನ್ನು ರಾಜ್ಯ ಬಳಸಲು ನಿರ್ವಹಣಾ ಮಂಡಳಿಯ ಆದೇಶಕ್ಕಾಗಿ ಕಾಯಬೇಕಾಗುತ್ತದೆ.

ಕಾವೇರಿ ನದಿಯ ಮೇಲಿನ ಹಕ್ಕನ್ನು ಕರ್ನಾಟಕ ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ. ಕಾವೇರಿ ನದಿಯ ಮೇಲಿನ ಹಕ್ಕು ಸ್ವಾಮ್ಯವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳುತ್ತದೆ. ಎಲ್ಲಾ ರಾಜ್ಯ ಜಲಾಶಯಗಳು, ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಕೇಂದ್ರ ನೀರಾವರಿ ಆಯೋಗದ (ಸಿಡಬ್ಲೂಸಿ) ನಿಯಂತ್ರಣಕ್ಕೆ ಹೋಗುತ್ತದೆ. ಜೊತೆಗೆ ನೀರು ಹರಿಸುವ ತೀರ್ಮಾನವನ್ನು ನಿರ್ವಹಣಾ ಮಂಡಳಿ ಕೈಗೊಳ್ಳುತ್ತದೆ. ಈ ಮಂಡಳಿಯ ಅಧ್ಯಕ್ಷರು, ಸದಸ್ಯರನ್ನು ಸರ್ಕಾರ ನೇಮಿಸುತ್ತದೆ. ಇದರಲ್ಲಿ ರಾಜ್ಯಗಳ ಪ್ರತಿನಿಧಿಗಳಿದ್ದರೂ ತಮಿಳುನಾಡಿನ ಪ್ರಾಬಲ್ಯವಿರುತ್ತದೆ. ಈ ಮಂಡಳಿ ರಚನೆಯಿಂದ ತಮಿಳುನಾಡಿಗೆ ಹೆಚ್ಚಿನ ಬಲ ಬಂದಂತಾಗುತ್ತದೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ 4 ರಾಜ್ಯಗಳು ಇದರ ವ್ಯಾಪ್ತಿಗೆ ನ್ಯಾಯಾಧೀಕರಣದ ಸೂತ್ರದಂತೆ ನೀರು ಹಂಚಿಕೆಯಾದರೆ ಕರ್ನಾಟಕಕ್ಕೆ ದೊಡ್ಡ ಆಪತ್ತು ಎದುರಾಗಲಿದೆ.

ಇದೇ ಕಾರಣಕ್ಕೆ ಜಯಲಲಿತಾ ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದಿದ್ದರು. ಮೋದಿ ಪ್ರಧಾನಿಯಾದ ಬಳಿಕ 2 ಬಾರಿ ಮಂಡಳಿ ರಚನೆಗೆ ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನಲ್ಲಿ ಈ ಕುರಿತು ಹಲವು ಬಾರಿ ವಿಚಾರಣೆ ನಡೆದಿತ್ತು. ಕೊನೆಗೂ ತಮಿಳುನಾಡಿನ ಒತ್ತಡಕ್ಕೆ ಮಣಿದ ಸುಪ್ರೀಂಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆದೇಶ ನೀಡಿದೆ. ಇದು ಕರ್ನಾಟಕಕ್ಕೆ ಭಾರೀ ಹಿನ್ನೆಡೆಯಾಗಿದೆ.