ಬೆಂಗಳೂರು(ಸೆ.30): ತಮಿಳುನಾಡಿಗೆ ನೀರು ಹರಿಸುವುದಿಲ್ಲ ಅಂತ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ರಾಜ್ಯಕ್ಕೆ ಸಂಕಷ್ಟ ಪರಿಸ್ಥಿತಿ ಇದೆ. ಆದರೆ ಇವತ್ತು ಸುಪ್ರೀಂ ಕೋರ್ಟ್​'ನಲ್ಲಿ ಮತ್ತೆ ವಿಚಾರಣೆ ನಡೆಯಲಿದೆ. ಈ ಕಾರಣಕ್ಕೆ ಎಲ್ಲರ ಚಿತ್ತ ಮತ್ತೆ ಸರ್ವೋಚ್ಛ ನ್ಯಾಯಾಲಯದ ಕಡೆಗೆ ನೆಟ್ಟಿದೆ.

ಕೇಂದ್ರದ ಸಂಧಾನ ಮುರಿದುಬಿದ್ದಿರುವ ಕಾರಣ ಕಾವೇರಿ ವಿವಾದ ಮತ್ತೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಿದೆ. ನಿನ್ನೆ ಸಚಿವೆ ಉಮಾಭಾರತಿ ಸಭೆ ಮುಗಿಸಿಕೊಂಡು ಸಿಎಂ ಸಿದ್ರಾಮಯ್ಯ ರಾಜ್ಯ ಪರ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರನ್ನ ಭೇಟಿಯಾಗಿ ಚರ್ಚಿಸಿದರು. ನಂತ್ರ ಮಾತಾಡಿದ ಮುಖ್ಯಮಂತ್ರಿಗಳು, ನಮ್ಮ ಪ್ರಯತ್ನ ಮುಗಿದಿದೆ. ಇನ್ನೇನಿದ್ದರೂ ವಕೀಲರ ಪ್ರಯತ್ನ ಅಂತ ಹೇಳಿದರು.

ಸದ್ಯದ ಪರಿಸ್ಥಿತೀಲಿ ರಾಜ್ಯ ಸರ್ಕಾರ ಏನು ಮಾಡಬಹುದು ಅಂತ ನೋಡುವುದಾದರೆ.

ಸರ್ಕಾರ ಮುಂದೇನು ಮಾಡಬಹುದು?

- ಸುಪ್ರೀಂಕೋರ್ಟ್ ಆದೇಶದಂತೆ ನೀರು ಬಿಡಬಹುದು

- ನೀರು ಹರಿಸದೆ ವಿಧಾನಸಭೆ ನಿರ್ಣಯಕ್ಕೆ ಬದ್ಧವಾಗಬಹುದು

- ಸುಪ್ರೀಂಕೋರ್ಟ್​ಗೆ ಮತ್ತೊಂದು ಮೇಲ್ಮನವಿ ಸಲ್ಲಿಸಬಹುದು

- ಎರಡೂ ರಾಜ್ಯಗಳಿಗೆ ಅಧ್ಯಯನ ತಂಡ ಕಳುಹಿಸಲು ಮನವಿ

ಇನ್ನು ಮಧ್ಯಾಹ್ನ 2 ಗಂಟೆಗೆ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಹಾಗೂ ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯಲಿದೆ. ಇಲ್ಲೇನಾಗುತ್ತದೆ ಎನ್ನುವುದೇ ಸದ್ಯದ ಕುತೂಹಲ. ಹಾಗಾದರೆ ಸರ್ವೋಚ್ಛ ನ್ಯಾಯಾಲಯದ ಸಾಧ್ಯಾಸಾಧ್ಯತೆಗಳೇನು?

ಸುಪ್ರೀಂಕೋರ್ಟ್​ನಲ್ಲಿ ಏನಾಗಬಹುದು..?

- ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅಪವಾದ ಹೊರಿಸುವುದು

- ಆದೇಶ ಪಾಲಿಸದ ಕಾರಣ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಬಹುದು

- ನೀರು ಬಿಡುಗಡೆಯ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ಹೊರಿಸುವುದು

- ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಗೆ ತಜ್ಞರನ್ನು ಕಳಿಸಬಹುದು

- ಮೊದಲು ನೀರು ಬಿಡಿ, ಆಮೇಲೆ ತಂಡ ಕಳುಹಿಸೋಣ ಎನ್ನಬಹುದು

- ನ್ಯಾಯಾಂಗ ನಿಂದನೆ ಎಂದು ಹಿರಿಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಬಹುದು

ಏನೇ ನಿರ್ಧಾರವಾದ್ರೂ ನ್ಯಾಯಾಧೀಶರ ವಿವೇಚನೆ ಮೇಲೆ ನಿರ್ಧಾರವಾಗುತ್ತೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಭಾರೀ ಸಂಕಷ್ಟದಲ್ಲಿದೆ. ಸದ್ಯದ ಮಟ್ಟಿಗೆ ತಮಿಳುನಾಡಿಗೆ ನೀರು ಹರಿಸಲ್ಲ ಅಂತ ಸಿಎಂ ಗಟ್ಟಿ ನಿರ್ಧಾರ ಮಾಡಿರೋ ಕಾರಣ ಮಧ್ಯಾಹ್ನ ಸುಪ್ರೀಂ ಕೋರ್ಟ್​ನಲ್ಲಿ ಏನಾಗುತ್ತದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.