ಬೆಂಗಳೂರು(ಸೆ.19): ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಇಂದು ಮತ್ತೊಂದು ಅಗ್ನಿ ಪರೀಕ್ಷೆ ದಿನ. ದೆಹಲಿಯಲ್ಲಿ ಇಂದು ಕಾವೇರಿ ಮೇಲುಸ್ತುವಾರಿ ಸಮಿತಿಯ ಮಹತ್ವದ ಸಭೆ ನಡೆಯಲಿದ್ದು, ಸಮರ್ಥ ವಾದ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಇತ್ತ ಕಾವೇರಿ ಕೊಳ್ಳದ ಭಾಗದ ರೈತರಲ್ಲಿ ಆತಂಕ ಮಡುಗಟ್ಟಿದ್ದು, ಎಲ್ಲರ ದೃಷ್ಠಿ ಸಮಿತಿಯತ್ತ ನೆಟ್ಟಿದೆ.
ದೆಹಲಿಯಲ್ಲಿ ನಡೆಯಲಿದೆ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ
ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿರೋ ಕರ್ನಾಟಕಕ್ಕೆ ಇಂದು ಮಹತ್ವದ ದಿನ. ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಸಮಿತಿಯ ತೀರ್ಮಾನ, ರಾಜ್ಯದ ಪಾಲಿಗೆ ಅತ್ಯಂತ ಪ್ರಮುಖವಾದದ್ದು. ಹೀಗಾಗಿ, ಕಾವೇರಿ ಕೊಳ್ಳದ ಬರ ಪರಿಸ್ಥಿತಿ, ಅಂತರ್ಜಲ ಸ್ಥಿತಿ, ಜಲಾಶಯಗಳಲ್ಲಿ ನೀರಿನ ಸ್ಥಿತಿ ಮತ್ತು ಮಳೆ ಪ್ರಮಾಣದ ವಿವರದೊಂದಿಗೆ ಸಮರ್ಥ ವಾದ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ಜನರ ಕೆಂಗೆಣ್ಣಿಗೆ ಗುರಿಯಾಗಿರೋ ಸರ್ಕಾರ, ಈಗ ನೀರು ಬಿಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದೆ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಅಧಿಕಾರಿಗಳ ತಂಡದೊಂದಿಗೆ ದೆಹಲಿಯಲ್ಲೇ ಉಳಿದುಕೊಂಡಿದ್ದು, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಮುಗಿಯುವವರೆಗೆ ಅಲ್ಲೇ ಉಳಿಯುವ ಸಾಧ್ಯತೆ ಇದೆ. ಇನ್ನೊಂದೆಡೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಸೇರಿದಂತೆ ಕಾನೂನು ತಜ್ಞರ ತಂಡ, ನಾರಿಮನ್ ಜತೆ ಸಭೆ ನಡೆಸಿದ್ದು, ಅಗತ್ಯ ಅಂಕಿ ಅಂಶ ಮತ್ತು ವಾಸ್ತವ ಪರಿಸ್ಥಿತಿ ಬಗ್ಗೆ ಮಾಹಿತಿ ಒದಗಿಸುತ್ತಿದ್ದಾರೆ.
ಕರ್ನಾಟಕದ ಕಾವೇರಿ ಕೊಳ್ಳದ ಮೂರನೇ ಎರಡರಷ್ಟು ಬರಪೀಡಿತ ಪ್ರದೇಶವಾಗಿದೆ. ಆದರೆ, ತಮಿಳುನಾಡಿನಲ್ಲಿ ಮೂರನೇ ಒಂದರಷ್ಟು ಪ್ರದೇಶ ಮಾತ್ರ ಬರಪೀಡಿತವಾಗಿದೆ. ಇನ್ನು, ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ. ಇದನ್ನೆಲ್ಲಾ ಮೇಲುಸ್ತುವಾರಿ ಸಮಿತಿ ಮುಂದೆ ಸರ್ಕಾರ ಇಡಲಿದೆ.
ರಾಜ್ಯದ ಪಾಲಿಗೆ ಮಂಗಳವಾರ ನಿರ್ಣಾಯಕ ದಿನ
ಇಂದು ಕಾವೇರಿ ಮೇಲುಸ್ತುವಾರಿ ಸಮಿತಿ ಕೈಗೊಳ್ಳುವ ತೀರ್ಮಾನ ಕರ್ನಾಟಕದ ಪಾಲಿಗೆ ನಿರ್ಣಾಯಕವಾಗಿದೆ. ಯಾಕೆಂದರೆ, ಸೆ.20ರವರೆಗೆ ತಮಿಳನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಈ ಹಿಂದೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ನಾಳೆ ಮತ್ತೆ ಈ ಕುರಿತ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಸಮಿತಿ ಕೈಗೊಳ್ಳುವ ನಿರ್ಧಾರ ಆಧರಿಸಿ ಸುಪ್ರೀಂಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.
ಒಟ್ಟಿನನಲ್ಲಿ, ತನ್ನ ಪಾಲಿನ ನೀರನ್ನೂ ತಮಿಳುನಾಡಿಗೆ ಬಿಟ್ಟು ಕೈಕಟ್ಟಿ ನಿಂತಿರುವ ರಾಜ್ಯ ಸರ್ಕಾರ, ಅಳಿದುಳಿದ ನೀರು ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸಿದೆ.
