ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯಕ್ಕೆ ಬಂದಿರುವ ತಂಡದ ಮಂಡ್ಯ ಜಿಲ್ಲೆ ಪ್ರವಾಸ | ಎಲ್ಲ ಕಡೆಗಳಲ್ಲೂ ಬರ ದರ್ಶನ | ಅಂಬರೀಷ್‌ ನಾಪತ್ತೆ | ರಮ್ಯಾಭೇಟಿ

ಮಂಡ್ಯ (ಅ.08): ನೆತ್ತಿ ಸುಡುವ ಬಿಸಿಲು, ಧೂಳು ತುಂಬಿಕೊಂಡ ರಸ್ತೆಗಳ ನಡುವೆಯೇ ಕಾರಿನಲ್ಲಿ ಸಾಗುತ್ತಿದ್ದ ಕೇಂದ್ರ ಅಧಿಕಾರಿಗಳ ತಂಡಕ್ಕೆ ಸಿಕ್ಕಿದ್ದು ಬತ್ತಿದ ಕೆರೆ-ಕಟ್ಟೆ, ಒಣಗಿದ ಪೈರು. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯಕ್ಕೆ ಬಂದಿರುವ ಈ ತಂಡ, ಯಾರೊಂದಿಗೂ ಹೆಚ್ಚು ಮಾತನಾಡಲಿಲ್ಲ. ಆದರೆ ಮೌನವಾಗಿಯೇ ವಾಸ್ತವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅಗತ್ಯ ಬಿದ್ದೆಡೆ ದಾಖಲೆಗಾಗಿ ಹಾನಿಗೀಡಾದ ಬೆಳೆಗಳ ಸ್ಯಾಂಪಲ್‌, ಫೋಟೋಗಳನ್ನು ತೆಗೆದುಕೊಳ್ಳುತ್ತಾ ಸಾಗುತ್ತಲೇ ಹೋಯಿತು. ಅಲ್ಲಲ್ಲೇ ಸಿಕ್ಕ ರೈತರ ಸಮಸ್ಯೆ ಆಲಿಸಿ, ಮನವಿಯನ್ನೂ ಸ್ವೀಕರಿಸಿತು. 

ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಅಧಿಕಾರಿಗಳ ಬಳಿ ಮಾತಿನಲ್ಲೇ ಮಾಹಿತಿ ಪಡೆದು ಹೊರಟ ತಂಡ, ಮಧ್ಯಾಹ್ನ 12.30ಕ್ಕೆ ಮದ್ದೂರು ತಾಲೂಕಿನ ಹುಲಿಗೆರೆ ಪುರ ಗೇಟ್‌ಗೆ ಕ್ಯಾಪ್ಟರ್‌ನಲ್ಲಿ ಬಂದಿಳಿಯಿತು. ಈ ತಂಡವನ್ನು ಕರೆದುಕೊಂಡು ಹೋಗಲು 12 ಇನೋವಾ ಕಾರುಗಳು ಸಜ್ಜಾಗಿ ನಿಂತಿದ್ದವು. ಜಿಲ್ಲಾಡಳಿತ, ಜನಪ್ರತಿನಿಧಿಗಳ ಸ್ವಾಗತದ ಬಳಿಕ ತಂಡ ನೇರವಾಗಿ ತಾಲೂಕಿನ ಹೆಮ್ಮನಹಳ್ಳಿ, ತೈಲೂರು, ಪಟ್ಟೆದೊಡ್ಡಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿತು. ತೈಲೂರು ಕೆರೆ ವೀಕ್ಷಿಸಿದ ತಂಡ ಕೆರೆ ವ್ಯಾಪ್ತಿಯಲ್ಲಿ ಯಾವುದೇ ಬೆಳೆ ಇಲ್ಲದೇ ಇರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿತು. ಕೆರೆ ಬತ್ತಿದ್ದರಿಂದ ಆದ ಬೆಳೆ ನಷ್ಟ, ಬತ್ತಿದ ಕೆರೆ, ನಾಲೆಗಳಲ್ಲಿ ನೀರು ಹರಿಯದಿರುವುದನ್ನು ಸದಸ್ಯರು ಸೂಕ್ಷ್ಮವಾಗಿ ಗಮನಿಸಿದರು. ಈ ಕುರಿತು ಸ್ಥಳೀಯರಿಂದಲೂ ಮಾಹಿತಿ ಪಡೆದುಕೊಂಡರು.

ಪಣ್ಣೆದೊಡ್ಡಿ ಗ್ರಾಮದಲ್ಲಿ ಸಾಗುತ್ತಿದ್ದಾಗ ಮಾರ್ಗ ಮಧ್ಯೆ ವಾಹನ ನಿಲ್ಲಿಸಿದ ಅಧಿಕಾರಿಗಳು ಪಕ್ಕದಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ವೆಂಕಟಮ್ಮ ಅವರನ್ನು ಕರೆದು ‘ಏನಮ್ಮ ನಿಮ್ಮ ಸಮಸ್ಯೆ' ಎಂದು ಇಂಗ್ಲಿಷ್‌ನಲ್ಲಿ ಪ್ರಶ್ನಿಸಿದರು. 20ಕ್ಕೂ ಹೆಚ್ಚು ವಾಹನಗಳು, ಜತೆಗೆ ಪೊಲೀಸ್‌ ಬೆಂಗಾವಲು ಪಡೆಯನ್ನು ನೋಡಿ, ಇವರು ಯಾರು ಎಂಬುದು ತಿಳಿಯದೆ ವೆಂಕಟಮ್ಮ ಒಂದರೆಕ್ಷಣ ಅವಾಕ್ಕಾದರು. ಏನು ಕೇಳುತ್ತಿದ್ದಾರೆ ಎಂದು ಅರ್ಥವಾಗದೆ ಕನ್ನಡದಲ್ಲೇ ತಡಬಡಿಸಿದರು. ಆಗ ತಂಡದ ಸದಸ್ಯರ ಜತೆಗೆ ಇದ್ದ ಅಧಿಕಾರಿಗಳು, ಝಾ ನೇತೃತ್ವದ ಅಧಿಕಾರಿಗಳ ತಂಡ ಏನು ಕೇಳುತ್ತಿದೆ ಎನ್ನುವುದನ್ನು ಕನ್ನಡದಲ್ಲಿ ವಿವರಿಸಿದರು.

ಆಗ ಜಮೀನಿನಲ್ಲಿ ಒಣಗಿದ್ದ ರಾಗಿ ಬೆಳೆಯನ್ನು ಕಿತ್ತು ತೋರಿಸಿದ ವೆಂಕಟಮ್ಮ ‘ಮಳೆ ಇಲ್ಲ, ನಾಲೆಗೆ ನೀರು ಬರುತ್ತಿಲ್ಲ. ಹೀಗಾದರೆ ನಮ್ಮ ಬದುಕು ಹೇಗೆ ಸ್ವಾಮಿ?' ಎಂದು ಸಮಸ್ಯೆ ಹೇಳಿಕೊಂಡರು. ಕಣ್ಣೀರು ಹಾಕುತ್ತಲೇ ಅವರು ತಾವು ಎದುರಿಸುತ್ತಿರುವ ಸಂಕಟವನ್ನು ವಿವರಿಸಿದರು. ವೆಂಕಟಮ್ಮ ಏನು ಹೇಳುತ್ತಿದ್ದಾರೆ ಎನ್ನುವುದನ್ನು ಶಾಸಕ ಡಿ.ಸಿ.ತಮ್ಮಣ್ಣ ತಂಡದ ಸದಸ್ಯರಿಗೆ ಇಂಗ್ಲಿಷ್‌ನಲ್ಲಿ ವಿವರಿಸಿದರು. ನಂತರ ವೆಂಕಟಮ್ಮನಿಗೆ ಧೈರ್ಯ ಹೇಳಿ ತಂಡ ಮುಂದೆ ತೆರಳಿತು.
ಗ್ರಾಮಸ್ಥರಿಂದಲೂ ಮನವಿ: ನಂತರ ತಂಡದ ಸದಸ್ಯರನ್ನು ಮುಂದೆ ಗ್ರಾಮದ ರೈತರ ತಂಡವೊಂದು ಮಾರ್ಗ ಮಧ್ಯೆ ತಡೆದು ನಿಲ್ಲಿಸಿ ಸಮಸ್ಯೆ ಆಲಿಸುವಂತೆ ಪಟ್ಟು ಹಿಡಿಯಿತು. ಅಧಿಕಾರಿಗಳು ಕೆಳಗಿಳಿದು ನಿಮ್ಮ ಸಮಸ್ಯೆ ಏನೆಂದು ಕೇಳಿದಾಗ, ‘‘ನೀರಿಲ್ಲದೆ ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಕೆರೆಯಾಶ್ರಿತ ಜಮೀನಿನ ಬೆಳೆಗಳು ಒಣಗುತ್ತಿವೆ. ನಮಗೆ ಅನ್ಯಾಯವಾಗಿದೆ. ಸರಿಪಡಿಸಿಕೊಡಿ,'' ಎಂದು ಮನವಿ ಮಾಡಿದರು. 

ಮೈದಾನದಂತಾದ ಕೆರೆ: ಇದಕ್ಕೂ ಮೊದಲು ತೈಲೂರು ಕೆರೆ, ಅಚ್ಚುಕಟ್ಟು ಪ್ರದೇಶವನ್ನು ತಂಡ ಪರಿಶೀಲಿ​ಸುತ್ತಿ​ದ್ದಾಗ ಅಲ್ಲಿದ್ದ ಗ್ರಾಮಸ್ಥರು ‘‘ಸಾವಿರಾರು ಎಕರೆಯ ಬೆಳೆಗೆ ನೀರು ಕೊಡುತ್ತಿದ್ದ ತೈಲೂರು ಕೆರೆಯಲ್ಲಿ ಒಂದು ಹನಿಯೂ ನೀರಿಲ್ಲ. ಕೊಕ್ಕರೆ ಬೆಳ್ಳೂರಿನಿಂದ ಈ ಕೆರೆಗೆ ಈಜಲು ಬರುತ್ತಿದ್ದ ಕೊಕ್ಕರೆಗಳು ಈಗ ನಾಪತ್ತೆಯಾಗಿವೆ. ಕೆರೆ ಕ್ರಿಕೆಟ್‌ ಮೈದಾನ​ದಂತಾ​​ಗಿದೆ,'' ಎಂದು ವಸ್ತುಸ್ಥಿತಿಯನ್ನು ತಂಡದ ಗಮನಕ್ಕೆ ತಂದರು.

ಅಧಿಕಾರಿಗಳ ಜತೆಗೆ ಚರ್ಚೆ: ಮಧ್ಯಾಹ್ನದ ನಂತರ ದೊಡ್ಡ ಅರಸಿನಕೆರೆ, ತಳಗವಾದಿ, ಮಳವಳ್ಳಿ ಕೆರೆ, ಕಿರುಗಾವಲು ಕೆರೆ ಸೇರಿ ಒಣಗಿ ಹೋಗಿರುವ ಬಹುತೇಕ ಕೆರೆಗಳನ್ನು ವೀಕ್ಷಿಸಿದ ತಂಡದ ಸದಸ್ಯರು ಸಾಕಷ್ಟುಮಾಹಿತಿ ಹಾಗೂ ಅಂಕಿ ಅಂಶಗಳನ್ನು ಕಲೆಹಾಕಿದರು. ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳ ಬಗ್ಗೆಯೂ ರಾಜ್ಯದ ಅಧಿಕಾರಿಗ​ಳೊಂದಿಗೆ ಚರ್ಚೆ ನಡೆಸಿದರು. ಇಲ್ಲಿನ ಜನ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಅರಿವಿಗೆ ಬಂದರೂ ಸಹ ತಂಡದ ಸದಸ್ಯರು ಮಾತ್ರ ಮೌನವಾಗಿ ಎಲ್ಲವನ್ನು ಗಮನಿಸಿದರು.

ಮೊದಲ ದಿನದ ಅಧ್ಯಯನ ಪ್ರವಾಸದಲ್ಲಿ ರಾಜ್ಯದ ಸಮಸ್ಯೆಯನ್ನು ತಂಡಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಫಲವಾದಂತೆ ಕಂಡಿತು. ಜನಪ್ರತಿನಿಧಿಗಳು, ರೈತರು ಕೂಡ ತಂಡದೊಂದಿಗೆ ಸೌಹಾ​ರ್ದಯು​ತವಾಗಿ ಆಗಿರುವ ತೊಂದರೆ ಬಗ್ಗೆ ವಿವರಿಸಿದರು.

ಅಂಬರೀಷ್‌ ನಾಪತ್ತೆ: ಮಂತ್ರಿ ಸ್ಥಾನ ಕಳೆದುಕೊಂಡ ನಂತರ ಮಂಡ್ಯ ಶಾಸಕರಾಗಿ ಒಂದೇ ಒಂದು ಬಾರಿ ಮಂಡ್ಯಕ್ಕೆ ಆಗಮಿಸದ ಮಾಜಿ ಸಚಿವ ಅಂಬರೀಷ್‌ ಕೂಡ ಇಂದಿನ ಅಧ್ಯಯನ ತಂಡವನ್ನು ಭೇಟಿ ಮಾಡಿ ವಸ್ತು ಸ್ಥಿತಿ ಹೇಳುವ ಮನಸ್ಸು ಮಾಡಲಿಲ್ಲ. 

ರಮ್ಯಾಭೇಟಿ: ಮಾಜಿ ಸಂಸದೆ ರಮ್ಯಾ ಮದ್ದೂರಿನಲ್ಲಿ ಕೇಂದ್ರ ತಂಡದ ಸದಸ್ಯರನ್ನು ಭೇಟಿ ಮಾಡಿ ಮಳೆ ಕೊರತೆ ಹಾಗೂ ನೀರಿನ ಸಮಸ್ಯೆ ಕುರಿತ ಸಮಗ್ರ ಮಾಹಿತಿ ಪತ್ರ ಸಲ್ಲಿಸಿದರು. 

ಕನ್ನಡಪ್ರಭ ವರದಿ