Asianet Suvarna News Asianet Suvarna News

ಶಿವಮೊಗ್ಗ ಉಪ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೇ ಮಹಾಮಂತ್ರ

 ಲೋಕಸಭಾ ಉಪ ಚುನಾವಣೆ ನಡೆಯಲಾರದು ಎಂದೇ ಭಾವಿಸಿದ್ದ ರಾಜಕೀಯ ಪಕ್ಷಗಳು ಇದಕ್ಕೆ ಯಾವುದೇ ಸಿದ್ಧತೆಗಳನ್ನು ನಡೆಸಿರಲಿಲ್ಲ. ಇದ್ದಕ್ಕಿದ್ದ ಹಾಗೆ ಚುನಾವಣೆ ಎದುರಾದಾಗ ಅಕ್ಷರಶಃ ಕಂಗಾಲಾಗಿಸಿದೆ. ಶಿವಮೊಗ್ಗದಲ್ಲಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ತೀವ್ರ ಹಣಾಹಣಿಗೆ ಬಿದ್ದಿದ್ದು, ಬಿರುಸಿನ ಪೈಪೋಟಿ ಏರ್ಪಟ್ಟಿದೆ. 

Cast Is the Important Factor of Shivamogga By Poll
Author
Bengaluru, First Published Oct 28, 2018, 10:20 AM IST
  • Facebook
  • Twitter
  • Whatsapp

ಶಿವಮೊಗ್ಗ :  ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ತೀವ್ರ ಹಣಾಹಣಿಗೆ ಬಿದ್ದಿದ್ದು, ಬಿರುಸಿನ ಪೈಪೋಟಿ ಏರ್ಪಟ್ಟಿದೆ. ಪರಿಣಾಮ, ಈ ಕ್ಷೇತ್ರ ಸುಲಭದ ತುತ್ತಾಗಬಹುದು ಎಂದು ಭಾವಿಸಿದ್ದ ಬಿಜೆಪಿ ಇದೀಗ ಏದುಸಿರು ಬಿಡುವಂತಾಗಿದೆ.

ಲೋಕಸಭಾ ಉಪ ಚುನಾವಣೆ ನಡೆಯಲಾರದು ಎಂದೇ ಭಾವಿಸಿದ್ದ ರಾಜಕೀಯ ಪಕ್ಷಗಳು ಇದಕ್ಕೆ ಯಾವುದೇ ಸಿದ್ಧತೆಗಳನ್ನು ನಡೆಸಿರಲಿಲ್ಲ. ಇದ್ದಕ್ಕಿದ್ದ ಹಾಗೆ ಚುನಾವಣೆ ಎದುರಾದಾಗ ಅಕ್ಷರಶಃ ಕಂಗಾಲಾಗಿದ್ದು ನಿಜ. ಬಿಜೆಪಿಗೆ ಕೂಡ ಇದರ ನಿರೀಕ್ಷೆ ಇಲ್ಲದೆ ಇದ್ದರೂ, 2019ರ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರೇ ಸ್ಪರ್ಧಿಸುತ್ತಾರೆ ಎಂಬ ಮಾತು ಪಕ್ಷದೊಳಗೆ ಕೇಳಿಬರುತ್ತಿತ್ತು. ಇದ್ದಕ್ಕಿದ್ದಂತೆ ಉಪಚುನಾವಣೆ ಘೋಷಣೆಯಾದಾಗ ಈ ಬಾರಿಯ ಚುನಾವಣೆಯಲ್ಲಿಯೂ ರಾಘವೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ವಿಳಂಬವಿಲ್ಲದೆ ಆಯ್ಕೆ ಮಾಡಲಾಯಿತು. ಅದುವರೆಗೆ ಉಮೇದುವಾರಿಕೆಯಲ್ಲಿ ಅನೇಕರ ಹೆಸರು ಕೇಳಿಬಂದಿದ್ದರೂ, ಆರು ತಿಂಗಳ ಅವಧಿಯ ಸಂಸತ್‌ ಸ್ಥಾನಕ್ಕೆ ಸ್ಪರ್ಧಿಸುವ ಆಸಕ್ತಿ ಪಕ್ಷದಲ್ಲಿ ಇನ್ನಾರಿಗೂ ಉಳಿಯಲಿಲ್ಲ.

ಇತ್ತ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಳಯದಲ್ಲಿಯೂ ಸ್ಪರ್ಧಿಸುವ ಉತ್ಸಾಹ ಯಾರಲ್ಲಿಯೂ ಕಾಣಲಿಲ್ಲ. ಈ ಕ್ಷೇತ್ರ ಕಾಂಗ್ರೆಸ್‌ಗೆ ಮೀಸಲು ಎಂಬ ಸುದ್ದಿ ಇದ್ದುದರಿಂದ ಜೆಡಿಎಸ್‌ ಪಕ್ಷದವರು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಅನೇಕರ ಹೆಸರು ಕೇಳಿಬಂದರೂ ಯಾರಿಗೂ ಸ್ಪರ್ಧಿಸುವ ಉತ್ಸಾಹ ಕಾಣುತ್ತಿರಲಿಲ್ಲ. ಇದಕ್ಕೆ ಕಡಿಮೆ ಅವಧಿಗೆ ಅಷ್ಟೊಂದು ಹಣ ಖರ್ಚು ಮಾಡಬೇಕೆಂಬುದು ಒಂದೆಡೆಯಾದರೆ, ಇನ್ನೊಂದೆಡೆ ಇದು ಬಿಜೆಪಿ ಕ್ಷೇತ್ರ ಎಂದು ಬಲವಾಗಿ ನಂಬಿಕೊಂಡಿದ್ದು. ಇದಕ್ಕೆ ಕೂಡ ಎರಡು ಕಾರಣಗಳಿದ್ದವು. ಒಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿರುವುದು ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಯಾರೂ ಊಹಿಸದ ರೀತಿಯಲ್ಲಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದೊಂದಿಗೆ ಆಯ್ಕೆಯಾಗಿದ್ದು. ಬಿಜೆಪಿಯಲ್ಲಿ ಕೂಡ ಇದೇ ರೀತಿಯ ಭಾವನೆ ಇತ್ತು.

ಮಧು ಪರ ಏಕಾಏಕಿ ಹುಮ್ಮಸ್ಸು:

ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್‌ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಂತೆ ವಾತಾವರಣ ಬದಲಾಗತೊಡಗಿತು. ಅಷ್ಟರಲ್ಲಾಗಲೇ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು. ಆದರೆ ಜೆಡಿಎಸ್‌-ಕಾಂಗ್ರೆಸ್‌ ವಲಯದಲ್ಲಿ ಏಕಾಏಕಿ ಕಾಣಿಸಿಕೊಂಡ ಹುಮ್ಮಸ್ಸು, ಎರಡೂ ಪಕ್ಷಗಳ ನಾಯಕರು ಎಲ್ಲವನ್ನೂ ಮರೆತು ಒಂದಾಗಿ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರನ್ನು ಚುರುಕುಗೊಳಿಸಿದ್ದು, ಇಡೀ ಸರ್ಕಾರವೇ ಇಲ್ಲಿಗೆ ಬಂದು ಪ್ರಚಾರಕ್ಕೆ ಧುಮುಕಿದ್ದು ಕಾರ್ಯಕರ್ತರಲ್ಲಿ ಭಾರೀ ಉತ್ಸಾಹ ಮೂಡಿಸಿತು.

ಜಾತಿ ಲೆಕ್ಕಾಚಾರ:

ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು, ಈಡಿಗರು, ದಲಿತರು, ಬ್ರಾಹ್ಮಣರು, ಮುಸ್ಲಿಮರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನದಲ್ಲಿ ಕುರುಬರು, ಹಿಂದುಳಿದ ವರ್ಗದವರು ಬರುತ್ತಾರೆ. ಇದಲ್ಲದೆ ಜೈನ, ಕ್ರೈಸ್ತ, ರಜಪೂತ, ಮರಾಠಿ, ತಮಿಳು ಸೇರಿದಂತೆ ವಿವಿಧ ಜನಾಂಗದವರು ಕೂಡ ಇದ್ದಾರೆ.

ಲಿಂಗಾಯತರು ಸುಮಾರು 2.70 ಲಕ್ಷ, ದಲಿತರು 2.5 ಲಕ್ಷ ಪರಿಶಿಷ್ಟಜಾತಿ ಮತ್ತು ವರ್ಗದವರು, 2 ಲಕ್ಷ ಈಡಿಗರು, ಜಿಎಸ್‌ಬಿ ಸೇರಿದಂತೆ 1.5 ಲಕ್ಷ ಬ್ರಾಹ್ಮಣರು, 1.30 ಲಕ್ಷ ಮುಸ್ಲಿಮರು, 60 ಸಾವಿರ ಕುರುಬರು, 63 ಸಾವಿರ ಬಂಟರು ಪ್ರಮುಖವಾಗಿದ್ದರೆ, ಉಳಿದ ವಿವಿಧ ವರ್ಗಗಳು ಕೂಡ ಸಾಕಷ್ಟುಸಂಖ್ಯೆಯಲ್ಲಿವೆ.

ಬಿಜೆಪಿ ಲಿಂಗಾಯತ, ಬ್ರಾಹ್ಮಣ, ಬಂಟರು, ಜೈನರ ಮತಗಳನ್ನು ನೆಚ್ಚಿಕೊಂಡಿದ್ದರೆ, ಮೈತ್ರಿಕೂಟ ಈಡಿಗರು, ಮುಸ್ಲಿಮರು, ಕ್ರೈಸ್ತರು ಮತ್ತು ಒಕ್ಕಲಿಗರನ್ನು ಪ್ರಮುಖವಾಗಿ ನೆಚ್ಚಿಕೊಂಡಿದೆ. ಪರಿಶಿಷ್ಟಜಾತಿ ಮತ್ತು ವರ್ಗದ ಮತಗಳು ಎರಡೂ ಕಡೆ ಹಂಚಿ ಹೋಗಲಿದ್ದರೆ, ಕುರುಬ ಮತಗಳಲ್ಲಿ ಹೆಚ್ಚು ಮತಗಳು ಹಾಗೂ ಹಿಂದುಳಿದ ವರ್ಗದ ಮತಗಳಲ್ಲಿ ಹೆಚ್ಚು ಸಿದ್ದರಾಮಯ್ಯ ಕಾರಣಕ್ಕೆ ಮೈತ್ರಿಕೂಟಕ್ಕೆ ಸಿಗಲಿದೆ ಎಂಬುದು ಆ ಪಕ್ಷದ ನಾಯಕರ ಲೆಕ್ಕಾಚಾರ.

ಹಿಂದಿನ ಚುನಾವಣೆಗಳಲ್ಲಿ ಈಡಿಗ ಮತಗಳಲ್ಲಿ ಬಹಳಷ್ಟನ್ನು ಬಿಜೆಪಿ ತನ್ನ ಕಡೆ ಸೆಳೆದುಕೊಂಡಿತ್ತು. ಬಂಗಾರಪ್ಪ ನಿಧನರಾದ ಬಳಿಕ ಈ ಮತಗಳು ಛಿದ್ರಗೊಂಡಿದ್ದವು. ಇವುಗಳನ್ನು ಸೆಳೆಯಲು ಯಡಿಯೂರಪ್ಪ ವಿವಿಧ ತಂತ್ರಗಳನ್ನು ಬಳಸಿ ಯಶಸ್ವಿಯಾಗಿದ್ದರು. ಬಂಗಾರಪ್ಪ ಅವರ ಪುತ್ರ ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ ಅವರನ್ನು ಶಾಸಕರನ್ನಾಗಿ ಬಿಜೆಪಿ ಮಾಡಿದೆ. ಈಡಿಗ ಸಂಘಕ್ಕೆ ಶಿವಮೊಗ್ಗದಲ್ಲಿ ಜಾಗ ನೀಡಿ, ಭವನ ನಿರ್ಮಿಸಲು ಹಣ ನೀಡಿದ್ದು ಕೂಡ ಯಡಿಯೂರಪ್ಪ ಅವರೇ. ಹೀಗಾಗಿ ಈ ಮತಗಳು ತಮ್ಮ ಕೈಬಿಡುವುದಿಲ್ಲ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ತಮ್ಮ ಮತ ಬ್ಯಾಂಕ್‌ಗೆ ಈಡಿಗ ಮತ ಸೇರಿದರೆ ಗೆಲುವು ಸುಲಭ ಎಂದು ಭಾವಿಸಿದ್ದರು. ಆದರೆ ಯಾವಾಗ ಮಧು ಬಂಗಾರಪ್ಪ ಸ್ಪರ್ಧಾ ಕಣಕ್ಕೆ ಇಳಿದರೋ ಈ ಎಲ್ಲ ಲೆಕ್ಕಾಚಾರಗಳು ಉಲ್ಟಾಆಯಿತು. ಮಧು ಬಂಗಾರಪ್ಪ ಈಡಿಗ ಸಮಾಜದ ನಾಯಕ ಎಂದು ಗುರುತಿಸಿಕೊಳ್ಳದೆ ಇದ್ದರೂ, ಲೋಕಸಭೆಗೆ ಬಂಗಾರಪ್ಪ ನಂತರ ಈಡಿಗ ಸಮುದಾಯದಿಂದ ಯಾರೂ ಗೆಲುವು ಸಾಧಿಸಿಲ್ಲ. ಇಲ್ಲಿ ಇಬ್ಬರು ಈಡಿಗ ಶಾಸಕರು ಇದ್ದು, ಲೋಕಸಭೆಗೆ ನಮ್ಮವನೊಬ್ಬ ಹೋಗಲಿ ಎಂದು ತೀರ್ಮಾನವನ್ನು ಆ ಸಮಾಜ ತೆಗೆದುಕೊಳ್ಳುವ ಸಾಧ್ಯತೆಯನ್ನು ನಿರ್ಮಿಸಿತು. ಇದೇ ಬಿಜೆಪಿಗೆ ತಲೆ ನೋವು ತಂದಿರುವುದು.

ಜಿಲ್ಲೆಯಲ್ಲಿ ಬಿಜೆಪಿಗೆ ಒಕ್ಕಲಿಗರು ಒಲಿದಿರುವುದು ಕಡಿಮೆ. ತೀರ್ಥಹಳ್ಳಿ ಮತ್ತು ಭದ್ರಾವತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಒಕ್ಕಲಿಗರು ಅಲ್ಲಿ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ದಲಿತರು ಮತ್ತು ತಮಿಳು ಸಮುದಾಯದವರಲ್ಲಿ ಸಾಕಷ್ಟುಮಂದಿ ಬಿಜೆಪಿ ಜೊತೆಗಿದ್ದಾರೆ. ಇದಲ್ಲದೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅವರ ಸಂಘಟನೆಯ ಬೆಳವಣಿಗೆಗೆ ನೆರವಾಗಿದ್ದರು. ಅದು ಈ ಬಾರಿ ಸ್ವಲ್ಪ ಮಟ್ಟಿಗೆ ಫಲ ನೀಡಲೂಬಹುದು. ತಳ ಮಟ್ಟದಲ್ಲಿ ಸಂಘಟಿತ ಪ್ರಚಾರ ಪಕ್ಷಕ್ಕೆ ಲಾಭ ತರಲಿದೆ.

ಇತ್ತ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪಗೆ ಇರುವ ದೊಡ್ಡ ಲಾಭದಾಯಕ ಅಂಶವೆಂದರೆ ಈಡಿಗರು ಪೂರ್ಣವಾಗಿ ಕೈ ಹಿಡಿಯಬಹುದು ಎಂಬುದು. ಜೊತೆಗೆ ಮುಸ್ಲಿಮರು, ಒಕ್ಕಲಿಗರು, ಕ್ರೈಸ್ತರು, ಹಿಂದುಳಿದ ವರ್ಗದವರು, ದಲಿತರು ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಭಾವಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ ಭಾರೀ ಕೆಲಸ ಮಾಡಿದ್ದರೆ, ಈಗ ಆಗಿನ ವಾತಾವರಣವಿಲ್ಲ. ಅಭಿವೃದ್ಧಿಯ ವಿಚಾರವೂ ಮುಖ್ಯವಾಗುತ್ತಿಲ್ಲ. ಜಾತಿ ಮತ್ತು ವ್ಯಕ್ತಿ ಪ್ರಧಾನ ಪಾತ್ರಗಳಾಗುತ್ತಿವೆ. ಹೀಗಾಗಿ ಚುನಾವಣೆ ಯಾರಿಗೂ ಸುಲಭದ ತುತ್ತಲ್ಲ. ಬಿಜೆಪಿಗೆ ಇರುವ ಧನಾತ್ಮಕ ಅಂಶವೆಂದರೆ ಅದರ ಸಂಘಟನೆ. ಇಡೀ ಕ್ಷೇತ್ರದಲ್ಲಿ ಸಂಘಟಿತ ಯತ್ನ ನಡೆಯುತ್ತಿದೆ. ಮೈತ್ರಿಕೂಟದಲ್ಲಿ ಮೇಲ್ಮಟ್ಟದಲ್ಲಿ ನಾಯಕರು ಒಟ್ಟಾದಂತೆ ಕಾಣುತ್ತಿದ್ದರೂ, ತಳಮಟ್ಟದಲ್ಲಿ ಒಟ್ಟಾಗಿ ಪ್ರಚಾರಕ್ಕೆ ಇಳಿಯುತ್ತಿಲ್ಲ. ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎರಡೂ ಪಕ್ಷದ ನಾಯಕರ ನಡುವೆ ಇನ್ನೂ ಹೊಂದಾಣಿಕೆ ಸಾಧ್ಯವಾಗಿಲ್ಲ. ಇದೆಲ್ಲ ಸರಿಪಡಿಸಿಕೊಂಡರೆ ಮೈತ್ರಿಕೂಟಕ್ಕೆ ಲಾಭವಾಗಬಹುದು.

ಜೆಡಿಯು ಪಕ್ಷದಿಂದ ಸ್ಪರ್ಧಿಸಿರುವ ಮಹಿಮಾ ಪಟೇಲ್‌ ಕೊನೆ ಗಳಿಗೆಯಲ್ಲಿ ಕಣಕ್ಕೆ ಇಳಿದಿದ್ದಾರೆ. ಯಾವ ಸಿದ್ಧತೆಯೂ ಇಲ್ಲದೆ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯೂ ಇಲ್ಲದೆ ಚುನಾವಣೆ ಎದುರಿಸುತ್ತಿರುವ ಇವರು ಕೇವಲ ಆತ್ಮಸಾಕ್ಷಿಯ ಮತಗಳನ್ನು ಆಪೇಕ್ಷಿಸಿದ್ದಾರೆ. ಇದು ಇಂದಿನ ಸ್ಥಿತಿಯಲ್ಲಿ ಎಷ್ಟರ ಮಟ್ಟಿಗೆ ಅವರ ಅಸ್ತಿತ್ವವನ್ನು ಕಾಪಾಡುತ್ತದೆ ಎಂಬುದನ್ನು ಫಲಿತಾಂಶವೇ ಹೇಳಬೇಕು.


ಮತದಾರರ ವಿವರ

ಒಟ್ಟು ಮತದಾರರು- 16,45,511

ಪುರುಷರು- 7,20,812

ಮಹಿಳೆಯರು- 8,27,109

ಸೇವಾ ಮತದಾರರು- 460

ಸ್ಪರ್ಧಿಗಳು

ಬಿ.ವೈ. ರಾಘವೇಂದ್ರ-ಬಿಜೆಪಿ

ಮಧು ಬಂಗಾರಪ್ಪ- ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ

ಮಹಿಮಾ ಪಟೇಲ್‌- ಜೆಡಿಯು

ಶಶಿಕುಮಾರ್‌ ಎಸ್‌. ಗೌಡ- ಪಕ್ಷೇತರ

ವರದಿ :  ಗೋಪಾಲ್‌ ಯಡಗೆರೆ

Follow Us:
Download App:
  • android
  • ios