ಗ್ರಾಹಕರನ್ನು ಸೆಳೆಯುವ ಸಲುವಾಗಿ ಉಚಿತ ಆಟೋ ಪ್ರಯಾಣ ವ್ಯವಸ್ಥೆ ಮಾಡಿದ್ದ ಬಾರ್‌ ಒಂದರ ಮೇಲೆ ಗರಂ ಆಗಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

ಕಾರ್ಕಳ : ಗ್ರಾಹಕರನ್ನು ಸೆಳೆಯುವ ಸಲುವಾಗಿ ಉಚಿತ ಆಟೋ ಪ್ರಯಾಣ ವ್ಯವಸ್ಥೆ ಮಾಡಿದ್ದ ಬಾರ್‌ ಒಂದರ ಮೇಲೆ ಗರಂ ಆಗಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

ಇಂತಹ ಒಂದು ವಿದ್ಯಮಾನ ನಡೆದಿರುವುದು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಅಜೆಕಾರಿನಲ್ಲಿ. ಇಲ್ಲಿನ ರಚನಾ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಒಂದು ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸದೊಂದು ಆಫರ್‌ ನೀಡಿತ್ತು. ಗ್ರಾಹಕ ಉಚಿತ ಆಟೋರಿಕ್ಷಾ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಚಿತ ಪಿಕ್‌ಅಪ್‌, ಡ್ರಾಪ್‌ ಆಫರ್‌ನ ಬಗ್ಗೆ ಜಾಹೀರಾತು ಬ್ಯಾನರ್‌ ಕೂಡ ಇತ್ತು.

ವೈರಲ್‌ ಆಗಿತ್ತು ಫೋಟೋ: ಈ ವಿಷಯ ಊರಿನಲ್ಲಿ ಭಾರಿ ಚರ್ಚೆ ಆಗಿದೆ. ಮಾತ್ರವಲ್ಲ ರಚನಾ ಬಾರ್‌ನ ಮುಂದೆ ಆಟೋರಿಕ್ಷಾ ನಿಂತಿದ್ದ ಫೋಟೋ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್‌ ಆಗಿದ್ದು, ಉಡುಪಿ ಜಿಲ್ಲಾ ಅಧಿಕಾರಿಗಳ ಗಮನಕ್ಕೂ ಬಂದಿದೆ. ಬಾರ್‌ ಮಾಲೀಕರ ಈ ಹೊಸ ವ್ಯಾಪಾರ ತಂತ್ರ ನೋಡಿ ಗರಂಗೊಂಡಿರುವ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಅಬಕಾರಿ ಕಾಯ್ದೆಯ ಪ್ರಕಾರ ಮದ್ಯಸೇವನೆಗೆ ಪ್ರಚಾರ ಮಾಡುವುದು ಅಪರಾಧ. ಹೀಗಾಗಿ ಅಬಕಾರಿ ಅಧೀಕ್ಷಕರ ಸೂಚನೆ ಮೇರೆಗೆ ಆಟೋದ ಬ್ಯಾನರ್‌ ತೆಗೆಸಿರುವ ಕಾರ್ಕಳ ಅಬಕಾರಿ ಇನ್ಸ್‌ಪೆಕ್ಟರ್‌ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವೈನ್‌ಶಾಪ್‌ನಿಂದ ತೊಂದರೆಯಾಗಿತ್ತು: ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಹೆದ್ದಾರಿಯಿಂದ 300 ಮೀಟರ್‌ನಿಂದ ಆಚೆಗೆ ವ್ಯವಹಾರ ನಡೆಸುವಂತೆ ಬಾರ್‌ ಮತ್ತು ವೈನ್‌ಶಾಪ್‌ಗಳಿಗೆ ಸೂಚಿಸಲಾಗಿತ್ತು. ಆದರೆ, ಹಳೆ ಕಟ್ಟಡದಲ್ಲಿದ್ದ ಬಾರ್‌ ಹಾಗೂ ವೈನ್‌ಶಾಪ್‌ಗಳು ಮುಂಬಾಗಿಲು ಮುಚ್ಚಿ ಹಿಂಬಾಗಿಲು ತೆರೆದುಕೊಂಡು ವ್ಯವಹಾರ ಮುಂದುವರಿಸಿದ್ದವು. ಆದರೆ, ಕೆಲವು ಕಡೆಗಳಲ್ಲಿ ಮುಂಬಾಗಿಲು ಒಂದೇ ಆಗಿರುವುದರಿಂದ ಬಾರ್‌ ಹಾಗೂ ವೈನ್‌ ಶಾಪ್‌ಗಳನ್ನು ಗತ್ಯಂತರವಿಲ್ಲದೆ ಬೇರೆ ಬೇರೆ ಕಡೆ ವರ್ಗಾಯಿಸಲಾಯಿತು. ಇದರಿಂದಾಗಿ ಬಾರ್‌ ಮಾಲೀಕರು ನಷ್ಟಕ್ಕೊಳಗಾಗುವ ಪರಿಸ್ಥಿತಿ ಉಂಟಾಯಿತು. ಗ್ರಾಹಕರನ್ನು ಸೆಳೆಯುವ ಹೊಸ ಉಪಾಯವಾಗಿ ಅಜೆಕಾರಿನ ಬಾರ್‌ ಮಾಲೀಕರು ಇಂತಹ ಪ್ರಚಾರದ ದುಸ್ಸಾಹಸಕ್ಕೆ ಕೈಹಾಕಿದ್ದರು.

ಅಜೆಕಾರು ಹೆದ್ದಾರಿ ಮುಖ್ಯರಸ್ತೆಯಿಂದ ಸುಮಾರು 550 ಮೀಟರ್‌ ದೂರದಲ್ಲಿ ರಚನಾ ಬಾರ್‌ ಇದೆ. ನಮ್ಮ ಗ್ರಾಹಕರಿಗೆ ಬಾರ್‌ಗೆ ನಡೆದುಕೊಂಡು ಬರಲು ಬಹಳ ಕಷ್ಟಆಗುತ್ತಿತ್ತು. ಆದುದರಿಂದ ಯೋಚನೆ ಮಾಡಿ ಇಂತಹ ಪ್ರಚಾರದ ಯೋಜನೆ ಮತ್ತು ಪ್ರಯಾಣದ ವ್ಯವಸ್ಥೆಯನ್ನು ರೂಪಿಸಿದೆ ಎಂದು ಬಾರ್‌ ಮಾಲೀಕರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ನಮ್ಮ ನೆಚ್ಚಿನ ಬಾರ್‌ಗೆ ಹೋಗಬೇಕಾದರೆ ಸುಮಾರು 600 ಮೀಟರ್‌ ನಡೆದುಕೊಂಡು ಹೋಗಬೇಕು. ಇದರಿಂದ ಸಮಯವ್ಯರ್ಥ ಹಾಗೂ ಮದ್ಯ ಸೇವನೆ ಬಳಿಕ ರಸ್ತೆಯಲ್ಲಿ ನಡೆದುಕೊಂಡು ಬರುವುದು ಕಷ್ಟ. ಅದ್ದರಿಂದ ಬಾರ್‌ ಮಾಲೀಕರಿಗೆ ಎರಡು ಬಾರಿ ಹೇಳಿದ್ದೆವು. ಅದಕ್ಕಾಗಿ ರಿಕ್ಷಾ ವ್ಯವಸ್ಥೆ ಮಾಡಿದ್ದರು.

-ನಿತ್ಯಾನಂದ ನಾಯಕ್‌, ಬಾರ್‌ ಗ್ರಾಹಕರು

ಇದು ನಮ್ಮ ಸ್ವಂತ ಆಟೋ. ಈಗಾಗಲೇ ಎರಡು ಆಟೋಗಳನ್ನು ಗ್ರಾಹಕರ ಸೇವೆಗೆ ಇರಿಸಿದ್ದೇವೆ. ನಮ್ಮ ಬಾರ್‌ಗೆ ಬರುವ ದಾರಿಯಲ್ಲಿ ಇನ್ನೊಂದು ವೈನ್‌ಶಾಪ್‌ ಇದೆ. ನಮ್ಮಲ್ಲಿ ಬರುವ ಗ್ರಾಹಕರು ಇತ್ತೀಚಿಗೆ ಆ ವೈನ್‌ಶಾಪ್‌ನಲ್ಲಿ ಕುಡಿದು ತೆರಳುತ್ತಿದ್ದಾರೆ. ಆದುದರಿಂದ ಗ್ರಾಹಕರನ್ನು ಪೇಟೆವರೆಗೆ ಬಿಡುವ ವ್ಯವಸ್ಥೆ ಮಾಡಿದ್ದೆವು.

-ನವೀನ್‌, ರಚನಾ ಬಾರ್‌ ಮಾಲೀಕರು

ರಾಜ್ಯ ಅಬಕಾರಿ ಕಾಯ್ದೆಯ ಪ್ರಕಾರ ಮದ್ಯಸೇವನೆಗೆ ಪ್ರಚಾರ ಮಾಡುವುದು ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ರಿಕ್ಷಾದಲ್ಲಿ ಅಳವಡಿಸಿದ್ದ ಬ್ಯಾನರ್‌ ತೆಗೆಸಿದ್ದೇವೆ. ಮೇಲಧಿಕಾರಿಗಳ ಆದೇಶದ ಮೇರೆಗೆ ಬಾರ್‌ ಮಾಲೀಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ.

-ಹೆಸರು ಹೇಳಲ್ಛಿಸದ ಅಬಕಾರಿ ಇನ್ಸ್‌ಪೆಕ್ಟರ್‌, ಕಾರ್ಕಳ