ಬೆಂಗಳೂರು (ಮಾ. 26):  ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯಲ್ಲಿ ಅಕ್ರಮಕ್ಕೆ ಪ್ರಯತ್ನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ, ಅಕ್ರಮಕ್ಕೆ ಪ್ರಯತ್ನಿಸಿದ ಶಿಕ್ಷಕರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಹಾಗೂ ಇದಕ್ಕೆ ಸಹಕರಿಸಿದ ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಅಮಾನತು ಮಾಡುವಂತೆ ನಿರ್ದೇಶನ ನೀಡಿದೆ. ಮೈಸೂರಿನಲ್ಲಿ ನಕಲು ಮಾಡಲು ಪ್ರಯತ್ನಿಸಿದ ವಿದ್ಯಾರ್ಥಿಯೊಬ್ಬನನ್ನು ಡಿಬಾರ್‌ ಮಾಡಲಾಗಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಸಂಯುಕ್ತ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಗಣಿತ ಪ್ರಶ್ನೆಪತ್ರಿಕೆಗೆ ಉತ್ತರಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಂದ ನಕಲು ಮಾಡಿಸಲು ಪ್ರಯತ್ನಿಸುತ್ತಿದ್ದರು ಎಂಬ ಆರೋಪದ ಮೇಲೆ ಅಲಕನೂರ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಎ.ಬಿ. ಪಾಟೀಲ, ಡಿ.ಪಿ. ಕಾಪ್ಸಿ ಮತ್ತು ಪಾಲಯ್ಯ ಅವರ ಮೇಲೆ ಶಿಕ್ಷಣ ಕಾಯ್ದೆ- 1983ರ ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಸಹಕಾರ ನೀಡಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರನ್ನು ಅಮಾನತುಗೊಳಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.

ವಿದ್ಯಾರ್ಥಿ ಡಿಬಾರ್‌:

ಮೈಸೂರಿನ ಒಂಟಿಕೊಪ್ಪಲು ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರದೊಳಗೆ ಮೊಬೈಲ್‌ ಕೊಂಡೊಯ್ದು ನಕಲಿಗೆ ಪ್ರಯತ್ನಿಸಿದ ಮುಜಾಹಿದ್ದೀನ್‌ ಪಾಷಾ ಎಂಬ ಖಾಸಗಿ ಅಭ್ಯರ್ಥಿಯನ್ನು ಡಿಬಾರ್‌ ಮಾಡಲಾಗಿದೆ. ಸಮೀಪದ ಜಯಲಕ್ಷ್ಮೇಪುರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾರದಲ್ಲಿ 2ನೇ ಪ್ರಕರಣ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ ರಾಯಚೂರಿನ ಲಿಂಗಸುಗೂರಿನಲ್ಲಿ ಕನ್ನಡ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಯತ್ನಿಸಲಾಗಿತ್ತು. ಪರೀಕ್ಷೆ ಆರಂಭವಾದ ಎರಡು ತಾಸಿನ ನಂತರ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಇದೀಗ ಗಣಿತ ಪ್ರಶ್ನೆಪತ್ರಿಕೆ ಕೂಡ ಒಂದೂಮುಕ್ಕಾಲು ತಾಸಿನ ಸೋರಿಕೆಯಾಗುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಉಂಟಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪಾಲ್ಗೊಂಡವರಿಗೆ ಗರಿಷ್ಠ ಐದು ಲಕ್ಷ ರು. ವರೆಗೆ ದಂಡ ಮತ್ತು ಐದು ವರ್ಷದವರೆಗೆ ಶಿಕ್ಷೆಯನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರೂ ಪ್ರಕರಣಗಳು ಮಾತ್ರ ಮರುಕಳಿಸುತ್ತಲೇ ಇವೆ.

ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ:

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೊರಟಗಿ ಕಲ್ಪವೃಕ್ಷ ಪ್ರೌಢಶಾಲೆಯಲ್ಲಿ ಸೋಮವಾರ ಬೆಳಗ್ಗೆ 11.45ರ ಸುಮಾರಿಗೆ ವಾಟ್ಸ್‌ ಆ್ಯಪ್‌ನಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಹರಿದಾಡಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದರೂ ಕೆಲವು ಕಿಡಿಗೇಡಿಗಳು ಗೊಂದಲ ಸೃಷ್ಟಿಸುವುದಕ್ಕಾಗಿಯೇ ಪರೀಕ್ಷಾ ವ್ಯವಸ್ಥೆಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಬಿಇಒಗಳಿಗೆ ಸೂಚನೆ ನೀಡಲಾಗಿದೆ.