ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಿಯಮ ಉಲ್ಲಂಘನೆ ಆಗಿದೆ ಅನ್ನೋ ಮಾತು ಕೇಳಿ ಬಂದಿದೆ.  ಯಾಕಂದ್ರೆ, ಜಲಾಶಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುವಾಗಲೇ ಜಲಮಂಡಳಿ ಕೆಲ ಷರತ್ತುಗಳನ್ನು ವಿಧಿಸಿತ್ತು. ಅದರ ಎಕ್ಸ್​ಕ್ಲೂಸಿವ್ ದಾಖಲೆ ಸುವರ್ಣನ್ಯೂಸ್​ಗೆ ಸಿಕ್ಕಿದೆ.

ಬೆಂಗಳೂರು(ನ.08): ಇಬ್ಬರು ಖಳನಟರ ದುರಂತ ಸಾವಿಗೆ ಹೊಣೆಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಯಾಕೆಂದರೆ ಚಿತ್ರೀಕರಣದಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಿದ್ದು, ಮತ್ತೊಂದೆಡೆ ಚಿತ್ರ ತಂಡದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. 

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಿಯಮ ಉಲ್ಲಂಘನೆ ಆಗಿದೆ ಅನ್ನೋ ಮಾತು ಕೇಳಿ ಬಂದಿದೆ. ಯಾಕಂದ್ರೆ, ಜಲಾಶಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡುವಾಗಲೇ ಜಲಮಂಡಳಿ ಕೆಲ ಷರತ್ತುಗಳನ್ನು ವಿಧಿಸಿತ್ತು. ಅದರ ಎಕ್ಸ್​ಕ್ಲೂಸಿವ್ ದಾಖಲೆ ಸುವರ್ಣನ್ಯೂಸ್​ಗೆ ಸಿಕ್ಕಿದೆ.

ನವೆಂಬರ್ 4 ರಂದು ಜಲಮಂಡಳಿ ವಿಧಿಸಿದ್ದ ಷರತ್ತು ಇಲ್ಲಿ ಉಲ್ಲಂಘನೆಯಾಗಿದೆ. ಜಲಮಂಡಳಿಯ ನಿತ್ಯದ ಚಟುವಟಿಕೆಗಳಿಗೆ ತೊಂದರೆ ಆಗಬಾರದು. ಜಲಮಂಡಳಿಯ ಆಸ್ತಿಗೆ ದಕ್ಕೆ ಮಾಡಬಾರದು ಹಾಗೂ ಚಿತ್ರೀಕರಣದ ಸ್ಥಳದ ಆಸುಪಾಸು ಸ್ವಚ್ಛತೆ ಕಾಪಾಡಬೇಕು ಅನ್ನೋ ಷರತ್ತನ್ನು ವಿಧಿಸಲಾಗಿತ್ತು. ಆದ್ರೆ ಮಾಸ್ತಿಗುಡಿ ಚಿತ್ರ ತಂಡವು ಮೊದಲ ಎರಡು ನಿಯಮವನ್ನು ಉಲ್ಲಂಘಿಸಿದೆ. ಚಿತ್ರತಂಡವು ಜಲಮಂಡಳಿ ವಿಧಿಸಿದ್ದ ಷರತ್ತು ಉಲ್ಲಂಘಿಸಿ ನೀರಿಗೆ ಇಳಿದೆ.

ಇನ್ನೂ ಜಲಮಂಡಳಿಯು ಚಿತ್ರೀಕರಣಕ್ಕೆ ಕೇವಲ ಅನುಮತಿಯಷ್ಟೇ ಕೊಟ್ಟಿರಲಿಲ್ಲ. ಬದಲಾಗಿ ಚಿತ್ರೀಕರಣ ತಂಡದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಅನಸೂಯಾ ಎಂಬ ಸಹಾಯಕ ಇಂಜಿನಿಯರ್​ ಒಬ್ಬರನ್ನು ಸ್ಥಳದಲ್ಲಿ ನೇಮಕ ಮಾಡಲಾಗಿತ್ತು. ಮಧ್ಯಾಹ್ನ ಸುಮಾರು 3.30 ಗಂಟೆಯವರೆಗೂ ಅನಸೂಯಾ ಸ್ಥಳದಲ್ಲಿದ್ರು. ಜಲಮಂಡಳಿ ಪ್ರಕಾರ ಚಿತ್ರೀಕರಣ ಮುಗಿವ ಹಂತದಲ್ಲಿ ಅಧಿಕಾರಿ ಅನಸೂಯಾ ಕಚೇರಿಗೆ ವಾಪಸಾಗಿದ್ದಾರೆ. ಅದಾದ ಬಳಿಕ ಚಿತ್ರತಂಡ ಈ ಸಾಹಸ ದೃಶ್ಯ ಚಿತ್ರೀಕರಣಕ್ಕೆ ಕೈ ಹಾಕಿದೆ.

ಚಿತ್ರ ತಂಡದ ವಿರುದ್ಧ ಕ್ರಿಮಿನಲ್ ಕೇಸ್: 
ಇನ್ನೂ ಘಟನೆ ಸುದ್ದಿ ತಿಳಿಯುತ್ತಲೇ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಸ್ತಿಗುಡಿ ಚಿತ್ರತಂಡದ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವಂತೆ ಸೂಚಿಸಿದ್ರು. ಎಸ್​ಪಿ ಸೂಚನೆ ಮೇರೆಗೆ ತಾವರೇಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಚಿತ್ರ ತಂಡ ನಿಯಮ ಉಲ್ಲಂಘಿಸಿದೆ. ಜೊತೆಗೆ ಚಿತ್ರ ತಂಡದ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಆದ್ರೆ, ಅಮಾಯಕ ಕಲಾವಿದರ ಪ್ರಾಣ ಬಲಿಯಾಗಿದೆ. ಇನ್ನು ಘಟನೆ ಸಂಬಂಧ ನಿನ್ನೆ ಮಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.