ನವದೆಹಲಿ: ಭಾರತದ ನೋಟುಗಳಲ್ಲಿ ರೋಗಾಣು ಹಾಗೂ ಸೋಂಕು ಹರಡುವ ವೈರಾಣುಗಳಿವೆ ಎಂದು ವಾಣಿಜ್ಯೋದ್ಯಮಿಗಳ ಸಂಘಟನೆ  ಸಿಎಐಟಿ ಆರೋಪಿಸಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿರುವ ಸಿಎಐಟಿ, ತನಿಖೆಗೆ ಆಗ್ರಹಿಸಿದೆ. 

ಜೊತೆಗೆ ಈ ಕುರಿತು ಅಧ್ಯಯನ ವರದಿ ಹಾಗೂ ಮಾಧ್ಯಮಗಳ ವರದಿಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ವಿಜ್ಞಾನ ಮತ್ತು  ತ್ರಜ್ಞಾನ ಸಚಿವ ಹರ್ಷವರ್ಧನ್‌ಗೂ ಸಲ್ಲಿಸಲಾಗಿದ್ದು, ಈ ಬಗ್ಗೆ ಅಗತ್ಯ ಕ್ರಮಕ್ಕೆ ಒತ್ತಾಯಿಸಲಾಗಿದೆ. ನೋಟಿನಲ್ಲಿರುವ ಬ್ಯಾಕ್ಟೀರಿಯಾಗಳು ಮೂತ್ರ ಸಮಸ್ಯೆ, ಚರ್ಮ ಕಾಯಿಲೆ ಸೇರಿದಂತೆ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಹಲವು ಅಧ್ಯಯನ ವರದಿಗಳನ್ನಿಟ್ಟುಕೊಂಡು ವಾಣಿಜ್ಯೋದ್ಯಮ ಸಂಘಟನೆ ಈ ಆರೋಪ ಮಾಡುತ್ತಿದೆ. 

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್, ‘ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪತ್ರಿಕೆಗಳಲ್ಲಿ ಇಂಥ ಸಂಶೋಧನಾ ವರದಿಗಳು ಪ್ರಕಟವಾಗುತ್ತದೆ. ಆದರೆ, ಇದನ್ನು ಯಾವುದೇ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ,’ ಎಂದು ದೂರಿದ್ದಾರೆ.