ಬೆಂಗಳೂರು[ಜೂ.27]: ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಅನುಭವಿಸಲು ಜೆಡಿಎಸ್‌ ಜೊತೆಗಿನ ಚುನಾವಣಾ ಪೂರ್ವ ಮೈತ್ರಿಯೇ ಮುಖ್ಯ ಕಾರಣ. ಹೀಗಾಗಿ ಚುನಾವಣೆ ಮೈತ್ರಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಇಲ್ಲದಿದ್ದರೆ ಕಾಂಗ್ರೆಸ್‌ ಸ್ಥಿತಿ ಮತ್ತಷ್ಟುಅಧೋಗತಿಗೆ ಇಳಿಯಲಿದೆ ಎಂದು ಕಾಂಗ್ರೆಸ್‌ನ ಪರಾಜಿತ ಲೋಕಸಭಾ ಅಭ್ಯರ್ಥಿಗಳು ಒಕ್ಕೊರಲ ಅಭಿಪ್ರಾಯ ಮಂಡಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್‌ ಅಭ್ಯರ್ಥಿಗಳೊಂದಿಗೆ ನಡೆಸಿದ ಸೋಲಿನ ಪರಾಮರ್ಶೆ ಸಭೆಯಲ್ಲಿ ಅಭ್ಯರ್ಥಿಗಳು ಜೆಡಿಎಸ್‌ ಪಕ್ಷದ ಧೋರಣೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಪೂರ್ವ ಮೈತ್ರಿ ಪಕ್ಷ ತೆಗೆದುಕೊಂಡ ಕೆಟ್ಟನಿರ್ಣಯ. ಜೆಡಿಎಸ್‌ ಅಭ್ಯರ್ಥಿಗಳು ಕಣದಲ್ಲಿ ಇದ್ದಿದ್ದರೆ ಮತ ವಿಭಜನೆ ಆಗುತ್ತಿತ್ತು. ಈ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಲಾಭ ಆಗುತ್ತಿತ್ತು. ಹಳೆ ಮೈಸೂರಿನ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಡುವೆಯೇ ಕಠಿಣ ಸ್ಪರ್ಧೆ ಇತ್ತು. ಇಂತಹ ಕಡೆಗಳಲ್ಲಿ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾರ್ಯಕರ್ತರು ಮೈತ್ರಿ ಧರ್ಮ ಪಾಲನೆ ಮಾಡದೆ ಬಿಜೆಪಿಗೆ ಅನುಕೂಲ ಮಾಡಿಕೊಡುವಂತಾಯಿತು. ಬಿಜೆಪಿಯ ಗೆಲುವಿಗೆ ಮೋದಿ ಅಲೆಗಿಂತ ಮೈತ್ರಿ ಮಾಡಿಕೊಂಡ ನಿರ್ಧಾರವೂ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರದಿಂದ ಕಾಂಗ್ರೆಸ್‌ಗೆ ನಷ್ಟ:

ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಹಾಗೂ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ ನಾಯಕರ ಆಂತರಿಕ ಸಮಸ್ಯೆಗಳು ಸಹ ಪಕ್ಷದ ಸೋಲಿನಲ್ಲಿ ಪ್ರಮುಖ ಪಾತ್ರ ಪೋಷಿಸಿವೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಿಗಿದ್ದ ನಕಾರಾತ್ಮಕ ಅಭಿಪ್ರಾಯವು ಲೋಕಸಭೆ ಚುನಾವಣೆ ಮತದಾನದ ವೇಳೆಯೂ ವ್ಯಕ್ತವಾಗಿದೆ. ಜತೆಗೆ ಕಾಂಗ್ರೆಸ್‌ ಶಾಸಕರು ಇದ್ದ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್‌ಗೆ ಲೀಡ್‌ ತರಿಸಿಕೊಡುವಲ್ಲಿ ವಿಫಲವಾಗಿದ್ದೇವೆ. ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಬಹಿರಂಗವಾಗಿಯೇ ಕಾಂಗ್ರೆಸ್ಸಿನ ಕೆಲ ಮುಖಂಡರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಸಹ ಇದಕ್ಕೆ ಕಾರಣ. ಜತೆಗೆ ನರೇಂದ್ರ ಮೋದಿ ಅಲೆಯನ್ನು ಸಮರ್ಥವಾಗಿ ಎದುರಿಸುವ ನಾಯಕತ್ವದಲ್ಲಿ ನಾವು ಎಡವಿದ್ದೇವೆ ಎಂದು ದೂರಿದ್ದಾರೆ.

ಸಮ್ಮಿಶ್ರ ಸರ್ಕಾರ ಮುಂದುವರೆದರೆ ಕಾಂಗ್ರೆಸ್‌ಗೆ ತೀವ್ರ ನಷ್ಟಉಂಟಾಗಲಿದೆ. ಹಳೆ ಮೈಸೂರಿನಲ್ಲಿ ಬೇರೂರಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಇದಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ವರದಾನವಾಗಿ ಪರಿಣಮಿಸುತ್ತಿದೆ. ಬದ್ಧ ವೈರಿಗಳಂತಿದ್ದ ಎರಡೂ ಪಕ್ಷ ಒಂದಾಗಿರುವುದರಿಂದ ಎರಡೂ ಪಕ್ಷಗಳಲ್ಲಿನ ಅತೃಪ್ತರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆ ಎನ್ನುವುದನ್ನು ಪಕ್ಷ ಈಗಲಾದರೂ ಗುರುತಿಸಬೇಕು. ಸಮ್ಮಿಶ್ರ ಸರ್ಕಾರ ಮುಂದುವರೆದಷ್ಟೂಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಅರಿಯಬೇಕು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇವಿಎಂ ವಿರುದ್ಧ ಜನಾಂದೋಲನ:

ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಮಾತನಾಡಿ, ಇವಿಎಂ ವಿಚಾರದಲ್ಲಿ ಕಾಂಗ್ರೆಸ್‌ ಜನಾಂದೋಲನ ರೂಪಿಸಬೇಕು ಎಂದು ಒತ್ತಾಯಿಸಿದರು. ಇವಿಎಂ ವಿಚಾರದಲ್ಲಿ ಯಾರಿಗೂ ವಿಶ್ವಾಸ ಇಲ್ಲ. ಈ ವಿಚಾರದಲ್ಲಿ ಬ್ರಿಟನ್‌ನಲ್ಲಿ ಆದ ಜನಾಂದೋಲನ ರೀತಿಯಲ್ಲಿ ಕಾಂಗ್ರೆಸ್‌ ಹೋರಾಟ ಕೈಗೊಳ್ಳಬೇಕು ಹೇಳಿದರು.