ತೆಲಂಗಾಣದಲ್ಲಿ ಜಗ್ತಿಯಾಲ್ ಜಿಲ್ಲೆಯ ಕೊರುತ್ಲಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ‘ಒಂದು ವೇಳೆ ಆಯ್ಕೆಯಾದ ಬಳಿಕ ಭರವಸೆ ಈಡೇರಿಸದೇ ಇದ್ದರೆ ಅದೇ ಚಪ್ಪಲಿಯಿಂದ ಹೊಡೆಯಿರಿ’ ಎಂದು ಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ.
ಹೈದರಾಬಾದ್[ನ.24]: ಚುನಾವಣೆಯಲ್ಲಿ ಅಭ್ಯರ್ಥಿಗಳು ಜನರಿಗೆ ಹಣ, ಸೀರೆ, ಕುಕ್ಕರ್ ಮತ್ತಿತರ ವಸ್ತುಗಳನ್ನು ಹಂಚುವುದು ಸಾಮಾನ್ಯ. ಆದರೆ, ತೆಲಂಗಾಣದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತದಾರರಿಗೆ ಚಪ್ಪಲಿ ಹಂಚಿ, ‘ಒಂದು ವೇಳೆ ಆಯ್ಕೆಯಾದ ಬಳಿಕ ಭರವಸೆ ಈಡೇರಿಸದೇ ಇದ್ದರೆ ಅದೇ ಚಪ್ಪಲಿಯಿಂದ ಹೊಡೆಯಿರಿ’ ಎಂದು ಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ.
ಜಗ್ತಿಯಾಲ್ ಜಿಲ್ಲೆಯ ಕೊರುತ್ಲಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಕುಲಾ ಹನುಮಂತ ಅವರ ಪ್ರಚಾರದ ವಿಡಿಯೋ ಇದೀಗ ವೈರಲ್ ಆಗಿದೆ. ಪಾಂಪ್ಲೆಟ್‌ಗಳ ಜತೆಗೆ ಕೈಯಲ್ಲಿ ಸ್ಲಿಪ್ಪರ್ ಹಿಡಿದು ಹನುಮಂತ್ ಪ್ರಚಾರ ಕೈಗೊಂಡಿದ್ದಾರೆ. ಮತದಾರರ ಕೈಗೆ ಚಪ್ಪಲಿ ಕೊಟ್ಟು ಒಂದು ವೇಳೆ ತಾನು ಹೇಳಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇದ್ದರೆ ಅದೇ ಚಪ್ಪಲಿಯಿಂದ ಸಾರ್ವಜನಿಕವಾಗಿ ಹೊಡೆಯಿರಿ ಎಂದು ಕೇಳಿಕೊಂಡಿದ್ದಾರೆ.
ಕೊರುತ್ಲಾ ಕ್ಷೇತ್ರದಿಂದ ಟಿಆರ್‌ಎಸ್ ಹಿರಿಯ ಮುಖಂಡ ಹಾಗೂ ಶಾಸಕ ವಿದ್ಯಾಸಾಗರ್ ರಾವ್ ಸ್ಪರ್ಧಿಸಿದ್ದು, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
