Asianet Suvarna News Asianet Suvarna News

ಅಡಿಕೆ ಕ್ಯಾನ್ಸರ್‌ ಕಾರಕ : ಮತ್ತೆ ಎದ್ದುಕೂತ ನಿಷೇಧದ ಗುಮ್ಮ

ಮತ್ತೆ ಅಡಿಕೆ ಬೆಳೆಗಾರರಿಗೆ ಆತಂಕ ಒಂದು ಎದುರಾಗಿದೆ. ಮತ್ತೆ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಹೇಳಿಕೆ ಕೇಂದ್ರ ಸರ್ಕಾರದಿಂದ ಹೊರಬಿದ್ದಿದೆ.

Cancer Risk in Arecanut Says union govt
Author
Bengaluru, First Published Jul 15, 2019, 10:01 AM IST

ಶಿವಮೊಗ್ಗ/ಮಂಗಳೂರು [ಜು.15]: ಈಗಾಗಲೇ ಕೊಳೆರೋಗ, ದರ ಕುಸಿತದಿಂದ ಕಂಗಾಲಾಗಿರುವ ಅಡಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ಮತ್ತೆ ‘ಅಡಕೆ ಕ್ಯಾನ್ಸರ್‌ ಕಾರಕ’ ಎಂದು ಹೇಳಿರುವುದು ಆತಂಕ ಮೂಡಿಸಿದೆ.

ಅಡಕೆಯಲ್ಲಿ ಹಾನಿಕಾರಕ ಅಂಶಗಳಿವೆ ಎಂದು ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈ ಹಿಂದೆಯೇ ಅಫಿಡವಿಟ್‌ ಸಲ್ಲಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದಾಗ ಅಡಕೆ ನಿಷೇಧದ ಗುಮ್ಮದಿಂದ ಅಡಕೆ ಬೆಳೆಗಾರರು ಪಾರಾಗಿದ್ದರು. ಆದರೆ, ಹೊಸದಾಗಿ ನಡೆದ ಅಧ್ಯಯನವೊಂದು ಅಡಕೆಯಲ್ಲಿ ಯಾವುದೇ ಹಾನಿಕಾರ ಅಂಶಗಳಿಲ್ಲ ಎಂದು ಹೇಳಿದ್ದರೂ ಸರ್ಕಾರ ಮತ್ತೊಮ್ಮೆ ಅಡಕೆ ಕ್ಯಾನ್ಸರ್‌ ಕಾರಕ ಎಂದು ಲೋಕಸಭೆಯಲ್ಲಿ ಹೇಳಿರುವುದು ಬೆಳೆಗಾರರಲ್ಲಿ ಆಘಾತ ಮೂಡಿಸಿದೆ.

ಗುಜರಾತ್‌ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅವರು, ಅಡಕೆ ಕ್ಯಾನ್ಸರ್‌ ಕಾರಕ. ಅಡಕೆ ದೇಹದ ವಿವಿಧ ಅಂಗಗಳ ಮೇಲೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳೇ ಹೇಳಿವೆ ಎಂದಿದ್ದಾರೆ. ಅಚ್ಚರಿಯೆಂದರೆ ಅಡಕೆಯಿಂದ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) 2019 ಫೆಬ್ರವರಿಯಲ್ಲೇ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಇಷ್ಟಾದರೂ ಆರೋಗ್ಯ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ.

ಅಫಿಡವಿಟ್‌ ಸಲ್ಲಿಸಿತ್ತು : 2011ರಲ್ಲಿ ಯುಪಿಎ ಸರ್ಕಾರ ಅಡಕೆಯಲ್ಲಿ ಹಾನಿಕಾರಕ ಅಂಶಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್‌ ಸಲ್ಲಿಸಿತ್ತು. ಆಗ ಅಡಕೆ ನಿಷೇಧದ ಗುಮ್ಮ ಎದ್ದು ಕುಳಿತಿತ್ತು. ಇದರಿಂದ ಅಡಕೆ ಬೆಳೆಗಾರರು ತೀವ್ರ ಕಂಗಾಲಾಗಿ ಪ್ರತಿಭಟನೆಗೆ ಇಳಿದಿದ್ದರು. ರೈತರ ಪ್ರತಿಭಟನೆಗೆ ಹೆದರಿದ ಸರ್ಕಾರ ಅಡಕೆ ನಿಷೇಧಿಸುವುದಿಲ್ಲ ಎಂಬ ಭರವಸೆ ನೀಡಿತ್ತು.

ಆದರೆ, 2017 ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಅಡಕೆ ಕುರಿತಾದ ಪ್ರಶ್ನೆಗೆ ಪುನಃ ಆಗಿನ ಬಿಜೆಪಿ ಸರ್ಕಾರದ ಕೇಂದ್ರ ಆರೋಗ್ಯ ಸಚಿವರಾದ ಅನುಪ್ರಿಯಾ ಪಟೇಲ್‌ ಅಡಕೆಯಿಂದ ಮನುಷ್ಯನ ದೇಹಕ್ಕೆ ಹಾನಿಕಾರಕ ಎಂದು ಪುನರುಚ್ಚರಿಸಿದ್ದರು. ಇದು ಪುನಃ ವಿವಾದಕ್ಕೆ ಕಾರಣವಾಗಿತ್ತು.

ತಜ್ಞರ ಸಮಿತಿಯಿಂದ ಅಧ್ಯಯನ: ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಾಸರಗೋಡಿನ ಸಿಪಿಸಿಆರ್‌ಐ ಸೇರಿದಂತೆ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ತಜ್ಞರನ್ನು ಒಳಗೊಂಡ ಸಮಿತಿ ನೇಮಿಸಿತ್ತು. ಈ ಸಮಿತಿ 2019ರ ಫೆಬ್ರವರಿಯಲ್ಲಿ ಸಿಪಿಸಿಆರ್‌ಐ ನಿರ್ದೇಶಕರಾಗಿದ್ದ ಡಾ.ಚೌಡಪ್ಪ ನೇತೃತ್ವದಲ್ಲಿ ಅಂತಿಮ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಸರ್ಕಾರ ಇನ್ನೂ ಅದನ್ನು ಪರಿಶೀಲಿಸಿಯೇ ಇಲ್ಲ.

 

2011ರ ಹಳೆಯ ಉತ್ತರವನ್ನೇ ಕೇಂದ್ರ ಸಚಿವರು ನೀಡಿದ್ದಾರೆ. ಆ ಬಳಿಕ 2019ರಲ್ಲಿ ಕಾಸರಗೋಡಿನ ಸಿಪಿಸಿಆರ್‌ಐ ಸಂಸ್ಥೆ ಅಡಕೆ ಬಗ್ಗೆ ಅಧ್ಯಯನ ನಡೆಸಿ ಆರೋಗ್ಯಕ್ಕೆ ಪೂರಕ ಎಂಬ ವರದಿ ನೀಡಿದೆ. ಈ ವರದಿಯನ್ನು ಸಿಪಿಸಿಆರ್‌ಐ ನಿರ್ದೇಶಕರಾಗಿದ್ದ ಡಾ.ಚೌಡ್ಪಪ್ಪ ಅವರು ಕೇಂದ್ರ ಆರೋಗ್ಯ ಇಲಾಖೆಗೆ ಸಲ್ಲಿಸಿದ್ದಾರೆ. ಈ ಪರ್ಕಿಷ್ಕೃತ ವರದಿ ಇನ್ನೂ ಕೇಂದ್ರ ಸರ್ಕಾರದ ಕಡತ ಸೇರಿಲ್ಲದ ಕಾರಣ ಈ ರೀತಿ ತಪ್ಪು ಉತ್ತರವನ್ನು ನೀಡಲಾಗಿದೆ.

-ಎಸ್‌.ಆರ್‌.ಸತೀಶ್ಚಂದ್ರ, ಅಧ್ಯಕ್ಷ, ಕ್ಯಾಂಪ್ಕೋ

Follow Us:
Download App:
  • android
  • ios