ವಾಷಿಂಗ್ಟನ್(ಮಾ.30): ಅಮೆರಿಕ-ಮೆಕ್ಸಿಕೋ ನಡುವೆ ಬೃಹತ್ ಗೋಡೆ ನಿರ್ಮಿಸುವುದಾಗಿ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದವಡೆಗಳು ಅದೇಕೊ ನೋಯಿಸತೊಡಗಿವೆ. 

ತಾವು ಕಟ್ಟಬೇಕೆಂದಿದ್ದ ಕಾಂಕ್ರೀಟ್ ಗೋಡೆಯ ಜಾಗದಲ್ಲೇ ಕಲಾವಿದನೋರ್ವ ಬೆಣ್ಣೆಯ ಗೋಡೆ ಕಟ್ಟುತ್ತಿರುವುದೇ ಟ್ರಂಪ್ ದವಡೆ ನೋವಿಗೆ ಕಾರಣ. ಇದು ಬೆಣ್ಣೆಯ ಆಸೆಗಾಗೋ ಅಥವಾ ಕಲಾವಿದನೋರ್ವನ ವ್ಯಂಗ್ಯಕ್ಕೆ ಬಲಿಯಾಗಿದ್ದಕ್ಕೋ ಎಂಬುದು ಕಾಲವೇ ನಿರ್ಧರಿಸಲಿದೆ.

ಕ್ಯಾಲಿಫೋರ್ನಿಯಾ ಬಳಿಯ ಟೆಕೆಟೆ ಯುಎಸ್-ಮೆಕ್ಸಿಕೋ ಗಡಿಯಲ್ಲಿ ಕೆನಡಾದ ಕಲಾವಿದ ಕೋಸಿಮೊ ಕವಲಾರೋ, ವಾಯ್ದೆ ಮುಗಿದಿರುವ ಬೆಣ್ಣೆ ಪ್ಯಾಕೆಟ್‌ಗಳ ಗೋಡೆ ನಿರ್ಮಿಸುತ್ತಿದ್ದಾರೆ. ಮೆಕ್ಸಿಕೋದಲ್ಲಿ ಬಳಕೆಯಾಗದೆ ಅವಧಿ ಮುಗಿದಿರುವ ಬೆಣ್ಣೆಗಳ ಪ್ಯಾಕೆಟ್‌ಗಳನ್ನು ಇಟ್ಟಿಗೆಯಂತೆ ಒಂದರ ಮೇಲೊಂದರಂತೆ ಜೋಡಿಸಿ ಸುಮಾರು 5 ಅಡಿ ಎತ್ತರದ ಗೋಡೆ ನಿರ್ಮಿಸಿದ್ದಾರೆ.

ಇದೇ ವೇಳೆ ಬೆಣ್ಣೆಯ ಗೋಡೆ ನಿರ್ಮಾಣಕ್ಕೆ ಟ್ರಂಪ್ ಸಹಾಯ ಬೇಡಿರುವ ಕವಲಾರೋ, ಆರ್ಥಿಕ ಸಹಾಯದ ಮೂಲಕ ಮತ್ತಷ್ಟು ಬೆಣ್ಣೆ ಖರಿದೀಸಲು ಸಹಾಯ ಮಾಡಲಿ ಅಥವಾ ಅವರೇ ಬೆಣ್ಣೆ ಇಟ್ಟಿಗೆಗಳನ್ನು ಕಳಿಸಿಕೊಡಲಿ ಎಂದು ಮಾರ್ಮಿಕವಾಗಿ ಮನವಿ ಮಾಡಿದ್ದಾರೆ.

ಕಾಂಕ್ರೀಟ್ ಗೋಡೆಗಳನ್ನು ಕಟ್ಟುವ ಮೂಲಕ ಬಿಲಿಯನ್ ಡಾಲರ್‌ಗಟ್ಟಲೇ ಹಣ ಖರ್ಚು ಮಾಡುವ ಬದಲು ಗೋಡೆ ನಿರ್ಮಾಣದ ಮೂಲಕ ಜನರನ್ನು ದೂರ ಮಾಡುವ ಬದಲು, ಬೆಣ್ಣೆ ಗೋಡೆ ಕಟ್ಟುವ ಮೂಲಕ ಜನರನ್ನು ಹತ್ತಿರ ತರುವ ಕಾರ್ಯಕ್ಕೆ ಟ್ರಂಪ್ ಬೆಂಬಲಿಸಲಿದ್ದಾರೆ ಎಂಬ ಭರವಸೆ ಇದೆ ಅಂತಾರೆ ಕವಲಾರೋ.

#GoFundMe ಎಂಬ ಅಭಿಯಾನ ಆರಂಭಿಸಿರುವ ಕವಲಾರೋ, ಅಮೆರಿಕ-ಮೆಕ್ಸಿಕೋ ನಡುವೆ ಸುಮಾರು 300 ಮೀ. ಉದ್ದದ 5 ಅಡಿ ಎತ್ತರದ ಬೆಣ್ಣೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ಮಾನವೀಯತೆ ಮನುಕುಲದ ಉಳಿವಿಗಿರುವ ಏಕೈಕ ಸಾಧನ ಎಂಬುದನ್ನು ಸಾರುವುದು ತಮ್ಮ ಕಾರ್ಯದ ಹಿಂದಿನ ಉದ್ದೇಶ ಎಂದು ಕವಲಾರೋ ಹೇಳಿದ್ದಾರೆ.