ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಹಿಂಸಾಚಾರ ನಡೆಯುತ್ತದೆ. ಆದ್ದರಿಂದ ನಾವು ಹಿಂದಕ್ಕೆ ಸರಿಯಬೇಕು ಎಂದು ಪ್ರಗತಿಪರರು ಹೇಳುತ್ತಿದ್ದಾರೆ. ಹಾಗಾದರೆ ನಿತ್ಯ ಹಿಂಸಾಚಾರ ನಡೆಯುತ್ತಿದೆ ಎಂದು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡುವುದಕ್ಕೆ ಆಗುತ್ತದೆಯೇ? ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ.
ಉಡುಪಿ (ಜು.08): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಹಿಂಸಾಚಾರ ನಡೆಯುತ್ತದೆ. ಆದ್ದರಿಂದ ನಾವು ಹಿಂದಕ್ಕೆ ಸರಿಯಬೇಕು ಎಂದು ಪ್ರಗತಿಪರರು ಹೇಳುತ್ತಿದ್ದಾರೆ. ಹಾಗಾದರೆ ನಿತ್ಯ ಹಿಂಸಾಚಾರ ನಡೆಯುತ್ತಿದೆ ಎಂದು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡುವುದಕ್ಕೆ ಆಗುತ್ತದೆಯೇ? ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ.
ಶುಕ್ರವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಸಂಘಟನೆಯು, ಪೇಜಾವರ ಶ್ರೀಗಳು ನೇತೃತ್ವ ವಹಿಸಿರುವ ರಾಮಮಂದಿರ ನಿರ್ಮಾಣ ಚಳವಳಿಯ ಹಿಂಸಾಚಾರಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ. ಪೇಜಾವರ ಶ್ರೀಗಳು ಇಫ್ತಾರ್ ಕೂಟದ ಮೂಲಕ ಸೌಹಾರ್ದ ಬಯಸುವುದಾದರೆ ರಾಮಮಂದಿರ ನಿರ್ಮಾಣದ ನೇತೃತ್ವವನ್ನು ಕೈಬಿಡಬೇಕು ಎಂದು ಆಗ್ರಹಿಸಿತ್ತು. ಇದಕ್ಕೆ ಶ್ರೀಗಳು ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೆ ಶನಿವಾರ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿ, ರಾಮಮಂದಿರ ನಿರ್ಮಾಣವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿದೆ. ಕೋರ್ಟ್‌ನ ತೀರ್ಪನ್ನು ಜನರೂ, ಸಂತರೂ ಒಪ್ಪಿದ್ದಾರೆ. ಆದ್ದರಿಂದ ರಾಮಮಂದಿರ ನಿರ್ಮಾಣ ವಿವಾದವೇ ಬಗೆಹರಿದಿದೆ. ಹಾಗಿರುವಾಗ ಈಗ ಹಿಂಸೆ ಆಗುತ್ತದೆ ಎಂದು ಪ್ರಗತಿಪರರು ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಶ್ರೀಗಳು ತಿಳಿಸಿದರು.
ರಾಮಮಂದಿರ ನಿರ್ಮಾಣದ ಬಗ್ಗೆ ಭಿನ್ನಮತ ಇದೆ. ಆದರೆ ಭಿನ್ನಮತವನ್ನು ಹಿಂಸೆಯಿಂದ ಪರಿಹಾರ ಮಾಡುವುದಕ್ಕಾಗುವುದಿಲ್ಲ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಇತರ ಮತೀಯರ ಜೊತೆಗೆ ಸೌಹಾರ್ದದಿಂದ ಭಿನ್ನಮತವನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಿದೆ. ನಾವು ಯಾವತ್ತೂ ಹಿಂಸೆಯನ್ನು ಪ್ರಚೋದಿಸಿಲ್ಲ. ಆದರೆ ನಮ್ಮ ಹಕ್ಕನ್ನು ಬಿಡುವುದಕ್ಕೂ ತಯಾರಿಲ್ಲ. ಅದೇ ಕಾರಣಕ್ಕೆ ನಾವು ಈಗ ಶಾಂತಿ ಸೌಹಾರ್ದಕ್ಕಾಗಿ ಇಫ್ತಾರ್ ಮಾಡಬಾರದು ಎನ್ನುವುದರಲ್ಲಿ ಅರ್ಥವೇ ಇಲ್ಲ. ಪ್ರಗತಿಪರರಿಗೆ ನನ್ನ ಪಾಲಿಸಿಯೇ ಅರ್ಥವಾಗುತ್ತಿಲ್ಲ ಎಂದು ಶ್ರೀಗಳು ಬೇಸರಿಸಿದರು.
ನಾವು ಸಂಪೂರ್ಣ ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡಬೇಕು ಎಂದೂ ಹೇಳಿಲ್ಲ. ಆದರೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಬಹುಸಂಖ್ಯಾತರಿಗೆ ಪ್ರತ್ಯೇಕ ನ್ಯಾಯ ಇರಬಾರದು. ಎಲ್ಲರಿಗೂ ಸಮಾನ ನಾಗರಿಕ ಹಕ್ಕುಗಳು ಬೇಕು. ಆದರೆ ಬಾಂಗ್ಲಾದಿಂದ, ಪಾಕಿಸ್ತಾನದಿಂದ ವಲಸೆ ಬಂದವರಿಗೆ ಯಾವುದೇ ಹಕ್ಕು ನೀಡಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಪೇಜಾವರ ಶ್ರೀಗಳು ಸ್ಪಷ್ಟ ಪಡಿಸಿದರು.
