37 ಸಾವಿರ ಎಕರೆ ವ್ಯಾಪ್ತಿಯ ಬೆಳ್ಳಂದೂರು ಕೆರೆಯಿಂದ ಇಡೀ ಬೆಂಗಳೂರಿಗೆ ಆಗುವಷ್ಟು ವಿದ್ಯುತ್ ಮತ್ತು ನೀರನ್ನು ಉತ್ಪಾದಿಸಬಹುದಂತೆ.

ಬೆಂಗಳೂರು(ಮಾ. 27): ಬೆಳ್ಳಂದೂರು ಕೆರೆ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಕಲುಷಿತ ನೀರಿನಿಂದ ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪರಿಸರವಾದಿಗಳು ಆರೋಪಿಸುತ್ತಾರೆ. ಕೆರೆಯ ನೀರಿನಲ್ಲಿರುವ ರಾಸಾಯನಿಕಗಳಿಂದಾಗಿ ಬೆಂಕಿ ಹೊತ್ತಿ ಉರಿಯುವ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿದೆ. ಕೆರೆಯನ್ನು ಹೇಗಪ್ಪಾ ಶುದ್ಧೀಕರಿಸುವುದು ಎಂದು ತಲೆ ಮೇಲೆ ಕೈಹೊತ್ತ ಸರಕಾರದ ಮುಂದೆ ಅನೇಕ ದೇಶಗಳ ಕಂಪನಿಗಳು ವಿವಿಧ ಯೋಜನೆಗಳನ್ನು ಮುಂದಿಟ್ಟಿವೆ. ಬ್ರಿಟನ್, ಇಸ್ರೇಲ್, ಜರ್ಮನಿಯಂಥ ದೇಶಗಳಿಂದ ಕಂಪನಿಗಳು ಬೆಳ್ಳಂದೂರು ಕೆರೆಯ ಮೇಲೆ ವಿಪರೀತ ಆಸಕ್ತಿ ತೋರಿಸಿವೆ. ಇಂಧನ ಸಚಿವ ಡಿಕೆ ಶಿವಕುಮಾರ್ ಜೊತೆ ಈಗಾಗಲೇ ಹಲವು ಯೋಜನೆಗಳ ಪ್ರಸ್ತಾಪಗಳನ್ನು ಮುಂದಿಟ್ಟಿವೆ.

ಬೆಳ್ಳಂದೂರು ಕೆರೆಯಲ್ಲಿ ಅಂಥದ್ದೇನಿದೆ?
ಹೆಚ್'ಎಎಲ್ ವಿಮಾನ ನಿಲ್ದಾಣದ ಸಮೀಪವಿರುವ ಬೆಳ್ಳಂದೂರು ಕೆರೆಯಲ್ಲಿ ಪ್ರತೀ ದಿನ ಬರೋಬ್ಬರಿ 50 ಕೋಟಿ ಲೀಟರ್'ಗಳಷ್ಟು ಚರಂಡಿ ನೀರು ಹರಿದುಬರುತ್ತದೆ. ಕೊಳಚೆ ನೀರಿನ ಜೊತೆಗೆ ವಿವಿಧ ಫ್ಯಾಕ್ಟರಿಗಳಿಂದ ರಾಸಾಯನಿಕಗಳೂ ಜೊತೆಗೂಡುತ್ತವೆ. ಹಲವು ವರ್ಷಗಳಿಂದ ಅಗಣಿತ ಪ್ರಮಾಣದಲ್ಲಿ ಕೊಳಚೆ ನೀರು ಸಂಗ್ರಹಗೊಂಡು ಕ್ಲೋಬೆ(Ferment)ಯಾಗಿದೆ. ಇದು ಅಸಾಧಾರಣ ಸಂಪನ್ಮೂಲಗಳ ಗಣಿಯಂತೆ. ಇದನ್ನು ವಿಶ್ವದ ಅತಿದೊಡ್ಡ ಇಂಧನ ನಿಕ್ಷೇಪಗಳಲ್ಲೊಂದಾಗಿಸಬಹುದು.

ದೆಹಲಿಯ ಎಜಿ ಡಾಟರ್ಸ್(AG Dauters) ಎಂಬ ಸಂಸ್ಥೆಯ ಎಂಡಿ ಅಜಯ್ ಗಿರೋಟ್ರಾ ಹೇಳಿಕೊಳ್ಳುವ ಪ್ರಕಾರ, 37 ಸಾವಿರ ಎಕರೆ ವ್ಯಾಪ್ತಿಯ ಬೆಳ್ಳಂದೂರು ಕೆರೆಯಿಂದ ಇಡೀ ಬೆಂಗಳೂರಿಗೆ ಆಗುವಷ್ಟು ವಿದ್ಯುತ್ ಮತ್ತು ನೀರನ್ನು ಉತ್ಪಾದಿಸಬಹುದಂತೆ. ಬರೀ ಬೆಂಗಳೂರಿಗಷ್ಟೇ ಅಲ್ಲ, ಕೋಲಾರದಂಥ ನೀರಿನ ಅಭಾವವಿರುವ ಜಿಲ್ಲೆಗಳಿಗೂ ವಿದ್ಯುತ್ ಮತ್ತು ನೀರನ್ನು ಸರಬರಾಜು ಮಾಡಬಹುದೆನ್ನಲಾಗಿದೆ. ಈ ಕೆರೆಯಲ್ಲಿ ಪ್ರತೀ ದಿನ 5 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎನ್ನುತ್ತಾರೆ ಗಿರೋಟ್ರಾ.

ಕೆರೆಯಿಂದ ಸಾಧ್ಯತೆಗಳು(ದಿನವೊಂದಕ್ಕೆ):
* 5 ಸಾವಿರ ಮೆಗಾವ್ಯಾಟ್ ವಿದ್ಯುತ್
* 25 ಕೋಟಿ ಲೀಟರ್ ಪರಿಶುದ್ಧ ನೀರು
* 20 ಕೋಟಿ ಇಂಧನ

ಮೇಲೆ ತಿಳಿಸಿರುವ ಇಂಧನವನ್ನು ಸಿಎನ್'ಜಿ, ಡೀಸೆಲ್ ಮತ್ತು ಏವಿಯೇಷನ್ ಟರ್ಬೋ ಫುಯೆಲ್(ಎಟಿಎಫ್) ರೂಪದಲ್ಲಿ ಪಡೆಯಲು ಸಾಧ್ಯವಂತೆ. ಇದರಿಂದ ಉತ್ಪಾದಿಸುವ ಡೀಸೆಲ್ ಯಾವುದೇ ಮಾಲಿನ್ಯಕಾರಕವಿಲ್ಲದೇ ಪರಿಶುದ್ಧತೆಯಿಂದ ಕೂಡಿರುತ್ತದೆ ಎಂಬುದು ವಿಶೇಷ.

ಅತ್ಯಾಧುನಿಕ ತಂತ್ರಜ್ಞಾನ:
ಎಜಿ ಡಾಟರ್ಸ್ ಸಂಸ್ಥೆಯು ಬೆಳ್ಳಂದೂರು ಕೆರೆಯ ಶುದ್ಧೀಕರಣಕ್ಕೆ ಪ್ಲಾಸ್ಮಾ ಗ್ಯಾಸಿಫಿಕೇಶನ್ ಎಂಬ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನವನ್ನು ಬಳಸಲಿದೆ. ಕೆರೆಯ ಕೊಳಕು ನೀರಿನಿಂದ ವಿದ್ಯುತ್, ನೀರು ಹಾಗೂ ಇಂಧನವನ್ನು ಉತ್ಪಾದಿಸಲಾಗುತ್ತದೆ. ಕೊನೆಯಲ್ಲಿ ಯಾವುದೂ ಇಲ್ಲಿ ನಿರುಪಯುಕ್ತವಾಗಿ ಹೊರಹೋಗುವುದಿಲ್ಲವೆನ್ನುವುದು ವಿಶೇಷ.

ಸರ್ಕಾರದ ಮುಂದೆ ಕಂಪನಿ ಕಂಡೀಷನ್ಸ್:
* ಕೆರೆಯಲ್ಲಿನ ಎರಡು ಒಳ ಹರಿವಿನ ಜಾಗದಲ್ಲಿ 2 ಎಕರೆ ಪ್ರದೇಶವನ್ನು ಕಂಪನಿಗೆ ನೀಡಬೇಕು
* ಕಂಪನಿ ಉತ್ಪಾದಿಸುವ ನೀರು, ವಿದ್ಯುತ್ ಮತ್ತು ಇಂಧನವನ್ನು ಸರಕಾರ ಖರೀದಿಸುತ್ತೇವೆಂದು ಒಪ್ಪಂದ ಮಾಡಿಕೊಳ್ಳಬೇಕು

ಇವೆರಡು ಪ್ರಮುಖ ಷರತ್ತುಗಳಿಗೆ ಸರಕಾರ ಒಪ್ಪಿಕೊಂಡಲ್ಲಿ, ಎಜಿ ಡಾಟರ್ಸ್ ಸಂಸ್ಥೆಯು 40 ಸಾವಿರ ಕೋಟಿ ವೆಚ್ಚದಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಲಿದೆ. 10 ತಿಂಗಳ ಬಳಿಕ ಈ ಘಟಕಗಳು ಕಾರ್ಯನಿರ್ವಹಿಸಲು ಆರಂಭಿಸುತ್ತವಂತೆ.

ಬೆಳ್ಳಂದೂರು ಕೆರೆಯಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಲು ಅನೇಕ ಕಂಪನಿಗಳು ಸರಕಾರದೊಂದಿಗೆ ಮಾತುಕತೆ ನಡೆಸಿವೆ. ಆದರೆ, ಎಜಿ ಡಾಟರ್ಸ್ ಸಂಸ್ಥೆಯಷ್ಟು ಆಸಕ್ತಿಕಾರಕ ವಿಚಾರಗಳು ಹಾಗೂ ಕಾರ್ಯಗಳ ಬಗ್ಗೆ ಬೇರಾವ ಕಂಪನಿಗಳು ಪ್ರಸ್ತಾಪಿಸಿರುವುದು ವರದಿಯಾಗಿಲ್ಲ.