ಚಿಕ್ಕಮಗಳೂರು[ಆ.26]: ಕೆಫೆ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ ಹೆಗ್ಡೆ ಅವರ ತಂದೆ ಎಸ್‌.ವಿ. ಗಂಗಯ್ಯ ಹೆಗ್ಡೆ (96) ಭಾನುವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದೊಂದು ತಿಂಗಳಿನಿಂದ ಗಂಗಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋಮಾದಲ್ಲಿದ್ದ ಗಂಗಯ್ಯ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಕಾರಿಯಾಗದೇ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

ಪುತ್ರ, ಉದ್ಯಮಿ ಸಿದ್ಧಾರ್ಥ ಹೆಗ್ಡೆ ಸಾವಿನ ವಿಚಾರವೂ ತಂದೆಗೆ ತಿಳಿದಿರಲಿಲ್ಲ. ಸೋಮವಾರ ಮಧ್ಯಾಹ್ನ 1 ಗಂಟೆಗೆ ಚೇತನಹಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಸಿದ್ಧಾರ್ಥ ಹೆಗ್ಡೆ ಸಮಾಧಿ ಬಳಿ ತಂದೆ ಎಸ್‌.ವಿ. ಗಂಗಯ್ಯ ಹೆಗ್ಡೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ಮೂಡಿಗೆರೆ ತಾಲುಕು ಕಳಸ ಹೋಬಳಿಯ ತನೂಡಿ ಗ್ರಾಮದ ವೀರಪ್ಪ ಹೆಗ್ಡೆ ಶೇಷಮ್ಮ ಹೆಗ್ಗಡತಿ ದಂಪತಿ ಪುತ್ರರಾಗಿ 1924 ರಲ್ಲಿ ಫೆ.6ರಂದು ಗಂಗಯ್ಯ ಹೆಗ್ಡೆ ಜನಿಸಿದರು. ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಮಾಧ್ಯಮಿಕ ಶಿಕ್ಷಣವನ್ನು ಮೂಡಿಗೆರೆ ಮತ್ತು ಕೊಪ್ಪದಲ್ಲಿ ಹಾಸ್ಟೆಲ್‌ನಲ್ಲಿದ್ದು ಪೂರೈಸಿದ ಹೈಸ್ಕೂಲು ಶಿಕ್ಷಣವನ್ನು ಚಿಕ್ಕಮಗಳೂರಿನ ಹಾಸ್ಟೆಲ್‌ನಲ್ಲಿದ್ದು ಮುಂದುವರಿಸಿ, 1942 ರಲ್ಲಿ ಇಂಟರ್‌ ಮೀಡಿಯಟ್‌ ಓದಿಗಾಗಿ ಶಿವಮೊಗ್ಗಕ್ಕೆ ತೆರಳಿದರು. ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಿದ್ದ ಸಂದರ್ಭ ಅದು. ಆಗಲೇ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಧುಮುಕಿ ತಮ್ಮ ಸಹಪಾಟಿಗಳೊಂದಿಗೆ ಬೆಳಗ್ಗೆ 4 ಗಂಟೆಗೆ ಎದ್ದು ಶಿವಮೊಗ್ಗದ ದುರ್ಗಿಗುಡಿಯ ಮುಂಭಾಗಕ್ಕೆ ಬಂದು ಭಾರತ ದೇಶ ಮತ್ತು ಗಾಂಧೀಜಿಗೆ ಜೈ ಎಂದು ಕೂಗುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದರು. 20 ದಿನಗಳ ಕಾಲ ತರಗತಿಗೆ ಚಕ್ಕರ್‌ ಹೊಡೆದು ಹೋರಾಟದಲ್ಲಿ ಭಾಗವಹಿಸಿದ್ದರು.

ಸಿದ್ಧಾರ್ಥ ಅವರ ತಂದೆಗೆ ಗೊತ್ತಿಲ್ಲ ಮಗನ ಸಾವಿನ ಸುದ್ದಿ

ಸಾಹಿತಿ ಎ.ಎನ್‌.ಮೂರ್ತಿರಾವ್‌, ಮತ್ತು ಕಡಿದಾಳ್‌ ಮಂಜಪ್ಪ, ಎಸ್‌.ವಿ. ಕೃಷ್ಣಮೂರ್ತಿ ಅವರ ಭಾಷಣಗಳ ಪರಿಣಾಮ ಚಳವಳಿಯಲ್ಲಿ ತೊಡಗಿಕೊಳ್ಳಲು ಮತ್ತಷ್ಟುಉತ್ಸುಕತೆ ಮೂಡಿತ್ತು. ದೇಶಭಕ್ತಿ, ಚಳವಳಿ ಎಂದು ಅಲೆದಾಡುತ್ತಿದ್ದ ಹೆಗ್ಡೆ ಅವರಿಗೆ ತರಗತಿಗಳಿಗೆ ಚಕ್ಕರ್‌ ಆಗಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಶಿವಮೊಗ್ಗವನ್ನು ಬಿಡಬೇಕಾಗಿ ಬಂತು. ಆದರೂ ಈ ಸೂರು ಚಳವಳಿಯಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿ ಈಸೂರಿನ ಶ್ರೀ ವೀರ ಭದ್ರೇಶ್ವರ ದೇವಸ್ಥಾನದ ಮೆಲೆ ಧ್ವಜ ಏರಿಸಿದವರಲ್ಲಿ ಇವರೂ ಪ್ರಮುಖರು ಎನಿಸಿದರು.

ತಮ್ಮ 94 ನೇ ವಯಸ್ಸಿನಲ್ಲೂ 24ರ ಯುವಕನಂತೆ ತೋಟದಲ್ಲಿ ಸುತ್ತಾಡುತ್ತ, ಬಡವರಿಗೆ ನೆರವಾಗುತ್ತ, ರೋಟರಿ ಸಂಘಟನೆ, ಬೆಳೆಗಾರರ ಸಂಘ ಮತ್ತು ಸಮಾಜ ಸೇವೆಯಲ್ಲಿ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಮೂಲಕ ಯುವಪೀಳಿಗೆಯನ್ನು ನಾಚಿಸುವಂತೆ ಕೆಲಸ ಮಾಡಿದ್ದ ಎಸ್‌.ವಿ.ಗಂಗಯ್ಯ ಹೆಗ್ಡೆ ಅಜಾತ ಶತ್ರುವಾಗಿದ್ದರು. ಈಗ ಅವರು ಎಲ್ಲರಿಗೂ ಒಂದು ನೆನಪು ಮಾತ್ರ.