ಮೈಸೂರು [ಜು.31]:  ಆತ್ಮಹತ್ಯೆಗೆ ಶರಣಾದ ಉದ್ಯಮಿ ಸಿದ್ಧಾರ್ಥ ಅವರ ತಂದೆ ಕೋಮಾ ಸ್ಥಿತಿಯಲ್ಲಿದ್ದು, ಮೈಸೂರಿನ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಮಗನ ಸಾವಿನ ಸುದ್ದಿ ಅವರಿಗೆ ತಿಳಿದಿಲ್ಲ. 

"

ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಸಿದ್ಧಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಅವರು ಮನೆಯಲ್ಲಿ ಕಾಲು ಜಾರಿ ಬಿದ್ದು ಕೋಮಾಗೆ ಜಾರಿದ್ದಾರೆ. ಗುರುವಾರವಷ್ಟೇ ಸಿದ್ದಾರ್ಥ ಮೈಸೂರಿಗೆ ಆಗಮಿಸಿ, ತಂದೆ ಆರೋಗ್ಯ ವಿಚಾರಿಸಿದ್ದರು. ಮತ್ತೆ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದರು. 

ಅದೇ ಕೊನೇ ಭೇಟಿ ಎನ್ನುತ್ತಾರೆ ಎಸ್‌.ಎಂ.ಕೃಷ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ವಿಕ್ರಾಂತ್‌ ಪಿ.ದೇವೇಗೌಡ. ಗಂಗಯ್ಯ ಹೆಗ್ಡೆ ಅವರು ಚಿಕಿತ್ಸೆಗಾಗಿ ದಾಖಲಾದ ದಿನದಿಂದಲೂ ಆಗಾಗ್ಗೆ ಸಿದ್ಧಾರ್ಥ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಸಿದ್ಧಾರ್ಥ ಅವರ ತಾಯಿ ವಾಸಂತಿ ಹೆಗ್ಡೆ ಮೈಸೂರಲ್ಲೇ ಇದ್ದರು. ಆದರೆ ಪುತ್ರ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅವರು ಮೂಡಿಗೆರೆಯ ತಮ್ಮ ನಿವಾಸಕ್ಕೆ ತೆರಳಿದ್ದಾರೆ.