ಕಾಂಗ್ರೆಸ್‌ ನಾಯಕರಿಂದ ಹೈಕಮಾಂಡ್‌ಗೆ ಕಪ್ಪ ಸಲ್ಲಿಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಕಾವೇರಿದ ಸಂದರ್ಭದಲ್ಲೇ ಆಡಳಿತಾರೂಢ ಕಾಂಗ್ರೆಸ್ಸಿನ ಮಹತ್ವದ ಸಮನ್ವಯ ಸಮಿತಿ ಸಭೆ ಭಾನುವಾರ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲ ಹಿರಿಯ ಸಚಿವರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ 4 ವರ್ಷ ಸೇವೆ ಸಲ್ಲಿಸಿದ ಸಚಿವರನ್ನು ಕೈಬಿಡುವ ಕೆಪಿಸಿಸಿ ಪ್ರಸ್ತಾವವನ್ನು ಸಭೆಯ ಅಜೆಂಡಾದಿಂದ ಶನಿವಾರ ತಡರಾತ್ರಿ ಕೈಬಿಡಲಾಗಿದೆ.

ಬೆಂಗಳೂರು(ಫೆ.26): ಕಾಂಗ್ರೆಸ್‌ ನಾಯಕರಿಂದ ಹೈಕಮಾಂಡ್‌ಗೆ ಕಪ್ಪ ಸಲ್ಲಿಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಕಾವೇರಿದ ಸಂದರ್ಭದಲ್ಲೇ ಆಡಳಿತಾರೂಢ ಕಾಂಗ್ರೆಸ್ಸಿನ ಮಹತ್ವದ ಸಮನ್ವಯ ಸಮಿತಿ ಸಭೆ ಭಾನುವಾರ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲ ಹಿರಿಯ ಸಚಿವರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ 4 ವರ್ಷ ಸೇವೆ ಸಲ್ಲಿಸಿದ ಸಚಿವರನ್ನು ಕೈಬಿಡುವ ಕೆಪಿಸಿಸಿ ಪ್ರಸ್ತಾವವನ್ನು ಸಭೆಯ ಅಜೆಂಡಾದಿಂದ ಶನಿವಾರ ತಡರಾತ್ರಿ ಕೈಬಿಡಲಾಗಿದೆ.
ಕಾಂಗ್ರೆಸ್‌ ನಾಯಕರಿಂದ ಹೈಕಮಾಂಡ್‌ಗೆ ಕಪ್ಪ ಸಲ್ಲಿಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಕಾವೇರಿದ ಸಂದರ್ಭದಲ್ಲೇ ಆಡಳಿತಾರೂಢ ಕಾಂಗ್ರೆಸ್ಸಿನ ಮಹತ್ವದ ಸಮನ್ವಯ ಸಮಿತಿ ಸಭೆ ಭಾನುವಾರ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲ ಹಿರಿಯ ಸಚಿವರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ 4 ವರ್ಷ ಸೇವೆ ಸಲ್ಲಿಸಿದ ಸಚಿವರನ್ನು ಕೈಬಿಡುವ ಕೆಪಿಸಿಸಿ ಪ್ರಸ್ತಾವವನ್ನು ಸಭೆಯ ಅಜೆಂಡಾದಿಂದ ಶನಿವಾರ ತಡರಾತ್ರಿ ಕೈಬಿಡಲಾಗಿದೆ.
ಬೆಳಗ್ಗೆ 11.30ಕ್ಕೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಪಕ್ಷದ ಬಲವರ್ಧನೆ ಕುರಿತಂತೆ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ 2018ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬೇರುಮಟ್ಟದಲ್ಲಿ ಭದ್ರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಚಿವರಾಗಿರುವವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವ ಕುರಿತಂತೆ ಪ್ರಮುಖವಾಗಿ ಚರ್ಚೆ ನಡೆಯಬೇಕಿತ್ತು. ಕೆಪಿಸಿಸಿ ಸಿದ್ಧಪಡಿಸಿರುವ ಸಮನ್ವಯ ಸಮಿತಿಯ ಅಜೆಂಡಾದಲ್ಲಿ ಸುಮಾರು 20 ಜನ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುವ ಕುರಿತಂತೆ ಪ್ರಸ್ತಾಪ ಮಾಡಲಾಗಿತ್ತು.
ಆದರೆ ಶನಿವಾರ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ದೆಹಲಿಯಿಂದ ನಗರಕ್ಕೆ ಆಗಮಿಸಿದವರೇ ನೇರವಾಗಿ ಸಿಎಂ ಗೃಹ ಕಚೇರಿ ಕಾವೇರಿಗೆ ಭೇಟಿ ನೀಡಿದರು. ಈ ವೇಳೆ ಸುಮಾರು 25 ನಿಮಿಷಗಳ ಕಾಲ ಉಭಯ ನಾಯಕರ ನಡುವೆ ಮಾತುಕತೆ ನಡೆದು, ಸಚಿವರನ್ನು ಕೈಬಿಡುವ ಕೆಪಿಸಿಸಿ ಪ್ರಸ್ತಾವ ಕುರಿತಂತೆ ಚರ್ಚೆ ನಡೆಯಿತು. 
ಸಮನ್ವಯ ಸಮಿತಿ ಸಭೆಯ ಮೂರು ದಿನಗಳ ಮುಂಚೆಯೇ ಸಭೆಯ ಅಜೆಂಡಾದ ಅಂಶಗಳು ಸೋರಿಕೆಯಾಗಿದ್ದಲ್ಲದೇ ಶನಿವಾರ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಕುರಿತಂತೆ ಚರ್ಚೆ ನಡೆಯಲಿದೆ ಎಂಬುದನ್ನು ಖಚಿತಪಡಿಸಿ​ದ್ದರು. ಇದರ ಬೆನ್ನಲ್ಲೇ ಸಚಿವರಾದ ರಾಮಲಿಂಗಾ​ರೆಡ್ಡಿ, ರಮಾನಾಥ್‌ ರೈ, ಎಚ್‌.ಕೆ.ಪಾಟೀಲ್‌ ಮತ್ತಿತರರು ಸಂಪುಟ ಪುನಾರಚನೆ ವಿಚಾರದ ಬಗೆಗೆ ಪರೋಕ್ಷ ಅಸಮಾಧಾನ​ವನ್ನೂ ವ್ಯಕ್ತಪಡಿಸಿದ್ದರು. ಇದಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಇನ್ನೂ ಕೆಲ ಪ್ರಭಾವಿ ಸಚಿವರು ಕೆಪಿಸಿಸಿಯ ಪ್ರಸ್ತಾವಕ್ಕೆ ತೀವ್ರ ಅಸಮಾಧಾನಗೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಸಂಪುಟ ಪುನಾರಚನೆ ವಿಷಯ ಅಜೆಂಡಾದಲ್ಲಿ ಇಲ್ಲವೇ ಇಲ್ಲ, ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವುದು ಬೋಗಸ್‌ ಅಜೆಂಡಾ ಎಂದು ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದರು.

ಈ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ನೇರವಾಗಿ ದಿಗ್ವಿಜಯ್‌ ಸಿಂಗ್‌ ಎದುರು ವಿಷಯ ಪ್ರಸ್ತಾಪಿಸಿ, ಭಾನುವಾರದ ಸಭೆಯ ಅಜೆಂಡಾದಿಂದ ಸಂಪುಟ ಪುನಾರಚನೆ ಅಂಶ ಕೈಬಿಡುವಂತೆ ಒತ್ತಡ ಹಾಕಿದ್ದರು. ಹೀಗಾಗಿ ಕೆಪಿಸಿಸಿ ಶನಿವಾರ ತಡರಾತ್ರಿ ಅಜೆಂಡಾದಲ್ಲಿದ್ದ ಕೆಲ ಅಂಶಗಳನ್ನು ಮಾರ್ಪಾಟು ಮಾಡಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಆದರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹಾಗೂ ಪಕ್ಷವನ್ನು ಪ್ರತಿನಿಧಿಸುತ್ತಿರುವ ಸಮನ್ವಯ ಸಮಿತಿಯ ಕೆಲವು ಸದಸ್ಯರು ಸಭೆಯಲ್ಲಿ ಮೌಖಿಕವಾಗಿ ಸಂಪುಟ ಪುನಾರಚನೆ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕೆಪಿಸಿಸಿ ಪುನಾರಚನೆ, ರಾಜ್ಯದ 20 ಜಿಲ್ಲೆಗಳ ಡಿಸಿಸಿ ಅಧ್ಯಕ್ಷರ ಬದಲಾವಣೆ, 454 ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ಪೈಕಿ 225ಕ್ಕೂ ಹೆಚ್ಚು ಸಮಿತಿಗಳಿಗೆ ನೂತನ ಅಧ್ಯಕ್ಷರ ನೇಮಕ, ಸರ್ಕಾರದಲ್ಲಿ ಅವಕಾಶ ಸಿಗದ ಪಕ್ಷದ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡುವುದು ಕೂಡ ಪ್ರಮುಖವಾಗಿ ಚರ್ಚೆಗೆ ಬರಲಿದೆ.
ಇನ್ನು ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿರುವ ಡೈರಿ ಪ್ರಕರಣ ಮತ್ತು ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕುರಿತಂತೆಯೂ ಕಾರ್ಯತಂತ್ರ ರೂಪಿಸುವುದು ಮತ್ತು ಇವುಗಳ ನಿರ್ವಹಣೆಗೆ ಕೆಲ ಸಚಿವರನ್ನು ನಿಯೋಜಿಸುವ ಕುರಿತಂತೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮೇಲ್ನೋಟಕ್ಕೆ ಕೆಪಿಸಿಸಿ ಸಮನ್ವಯ ಸಮಿತಿ ಸಭೆ ಇದಾಗಿದ್ದರೂ ಮುಂದಿನ ಸುಮಾರು 15 ತಿಂಗಳ ರಾಜಕೀಯ ಬೆಳವಣಿಗೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಆಂತರಿಕ ವಿಚಾರದಲ್ಲೂ ಸಭೆ ಮಹತ್ವವನ್ನು ಪಡೆದುಕೊಂಡಿದೆ.

(ಕನ್ನಡಪ್ರಭ ವಾರ್ತೆ)