ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡ ಕೇಂದ್ರ ಸರ್ಕಾರ

Cabinet clears bill to restore Dalit law overturn Supreme Court order
Highlights

‘ಸರ್ಕಾರಿ ನೌಕರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ದೂರುಗಳು ದಾಖಲಾದರೆ, ತಕ್ಷಣಕ್ಕೆ ಅಧಿಕಾರಿಗಳ ಬಂಧನ ಮಾಡುವಂತಿಲ್ಲ’ ಎಂಬ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ತೀರ್ಪಿನಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿಧೇಯಕವೊಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ: ‘ಸರ್ಕಾರಿ ನೌಕರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರುಗಳು ದಾಖಲಾದರೆ, ತಕ್ಷಣಕ್ಕೆ ಅಧಿಕಾರಿಗಳ ಬಂಧನ ಮಾಡುವಂತಿಲ್ಲ’ ಎಂಬ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ತೀರ್ಪಿನಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿಧೇಯಕವೊಂದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸುಪ್ರೀಂ ಕೋರ್ಟ್‌ನ ತೀರ್ಪು ಎಸ್‌ಸಿ- ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಿಸುವಂತಿದೆ. ಹೀಗಾಗಿ ಮೂಲ ಕಾನೂನನ್ನೇ ಮರುಜಾರಿ ಮಾಡಬೇಕು ಎಂದು ದಲಿತ ಸಂಘಟನೆಗಳು ಹಾಗೂ ದಲಿತ ಪರ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು ಹಾಗೂ ಆಗಸ್ಟ್ 9 ರಂದು ‘ಭಾರತ ಬಂದ್’ಗೆ ಕರೆ ನೀಡಿದ್ದವು. 

ಈ ತೀರ್ಪು ಕೇಂದ್ರದ ಮೋದಿ ಸರ್ಕಾರಕ್ಕೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಇದರ ನಡುವೆಯೇ ‘ಡ್ಯಾಮೇಜ್ ಕಂಟ್ರೋಲ್’ ಭಾಗವಾಗಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮೂಲ ಕಾಯ್ದೆಯನ್ನೇ ಉಳಿಸುವ ಮಸೂದೆಯೊಂದಕ್ಕೆ ಅನುಮೋದನೆ ನೀಡಲಾಗಿದೆ.

ಸಭೆಯ ಬಳಿ ಸುದ್ದಿಗಾರರ ಜತೆ ಮಾತನಾಡಿದ ದಲಿತ ನಾಯಕರೂ ಆದ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್, ‘ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಮೋದಿ ಸರ್ಕಾರಕ್ಕೆ ಈ ಬಗ್ಗೆ ಧನ್ಯವಾದ ಹೇಳಲಿದ್ದೇವೆ’ ಎಂದರು. ಇದೇ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡನೆ ಮಾಡುವ ಸಾಧ್ಯತೆ ಇದ್ದು, ಸುಪ್ರೀಂ ಕೋರ್ಟ್ ಆದೇಶದಲ್ಲಿನ ಅಂಶಗಳನ್ನು ಬದಿಗೆ ಸರಿಸಿ ಮೂಲ ಕಾಯ್ದೆಯಲ್ಲಿರುವ ಅಂಶಗಳನ್ನು ಉಳಿಸಿಕೊಳ್ಳುವ ಸಂಗತಿಗಳು ಇದರಲ್ಲಿರಲಿವೆ ಎಂದು ಮೂಲಗಳು ಹೇಳಿವೆ. ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕಾಯ್ದೆಯಲ್ಲಿ, ಎಸ್‌ಸಿ- ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅನ್ವಯ ದೂರು ದಾಖಲಾದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವಂತಿಲ್ಲ, ಕೇಸು ದಾಖಲಿಗೆ ಮುನ್ನ ಯಾವುದೇ ಪ್ರಾಥಮಿಕ ತನಿಖೆಯ ಅಗತ್ಯವಿಲ್ಲ, ಯಾವುದೇ ಅನುಮತಿ ಇಲ್ಲದೆಯೇ ಅರೋಪಿಯನ್ನು ಬಂಧಿಸಲು ಅವಕಾಶ ಕಲ್ಪಿಸುವ ಅಂಶಗಳಿವೆ. 

ಸುಪ್ರೀಂ ಕೋರ್ಟ್ ತೀರ್ಪು ಏನಿತ್ತು?: ‘ಸರ್ಕಾರಿ ನೌಕರರ ವಿರುದ್ಧ ಎಸ್‌ಸಿಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರುಗಳು ದಾಖಲಾದರೆ, ತಕ್ಷಣಕ್ಕೆ ಅಧಿಕಾರಿಗಳ ಬಂಧಿಸುವಂತಿಲ್ಲ. ಪೂರ್ವಾಪರ ಪರಿಶೀಲಿಸಿ ಕ್ರಮ ಜರುಗಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮಾರ್ಚ್ 20 ರ ತೀರ್ಪಿನಲ್ಲಿ ಹೇಳಿತ್ತು. 

ಈ ಕಾಯ್ದೆಯಡಿ ಸರ್ಕಾರಿ ನೌಕರನ ಬಂಧನಕ್ಕೆ ಮೊದಲು ಪೊಲೀಸ್ ಉಪ ವರಿಷ್ಠಾಧಿಕಾರಿ ಮಟ್ಟದಲ್ಲಿ ಪ್ರಾಥಮಿಕ ತನಿಖೆ ನಡೆದಿರಬೇಕು. ಅಲ್ಲದೆ, ಜಾಮೀನು ಸಂಪೂರ್ಣ ನಿಷಿದ್ಧವಲ್ಲ ಎಂದೂ ಕೋರ್ಟ್ ತಿಳಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲಿ ನ ದೌರ್ಜನ್ಯಗಳ ತಡೆಗಾಗಿನ ಕಠಿಣ ಕಾನೂನು ದುರ್ಬಳಕೆಯಾಗುತ್ತಿದೆ ಎಂಬ ಆಪಾದನೆ ಹಿನ್ನೆಲೆ ಕೋರ್ಟ್ ಈ ತೀರ್ಪು ನೀಡಿತ್ತು.ಆದರೆ ಕೋರ್ಟ್ ತೀರ್ಪಿನಿಂದ ದಲಿತ ದೌರ್ಜನ್ಯಗಳು ಹೆಚ್ಚುವ ಸಾಧ್ಯತೆ ಇದ್ದು, ದಲಿತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ದಲಿತ ಪಕ್ಷಗಳು ಹಾಗೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. 

loader