Asianet Suvarna News Asianet Suvarna News

ಮುಂದಿನ ತಿಂಗಳು ಮೆಟ್ರೋ ಮೊದಲ ಹಂತ ಪೂರ್ಣ

ಏಪ್ರಿಲ್‌ ತಿಂಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗಬೇಕಿದ್ದ ಮೆಟ್ರೋ ಯೋಜನೆಯ ಮೊದಲ ಹಂತದ ಪೂರ್ಣ ಮಾರ್ಗ ಬಳಕೆ ಮೇ ತಿಂಗಳ ಮುಹೂರ್ತಕ್ಕೆ ಮುಂದೆ ಹೋಗಿದೆ.

By Next Month First Stage Of Metro Work Will Be Done
  • Facebook
  • Twitter
  • Whatsapp

ಬೆಂಗಳೂರು(ಎ.27): ಏಪ್ರಿಲ್‌ ತಿಂಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗಬೇಕಿದ್ದ ಮೆಟ್ರೋ ಯೋಜನೆಯ ಮೊದಲ ಹಂತದ ಪೂರ್ಣ ಮಾರ್ಗ ಬಳಕೆ ಮೇ ತಿಂಗಳ ಮುಹೂರ್ತಕ್ಕೆ ಮುಂದೆ ಹೋಗಿದೆ.

ರೈಲ್ವೇ ಸುರಕ್ಷತಾ ಆಯುಕ್ತರ ಗ್ರೀನ್‌ ಸಿಗ್ನಲ್‌ ಮೇ ತಿಂಗಳಲ್ಲಿ ದೊರೆಯುವ ನಿರೀಕ್ಷೆ ಇದ್ದು ಮೊದಲ ಹಂತದ ನೇರಳೆ ಹಸಿರು ಮಾರ್ಗಗಳ 42 ಕಿ.ಮೀ.ಗಳ ಪೂರ್ಣ ಪ್ರಯಾಣ ಆಗಷ್ಟೇ ಸಾಧ್ಯವಾಗಲಿದೆ. ಈ ಮೂಲಕ ವೆÜುಟ್ರೋ ಮೊದಲ ಹಂತವನ್ನು ಏಪ್ರಿಲ್‌ ಮುಗಿಯುವ ಮುನ್ನವೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಿಸಿದ್ದ ಗಡುವು ಕೊನೆಗೂ ಈಡೇರದಂತಾಗಿದೆ.

ಮೆಟ್ರೋ ಮೊದಲ ಹಂತವು ಬೆಂಗಳೂರಿನ ಪೂರ್ವ-ಪಶ್ಚಿಮವನ್ನು ಉತ್ತರ-ದಕ್ಷಿಣದೊಂದಿಗೆ ಬೆಸೆಯಲಿದೆ. ಪೂರ್ವ-ಪಶ್ಚಿಮ ಮಾರ್ಗವನ್ನು ನೇರಳೆ ಮಾರ್ಗವೆಂದೂ, ಉತ್ತರ-ದಕ್ಷಿಣ ಮಾರ್ಗವನ್ನು ಹಸಿರು ಮಾರ್ಗವೆಂದೂ ನಾಮಕರಣ ಮಾಡಲಾಗಿದ್ದು ಇವೆರಡೂ ಮಾರ್ಗಗಳು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್‌)ದಲ್ಲಿ ಸಂಗಮಿಸುತ್ತವೆ. ಇದೀಗ ನೇರಳೆ ಮಾರ್ಗವು ಸಂಪೂರ್ಣ ಚಾಲನೆಯಲ್ಲಿದ್ದು ಹಸಿರು ಮಾರ್ಗ ಭಾಗಶಃ ಸಾರ್ವಜನಿಕರ ಸಂಚಾರಕ್ಕೆ ಲಭ್ಯವಾಗಿದೆ. ನೇರಳೆ ಮಾರ್ಗದ ಸುರಂಗ ಸಂಚಾರವು ಕಳೆದ ಒಂದು ವರ್ಷದಿಂದ ಯಾವುದೇ ಸಮಸ್ಯೆಗಳಿಲ್ಲದೇ ಸುಲಲಿತ ಸಂಚಾರಕ್ಕೆ ಅನುವು ಮಾಡಿದ್ದು ಹಸಿರು ಮಾರ್ಗದ ಸುರಂಗ ಸಂಚಾರ ಇನ್ನಷ್ಟೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಬೇಕಿದೆ.

ಹಸಿರು ಮಾರ್ಗದಲ್ಲಿ ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜುವರೆಗೆ ಸುರಂಗ ಮಾರ್ಗವಿದ್ದು 4 ಕಿ.ಮೀ.ಗಳ ಈ ಮಾರ್ಗದಲ್ಲೀಗ ಪರೀಕ್ಷಾರ್ಥ ರೈಲು ಸಂಚಾರವು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ನ್ಯಾಷನಲ್‌ ಕಾಲೇಜಿನಿಂದ ಪುಟ್ಟೇನಹಳ್ಳಿ ಮಾರ್ಗದ ಪರೀಕ್ಷಾರ್ಥ ಸಂಚಾರ ಕಳೆದ ನವೆಂಬರ್‌ನಿಂದಲೇ ನಡೆಯುತ್ತಿದ್ದು ಇತ್ತ ಸಂಪಿಗೆ ರಸ್ತೆಯಿಂದ ನಾಗಸಂದ್ರವರೆಗಿನ 12.2 ಕಿ.ಮೀ. ಮೆಟ್ರೋ ಸಂಚಾರ ಈಗಾಗಲೇ ನಡೆಯುತ್ತಿದ್ದು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದರೆ, ಹಸಿರು ಮಾರ್ಗದ ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜುವರೆಗಿನ 4 ಕಿ.ಮೀ. ಜತೆಗೆ ನ್ಯಾಷನಲ್‌ ಕಾಲೇಜಿನಿಂದ ಪುಟ್ಟೇನಹಳ್ಳಿ ನಡುವಿನ ಮಾರ್ಗ ಮಾತ್ರ ಇನ್ನಷ್ಟೇ ಸಂಚಾರ ಸುರಕ್ಷಾ ಆಯುಕ್ತರಿಂದ ಅನುಮತಿ ಪಡೆಯಬೇಕಿದೆ.

ಮೇನಲ್ಲಿ ಸುರಕ್ಷತಾ ಸರ್ಟಿಫಿಕೇಟ್‌: ಕಳೆದ ಹದಿನೈದು ದಿನಗಳಿಂದ ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜುವರೆಗೆ ಮೆಟ್ರೋ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದ್ದು ಬಹುತೇಕ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದೆ. ಏಪ್ರಿಲ್‌ನಲ್ಲೇ ಎಲ್ಲಾ ಪರೀಕ್ಷೆಗಳನ್ನೂ ಮುಗಿಸಿ ರೈಲ್ವೇ ಸುರಕ್ಷತಾ ಆಯುಕ್ತರಿಗೆ ಸಂಚಾರ ಸುರಕ್ಷತಾ ಸರ್ಟಿಫಿಕೇಟ್‌ಗಾಗಿ ಮಾರ್ಗವನ್ನು ಹಸ್ತಾಂತರಿಸಬೇಕಿದ್ದರೂ ಮೇ ಆರಂಭಗೊಳ್ಳುತ್ತ ಬಂದರೂ ಇದು ಸಾಧ್ಯವಾಗಿಲ್ಲ. ಇದೀಗ ಬಹುತೇಕ ಎಲ್ಲಾ ಪರೀಕ್ಷೆಗಳೂ ಯಶಸ್ವಿಯಾಗಿದ್ದು ಶೀಘ್ರದಲ್ಲೇ ಸುರಕ್ಷತಾ ಸರ್ಟಿಫಿಕೇಟ್‌ಗಾಗಿ ಮಾರ್ಗವನ್ನು ಬಿಟ್ಟು ಕೊಡುವುದಾಗಿ ಮೆಟ್ರೋ ಹೇಳಿದೆ.

ಪ್ರಯಾಣಿಕರು ಡಬಲ್‌: ಇದೀಗ ಅಜಮಾಸು ಎರಡು ಲಕ್ಷ ಪ್ರಯಾಣಿಕರು ನೇರಳೆ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ. ಒಂದೊಮ್ಮೆ ಮೆಟ್ರೋ ಮೊದಲ ಹಂತದ ಪೂರ್ಣ 42.2 ಕಿ.ಮೀ. ಕೂಡ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಂಡಲ್ಲಿ ಈ ಸಂಖ್ಯೆ ಎರಡರಷ್ಟಾಗಲಿದೆ. ವೆÜುಟ್ರೋ ಪ್ರಯಾಣಿಕರ ಸಂಖ್ಯೆ 4 ಲಕ್ಷಕ್ಕೇರಲಿದೆ ಎಂದು ಅಂದಾಜಿಸಲಾಗಿದೆ.

ಮಾರ್ಪಾಟು ಬೇಕಿದ್ದಲ್ಲಿ ಮತ್ತೆ ವಿಳಂಬ ಸಾಧ್ಯತೆ

ರೈಲ್ವೇ ಸುರಕ್ಷತಾ ಆಯುಕ್ತರ ತಪಾಸಣೆ ವೇಳೆ ಸಂಪಿಗೆ ರಸ್ತೆ ಮತ್ತು ನ್ಯಾಷನಲ್‌ ಕಾಲೇಜು ಮೂಲಕ ಪುಟ್ಟೇನಹಳ್ಳಿ ಮಾರ್ಗದುದ್ದಕ್ಕೂ ಸುರಕ್ಷತಾ ಮಾನದಂಡಗಳು ಶೇ.100ರಷ್ಟುಇದ್ದಲ್ಲಿ ಮಾತ್ರ ಸುರಕ್ಷತಾ ಆಯುಕ್ತರ ಗ್ರೀನ್‌ ಸಿಗ್ನಲ್‌ ಸಿಗಲಿದೆ. ಕೆಂಪೇಗೌಡ ವೆÜುಟ್ರೋ ನಿಲ್ದಾಣದ ಇಂಟರ್‌ಚೇಂಜ್‌ ಕೂಡ ಇದರಲ್ಲಿ ಸೇರಿದ್ದು ರೈಲ್ವೇ ಸುರಕ್ಷತಾ ಆಯುಕ್ತರಿಂದ ಈ ವ್ಯವಸ್ಥೆಯೂ ಸಂಪೂರ್ಣ ಪ್ರಮಾಣದಲ್ಲಿ ಸುರಕ್ಷವಾಗಿರುವುದು ಖಾತರಿಗೊಳ್ಳಬೇಕಿದೆ. ಒಂದೊಮ್ಮೆ ಸುರಕ್ಷತಾ ಆಯುಕ್ತರು ಕೆಲವೊಂದು ಮಾರ್ಪಾಟುಗಳನ್ನು ಮಾಡಲು ಸೂಚಿಸಿದಲ್ಲಿ ಮತ್ತೆ ಸುರಕ್ಷತಾ ಆಯುಕ್ತರ ಸರ್ಟಿಫಿಕೇಟ್‌ ಪಡೆಯುವಲ್ಲಿ ವಿಳಂಬವಾಗಲಿದೆ. ಆಗ ಹಸಿರು ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ಮತ್ತೆ ವಿಳಂಬಗೊಂಡು ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳ್ಳುವುದು ಮತ್ತೆ ಜೂನ್‌ಗೆ ಮುಂದಕ್ಕೆ ಹೋದರೂ ಅಚ್ಚರಿ ಇಲ್ಲ. ಹೀಗಾಗಿ ಮೆಟ್ರೋ ಮೊದಲ ಹಂತದ ಪೂರ್ಣ ಸಂಚಾರದಲ್ಲಿನ ಅನಿಶ್ಚಿತತೆ ಇನ್ನೂ ಮುಂದುವರಿದಿದೆ.

Follow Us:
Download App:
  • android
  • ios