ರೈಲ್ವೆ ಇಲಾಖೆ ಆನೆಗಳು ರೈಲು ಬರುವಾಗ ಹಳಿ ದಾಟದಂತೆ ಹೊಸ ಉಪಾಯ ಕಂಡುಹಿಡಿದಿದೆ. ಈಶಾನ್ಯ ಗಡಿ ರೈಲ್ವೆ ವಲಯವು ‘ಜೇನ್ನೊಣ ಝೇಂಕರಿಸುವ ಸಾಧನ’ವನ್ನು ಆನೆ ಕಾರಿಡಾರ್‌ನಲ್ಲಿ ಬರುವ ಹಳಿಗಳ ಅಕ್ಕ-ಪಕ್ಕ ಅಳವಡಿಸತೊಡಗಿದೆ.

ಗುವಾಹಟಿ (ನ.26): ಆನೆಯ ಆವಾಸ ಸ್ಥಾನಗಳಲ್ಲಿ ಹಾದು ಹೋಗುವ ರೈಲು ಮಾರ್ಗಗಳಲ್ಲಿ, ಹಳಿ ದಾಟುತ್ತಿರುವ ಆನೆಗಳು ಬಲಿಯಾಗುವುದು ಅಸ್ಸಾಂನಲ್ಲಿ ಸಾಮಾನ್ಯ. 2006 ರಿಂದ 2015ರವರೆಗೆ 225 ಆನೆಗಳು ರೈಲು ಬಡಿದು ಸಾವನ್ನಪ್ಪಿವೆ. ಇದರಿಂದ ಚಿಂತಿತವಾಗಿದ್ದ ರೈಲ್ವೆ ಇಲಾಖೆ, ಆನೆಗಳು ರೈಲು ಬರುವಾಗ ಹಳಿ ದಾಟದಂತೆ ಹೊಸ ಉಪಾಯ ಕಂಡುಹಿಡಿದಿದೆ. ಈ ಮುಂಚೆ ವಿದ್ಯುತ್ ಬೇಲಿ ಅಳವಡಿಕೆ ಮತ್ತು ಖಾರದ ಪುಡಿ ಬಾಂಬ್ ಪ್ರಯೋಗಗಳು ನಡೆದರೂ, ಅವು ವಿಫಲಗೊಂಡಿದ್ದವು. ಆದ್ದರಿಂದ ಈಗ ಈಶಾನ್ಯ ಗಡಿ ರೈಲ್ವೆ ವಲಯವು ‘ಜೇನ್ನೊಣ ಝೇಂಕರಿಸುವ ಸಾಧನ’ವನ್ನು ಆನೆ ಕಾರಿಡಾರ್‌ನಲ್ಲಿ ಬರುವ ಹಳಿಗಳ ಅಕ್ಕ-ಪಕ್ಕ ಅಳವಡಿಸತೊಡಗಿದೆ.

ಪ್ರಾಯೋಗಿಕವಾಗಿ ಕಳೆದೊಂದು ವರ್ಷದಲ್ಲಿ ಅಳವಡಿಸಿದ್ದ ಸಾಧನ ಯಶಸ್ಸು ಕಂಡ ಕಾರಣ ಇತರೆಡೆ ಅಳವಡಿಸಲು ಸಿದ್ಧತೆ ಆರಂಭವಾಗಿದೆ. ಆನೆಗಳು ಎಷ್ಟೇ ದೈತ್ಯಾಕಾರದ ಮತ್ತು ದಪ್ಪ ಚರ್ಮದ ಪ್ರಾಣಿಗಳಾಗಿದ್ದರೂ ಜೇನ್ನೊಣಗಳಿಗೆ ಬೆಚ್ಚಿ ಬೀಳುತ್ತವೆ. ರೈಲು ಬರುವಾಗ ಆನೆ ಕಂಡಿತು ಎಂದರೆ ರೈಲ್ವೆ ಸಿಬ್ಬಂದಿಯು ಹಳಿಯ ಸಮೀಪ ಇಟ್ಟಿರುವ ಜೇನ್ನೊಣ ಝೇಂಕಾರ ಸಾಧನ ಆನ್ ಮಾಡುತ್ತಾರೆ.

ಈ ಸಾಧನದ ಶಬ್ದ 600 ಮೀ. ದೂರದವರೆಗೂ ಕೇಳಿಸುತ್ತದೆ. ಜೇನ್ನೊಣದ ಶಬ್ದ ಕೇಳುತ್ತಿದ್ದಂತೆಯೇ ಬೆಚ್ಚುವ ಆನೆಗಳು ಹಳಿಯ ಕಡೆ ಮುಖ ಮಾಡದೇ ವಾಪಸ್ ಹೋಗಿಬಿಡುತ್ತಿವೆ. ಇದರ ಯಶಸ್ಸನ್ನು ಮನಗಂಡಿರುವ ರೈಲ್ವೆ ಅಧಿಕಾರಿಗಳು ರಾಜ್ಯದ ಎಲ್ಲ ಆನೆ ಕಾರಿಡಾರ್‌ಗಳಲ್ಲಿ ಇದನ್ನು ಅಳವಡಿಸಲು ತೀರ್ಮಾನಿಸಿದ್ದಾರೆ.