ಬೆಂಗಳೂರು (ಮಾ. 06):  ಲೋಕಸಭಾ ಚುನಾವಣೆಗಳು ಮುಗಿಯುವವರೆಗೆ ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ಶೇ.18ರಷ್ಟುದರ ಹೆಚ್ಚಳ ಕುರಿತಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ಮುಖ್ಯಮಂತ್ರಿಗಳು ಸದ್ಯಕ್ಕೆ ದರ ಹೆಚ್ಚಳ ಮಾಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ದರ ಜಾಸ್ತಿ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಾರ್ಚ್  ಒಂದರಿಂದ ಡೀಸೆಲ್‌ ದರ ಪ್ರತಿ ಲೀಟರ್‌ಗೆ ಮೂರು ಹೆಚ್ಚಳ ಮಾಡಿರುವ ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ 15 ಕೋಟಿ ರು. ನಂತೆ ವರ್ಷಕ್ಕೆ 180 ಕೋಟಿ ರು. ಹೆಚ್ಚಿನ ಹೊರ ಬೀಳಲಿದೆ. ಆದರೂ ಚುನಾವಣೆ ಮುಗಿದ ನಂತರ ಬಸ್‌ ಪ್ರಯಾಣ ಹೆಚ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಒಟ್ಟಿಗೆ ತನಿಖೆಗೆ ಕ್ರಮ:

ಸಾರಿಗೆ ಸಂಸ್ಥೆಯಲ್ಲಿ ಕಂಪ್ಯೂಟರ್‌ ಖರೀದಿ, ಸೀಟುಗಳ ರೆಕ್ಸಿನ್‌ ಖರೀದಿ ಸೇರಿದಂತೆ ನಡೆದಿದೆ ಎನ್ನಲಾದ ಎಲ್ಲ ಹಗರಣಗಳನ್ನು ಒಟ್ಟಿಗೆ ಸೇರಿಸಿ ತನಿಖೆ ಮಾಡಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಈ ಅಕ್ರಮಗಳ ಕುರಿತಂತೆ 30ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ, ಬಸ್‌ಗಳ ಬಿಡಿ ಭಾಗಗಳ ಖರೀದಿ, ಕವಚ ನಿರ್ಮಾಣ ಅಕ್ರಮಗಳ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಟೆಂಡರ್‌:

ಪ್ರಶ್ನೆಯೊಂದಕ್ಕೆ ಉತ್ತರಿಸಿದ ತಮ್ಮಣ್ಣ, ಈ ಹಿಂದೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಮೇಲೆ ಕಾರ್ಯಾಚರಣೆ ಮಾಡಲು ಉದ್ದೇಶಿಸಿದ್ದು ನಿಜ. ಖಾಸಗಿಯವರಿಂದ ಬಸ್‌ ತೆಗೆದುಕೊಂಡರೆ ಸಂಸ್ಥೆಯನ್ನೇ ಅವರಿಗೆ ಅಡವಿಟ್ಟಂತಾಗುತ್ತದೆ. ಸರ್ಕಾರ ಅನುಮತಿ ನೀಡದಿದ್ದರೂ ಅಧಿಕಾರಿಗಳೇ ಗುತ್ತಿಗೆ ಆಧಾರದ ಮೇಲೆ ಬಸ್‌ ಪಡೆಯಲು ಮುಂದಾಗಿದ್ದರು. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಗುತ್ತಿಗೆ ಮೇಲೆ ಬಸ್‌ ತೆಗೆದುಕೊಳ್ಳುವ ಒಪ್ಪಂದವನ್ನು ರದ್ದು ಮಾಡಲಾಗಿದೆ. ಜೊತೆಗೆ ಸಂಸ್ಥೆಗೆ ಹೊರೆಯಾಗಲಿದೆ ಎಂಬ ಕಾರಣದಿಂದ ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್‌ ಬಸ್‌ ಪಡೆಯುವ ನಿರ್ಧಾರವನ್ನು ಕೈ ಬಿಟ್ಟು ಖರೀದಿ ಮಾಡಲು ಉದ್ದೇಶಿಸಲಾಗಿದೆ. ಖಾಸಗಿ ಕಂಪನಿಗಳು ಸಾಕಷ್ಟುಪ್ರಭಾವಿಗಳಾಗಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಮಾತ್ರವಲ್ಲ ಸಚಿವರನ್ನೇ ಬದಲಾಯಿಸುವಷ್ಟು ಪ್ರಭಾವಶಾಲಿಗಳಾಗಿದ್ದಾರೆ ಎಂದರು.

ಹೊಸದಾಗಿ ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಜಾಗತಿಕ ಟೆಂಡರ್‌ ಕರೆಯಲಾಗುವುದು. ಟೆಂಡರ್‌ ಪಡೆದ ಸಂಸ್ಥೆಯೇ ಸಿಬ್ಬಂದಿಗೆ ಸೂಕ್ತ ತರಬೇತಿ ಮತ್ತು ನಿರ್ವಹಣೆ ಮಾಡುವ ಹೊಣೆಯನ್ನು ಅವರಿಗೆ ನೀಡುವ ಉದ್ದೇಶ ಹೊಂದಲಾಗಿದೆ. ಸುಮಾರು 80 ಬಸ್‌ಗಳನ್ನು ಖರೀದಿಸುವ ಸಂಬಂಧ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸೋರಿಕೆ ತಡೆಗೆ ಕ್ರಮ:

ಸಾರಿಗೆ ಸಂಸ್ಥೆಯಲ್ಲಿ ಸೋರಿಕೆಯನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗುಜರಿ ಸಾಮಗ್ರಿಗಳನ್ನು ಆರು ತಿಂಗಳಿಗೊಮ್ಮೆ ಹರಾಜು ಮಾಡುವ ಅಧಿಕಾರವನ್ನು ಆಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲಾಗಿದೆ ಎಂದರು.ಪ್ರತಿ ಬಸ್‌ ಮಾಹಿತಿಯನ್ನು ದಾಖಲು ಮಾಡಲಾಗುವುದು, ಬಸ್‌ ಕಾರ್ಯಾಚರಣೆ ಆರಂಭವಾದ ದಿನದಿಂದ ಎಂಟು ಲಕ್ಷ ಕಿ.ಮೀ ಸಂಚರಿಸುವವರೆಗೂ ಅದಕ್ಕೆ ಪ್ರತಿ ದಿನ ಬಳಸಿದ ಡೀಸೆಲ್‌, ಟೈರು ಸೇರಿದಂತೆ ಬಿಡಿ ಭಾಗಗಳನ್ನು ಅಳವಡಿಸಿದ ಪ್ರತಿಯೊಂದು ಮಾಹಿತಿಯನ್ನು ದಾಖಲು ಮಾಡುವುದರಿಂದ ಸೋರಿಕೆ ಹಿಡಿತಕ್ಕೆ ಬರಲಿದೆ ಎಂದರು.

ಆರ್‌ಟಿಒಗಳ ಕೊರತೆ

ಸಾರಿಗೆ ಇಲಾಖೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕೊರತೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಸ್ವತಃ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರೇ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 760 ಆರ್‌ಟಿಒ ಹುದ್ದೆಗಳು ಮಂಜೂರಾಗಿದ್ದರೂ, 250 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 180 ಆರ್‌ಟಿಒ ಹುದ್ದೆಗಳ ನೇಮಕಾತಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. 150 ಆರ್‌ಟಿಒ ಹುದ್ದೆಗಳ ನೇಮಕಾತಿಗೆ ಸಂಬಂಧ ಕೆಪಿಎಸ್‌ಸಿ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಹೀಗಾಗಿ ಒಬ್ಬ ಆರ್‌ಟಿಒ ಮೂರ್ನಾಲ್ಕು ಕಡೆ ಕೆಲಸ ಮಾಡುವಂತಾಗಿದೆ ಎಂದರು.

ಹೀಗಾಗಿ ಖಾಲಿ ಇರುವ ಆರ್‌ಟಿಒ ಹುದ್ದೆಗಳ ನೇಮಕಾತಿ ಸಂಬಂಧ ಲೋಕಸಭಾ ಚುನಾವಣೆ ನಂತರ ನಿಯಮಾವಳಿಗೆ ತಿದ್ದುಪಡಿ ತರಲಾಗುವುದು, ಕೇಂದ್ರ ಆರ್‌ಟಿಒ ಕಾಯ್ದೆ ಪ್ರಕಾರ ಆರ್‌ಟಿಒ ಹುದ್ದೆಗೆ ನೇಮಕವಾಗಲು ಒಂದು ವರ್ಷ ಗ್ಯಾರೇಜ್‌ ತರಬೇತಿ ಹೊಂದಿರಬೇಕಾಗುತ್ತದೆ ಎಂದು ತಿಳಿಸಿದರು.

ದಲ್ಲಾಳಿಗಳಿಗೆ ಕಡಿವಾಣ

ಆರ್‌ಟಿಒ ಕಚೇರಿಯಲ್ಲಿ ದಲ್ಲಾಳಿಗಳೇ ಜಾಸ್ತಿ ಎಂಬ ಆರೋಪ ಕುರಿತ ಪ್ರಶ್ನೆಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಸಚಿವ ತಮ್ಮಣ್ಣ, ದಲ್ಲಾಳಿಗಳು ಎಲ್ಲ ಕಚೇರಿಗಳಲ್ಲೂ ಇದ್ದಾರೆ. ವಿಧಾನಸೌಧದಲ್ಲೂ ಇದ್ದಾರೆ. ಆದರೆ ತಾವು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಾಕಷ್ಟುಕಡಿವಾಣ ಹಾಕಿದ್ದೇನೆ ಎಂದರು.