ಶಿಕ್ಷಣದಿಂದ ಆರೋಗ್ಯದವರೆಗೆ, ಉಧ್ಯಮಿಗಳಿಂದ ಉದ್ಯೋಗದವರೆಗೆ ಎಲ್ಲರ ಕನಸನ್ನು ನನಸು ಮಾಡುವಂತಹ ಬಜೆಟ್ ಇದಾಗಿದೆ.
ನವದೆಹಲಿ(ಫೆ.01): ಈ ಬಜೆಟ್ ದೇಶದ ಅಭಿವೃದ್ಧಿಗೆ ಚುರುಕನ್ನು ಮುಟ್ಟಿಸಲಿದ್ದು, ವಿಕಾಶದ ದೃಷ್ಟಿಯಿಂದ ಇದು ದಿಟ್ಟ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಆಯವ್ಯಯ ಪತ್ರವನ್ನು ಶ್ಲಾಘಿಸಿದ್ದಾರೆ.
ನಮ್ಮ ದೇಶ ಬದಲಾವಣೆಯ ದಿಕ್ಕಿನತ್ತ ಸಾಗುತ್ತಿದೆ. ಇದನ್ನು ಇನ್ನಷ್ಟು ವೇಗವಾಗಿ ಬದಲಾಯಿಸಲು ಈ ಬಜೆಟ್ ಸಹಕಾರಿಯಾಗಿದೆ. ಒಂದು ರೀತಿಯಲ್ಲಿ ನಮ್ಮ ಕನಸನ್ನು ಸಾಕಾರಗೊಳಿಸುವ, ಭವಿಷ್ಯದ ಬಜೆಟ್ ಎಂದರೆ ತಪ್ಪಾಗಲಾರದು. FUTURE ಗೆ ತಮ್ಮದೇ ಕಲ್ಪನೆ ಬಿಚ್ಚಿಟ್ಟ ಮೋದಿ, F- ಫಾರ್ಮರ್(ರೈತ), U- ಅಂಡರ್ ಪ್ರಿವಿಲೈಜ್(ಶೋಷಿತ ವರ್ಗ) T- ಟ್ರಾನ್ಸ್'ಪರೆಸನ್ಸಿ(ಪಾರದರ್ಶಕತೆ), U- ಅರ್ಬನ್ ರಿನುಜ್ಯುಯೇಷನ್(ನಗರ ಪುನರ್'ನಿರ್ಮಾಣ), R- ರೂರಲ್ ಡೆವಲಪ್'ಮೆಂಟ್(ಗ್ರಾಮೀಣಾಭಿವೃದ್ಧಿ) ಹಾಗೂ E- ಎಂಪ್ಲಾಯ್'ಮೆಂಟ್(ಉದ್ಯೋಗ) ಆಗಿದ್ದು, ಇದನ್ನು ಸಾಕಾರಗೊಳಿಸುವಲ್ಲಿ ಸಹಾಯವಾದ ಬಜೆಟ್ ರೂಪಿಸಿದ ವಿತ್ತ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದರು.
ಶಿಕ್ಷಣದಿಂದ ಆರೋಗ್ಯದವರೆಗೆ, ಉಧ್ಯಮಿಗಳಿಂದ ಉದ್ಯೋಗದವರೆಗೆ ಎಲ್ಲರ ಕನಸನ್ನು ನನಸು ಮಾಡುವಂತಹ ಬಜೆಟ್ ಇದಾಗಿದೆ. ಈ ಬಜೆಟ್ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮೂಲಕ ಗ್ರಾಮೀಣ ಭಾರತದ ಆರ್ಥಿಕತೆಯನ್ನು ಬಲಪಡಿಸಲು ಸಹಕಾರಿಯಾಗಿದೆ ಎಂದು ಜೇಟ್ಲಿ ಬಜೆಟ್'ನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಬಜೆಟ್'ನೊಂದಿಗೆ ರೈಲ್ವೇ ಬಜೆಟ್'ನ್ನು ವಿಲೀನಗೊಳಿಸಿದ್ದು ಒಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ ಮೋದಿ, ದೇಶ ಕಟ್ಟುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದರು. ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಸರ್ಕಾರದ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ.
