ಬಾಲಕಿಯೊಬ್ಬಳು ಧಾರಾವಾಹಿ ನೋಡಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ಹಿಂದಿ ಚಾನೆಲ್ವೊಂದರಲ್ಲಿ ಪ್ರಸಾರಗೊಳ್ಳುವ `ಸಿಐಡಿ' (ಕ್ರೈಂ ಪ್ರಕರಣ ತನಿಖೆ ಆಧಾರಿತ) ಧಾರವಾಹಿ ನೋಡಿ ಹಣಕ್ಕಾಗಿ ತಾನು ಕೆಲಸಕ್ಕಿದ್ದ ಪಿಜಿ ಮಾಲೀಕ ನನ್ನೇ ಹತ್ಯೆ ಗೈದಿದ್ದವನನ್ನು ಮೈಕೋ ಲೇಔಟ್ ಪೊಲೀಸರು ಘಟನೆ ನಡೆದ 48 ತಾಸಿನಲ್ಲೇ ಬಂಧಿಸಿದ್ದಾರೆ.
ಬೆಂಗಳೂರು (ಡಿ.17): ಬಾಲಕಿಯೊಬ್ಬಳು ಧಾರಾವಾಹಿ ನೋಡಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ಹಿಂದಿ ಚಾನೆಲ್ವೊಂದರಲ್ಲಿ ಪ್ರಸಾರಗೊಳ್ಳುವ `ಸಿಐಡಿ' (ಕ್ರೈಂ ಪ್ರಕರಣ ತನಿಖೆ ಆಧಾರಿತ) ಧಾರವಾಹಿ ನೋಡಿ ಹಣಕ್ಕಾಗಿ ತಾನು ಕೆಲಸಕ್ಕಿದ್ದ ಪಿಜಿ ಮಾಲೀಕ ನನ್ನೇ ಹತ್ಯೆ ಗೈದಿದ್ದವನನ್ನು ಮೈಕೋ ಲೇಔಟ್ ಪೊಲೀಸರು ಘಟನೆ ನಡೆದ 48 ತಾಸಿನಲ್ಲೇ ಬಂಧಿಸಿದ್ದಾರೆ.
ಬಿಹಾರದ ಮಧುಬನಿ ಜಿಲ್ಲೆಯ ಶಿವಶಂಕರ್ ಮಹತೋ (29) ಬಂತ ಎಂಬ ಈ ಆರೋಪಿಯಿಂದ 1.50 ಲಕ್ಷ ಜಪ್ತಿ ಮಾಡಲಾಗಿದೆ. ಆರೋಪಿ ಡಿ.13 ರಂದು ಬಿಟಿಎಂ ಲೇಔಟ್ 2ನೇ ಹಂತದಲ್ಲಿರುವ ಪಿಜಿ (ಪೇಯಿಂಗ್ ಗೆಸ್ಟ್) ಮಾಲೀಕ ತಿರುಪಾಲ ರೆಡ್ಡಿ (60) ಎಂಬುವರನ್ನು ಹತ್ಯೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ತಿರುಪಾಲ ರೆಡ್ಡಿ ಅವರು ಕಳೆದ ಎರಡು ವರ್ಷಗಳಿಂದ ಬಿಟಿಎಂ ಲೇಔಟ್’ನ 16ನೇ ಮುಖ್ಯರಸ್ತೆಯಲ್ಲಿ `ಪ್ರಣತಿ ಪೇಯಿಂಗ್ ಗೆಸ್ಟ್' ನಡೆಸುತ್ತಿದ್ದರು. ಇವರ ಪುತ್ರ ಬಿಟಿಎಂ ಲೇಔಟ್’ನಲ್ಲೆ ಮತ್ತೊಂದು ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಆರೋಪಿ ಬಿಹಾರ ಮೂಲದ ಶಿವಶಂಕರ್, ತಿರುಪಾಲರೆಡ್ಡಿ ಅವರ ಬಳಿ ಬಾಣಸಿಗನಾಗಿ ಕೆಲಸಕ್ಕೆ ಸೇರಿದ್ದ. ತಿರುಪಾಲರೆಡ್ಡಿ ಅವರ ಬಳಿ ಹಣವಿರುವುದನ್ನು ಕಂಡಿದ್ದ ಆರೋಪಿ ಹಣ ಲಪಾಟಾಯಿಸಲು ಸಂಚು ರೂಪಿಸಿದ್ದನು.
ನಿತ್ಯ ತಿರುಪಾಲರೆಡ್ಡಿ ಮತ್ತು ಆರೋಪಿ ಶಿವಶಂಕರ್ ನೆಲ ಮಹಡಿಯ ಒಂದೇ ಕೊಠಡಿಯಲ್ಲಿ ಮಲಗುತ್ತಿದ್ದರು. ಡಿ.13 ರಂದು ತಡರಾತ್ರಿ 1.30ರ ಸುಮಾರಿಗೆ ಆರೋಪಿ ತರಕಾರಿ ಕೊಯ್ಯಲು ಬಳಸುವ ಚಾಕುವಿನಿಂದ ಮಾಲೀಕನ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದ. ಬಳಿಕ ಬೀರುವಿನಲ್ಲಿದ್ದ 2 ಲಕ್ಷ ರು. ಹಣ ಕದ್ದೊಯ್ದಿದ್ದ. ಬೆಳಗ್ಗೆ ಎಂಟು ಗಂಟೆಯಾದರೂ ತಂದೆ ಎಚ್ಚರಗೊಂಡಿಲ್ಲ ಎಂದು ತಿರುಪಾಲರೆಡ್ಡಿ ಅವರ ಪುತ್ರ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಘಟನೆ ನಡೆದ ಬಳಿಕ ಆರೋಪಿ ಶಿವಶಂಕರ್ ತಲೆಮರೆಸಿ ಕೊಂಡಿದ್ದರಿಂದ ಆತನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಸಿಸಿಟಿವಿ ಆಫ್: ಪೇಯಿಂಗ್ ಗೆಸ್ಟ್’ನಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಸಿಸಿಟಿವಿ ಇರುವುದರಿಂದ ಕೊಲೆ ಮಾಡಿದರೆ ಸಿಕ್ಕಿ ಬೀಳುತ್ತೇನೆಂದು ಮೊದಲೇ ಸಂಚು ರೂಪಿಸಿದಂತೆ ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಆಫ್ ಮಾಡಿ ತಿರುಪಾಲರೆಡ್ಡಿ ಅವರನ್ನು ಹತ್ಯೆ ಮಾಡಿದ್ದ. ತಾನು ಕೆಲಸಕ್ಕೆ ಸೇರುವ ಮೊದಲು ಆರೋಪಿ ಯಾವುದೇ ದಾಖಲೆಗಳನ್ನು ಕೂಡ ಪಿಜಿ ಮಾಲೀಕರಿಗೆ ನೀಡಿರಲಿಲ್ಲ ಎಂದು ಪೊಲೀಸರು ಹೇಳಿದರು. ಘಟನೆ ನಡೆದು 48 ತಾಸಿನಲ್ಲಿ ಕೃತ್ಯ ಭೇದಿಸಿದ ಮೈಕೋಲೇಔಟ್ ಎಸಿಪಿ ಎಂ.ಎನ್. ಕರಿಬಸವನಗೌಡ ಹಾಗೂ ಇನ್ಸ್ಪೆಕ್ಟರ್ ಆರ್.ಎಂ. ಅಜಯ್ ನೇತೃತ್ವದ ತಂಡಕ್ಕೆ ಒಂದು ಲಕ್ಷ ನಗದು ಬಹುಮಾನ ನೀಡಿದ್ದಾರೆ ಆಗ್ನೇಯ ವಿಭಾಗ ಡಿಸಿಪಿ .ಬೋರಲಿಂಗಯ್ಯ ತಿಳಿಸಿದರು.
ಆರೋಪಿ ಶಿವಶಂಕರ್ ಮಹತೋ ಇದ್ದ ರೂಮ್ನಲ್ಲಿ ಟಿವಿ ಅಳವಡಿಸಲಾಗಿತ್ತು. ನಿತ್ಯ ಆರೋಪಿ ಹಿಂದಿಯಲ್ಲಿ ಪ್ರಸಾರವಾಗುವ `ಸಿಐಡಿ' ಎಂಬ ಧಾರಾವಾಹಿ ವೀಕ್ಷಣೆ ಮಾಡುತ್ತಿದ್ದ. ಅದರಂತೆ ಮೊಬೈಲ್ ಸಿಮ್ ಗಳನ್ನು ಬದಲಿಸಿ ವಿಮಾನದ ಮೂಲಕ ಲೂಧಿಯಾನಕ್ಕೆ ಹೋಗಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
