ನಾನು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಹತ್ತಾರು ಜನಪರ ಯೋಜನೆಗಳನ್ನು ಬಿಟ್ಟರೆ ಸಿದ್ದರಾಮಯ್ಯ ಸರ್ಕಾರ ಹೊಸದಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ.

ಬಂಗಾರಪೇಟೆ(ಜೂ.26): ‘ನನಗೆ ಮುಖ್ಯಮಂತ್ರಿಯಾ​ಗುವ ಯಾವುದೇ ಕನಸಿಲ್ಲ. ಬದಲಾಗಿ ಜನರ ಸಮಸ್ಯೆ ಅರಿತು ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವ ಹಂಬಲದಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಗಾಂಧಿನಗರದಲ್ಲಿ ಪ್ರಧಾನಮಂತ್ರಿಗಳ ಉಜ್ವಲ್‌ ಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್‌ ಸಂಪರ್ಕದ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಹತ್ತಾರು ಜನಪರ ಯೋಜನೆಗಳನ್ನು ಬಿಟ್ಟರೆ ಸಿದ್ದರಾಮಯ್ಯ ಸರ್ಕಾರ ಹೊಸದಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ತನ್ನ ಸಾಧನೆ ಎಂದು ಹೇಳಿಕೊಂಡು ಮುಗ್ಧ ಜನರನ್ನು ವಂಚಿಸುತ್ತಿದೆ ಎಂದರು. ಮುಂಬರುವ ವಿಧಾನಸಭೆ ಚುನಾವಣೆ​ಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.