ಬೆಂಗಳೂರು(ಸೆ. 13): ಕನ್ನಡ ಸಂಘಟನೆಗಳು ತಮಿಳಿಗರು ಹಾಗೂ ತಮಿಳುನಾಡಿನ ವಾಹನಗಳನ್ನು ಬೇಕಂತಲೇ ಗುರಿಯಾಗಿಸಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷ ಆರೋಪಿಸಿದೆ. ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪನವರು ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮಿಳು ಭಾಷಿಕರೆಂಬ ಕಾರಣಕ್ಕೆ ಕನ್ನಡ ಸಂಘಟನೆಗಳ ಕಾರ್ಯಕರ್ತರು ಕೂಲಿ-ಕಾರ್ಮಿಕರನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಮುನಿಯಪ್ಪ ವಿಷಾದಿಸಿದ್ದಾರೆ. ಅಲ್ಲದೇ, ತಮಿಳುನಾಡಿನ ರಿಜಿಸ್ಟ್ರೇಷನ್ ಹೊಂದಿರುವ ವಾಹನಗಳನ್ನು ಹುಡುಕಿಹುಡುಕಿ ಹೊಡೆಯುತ್ತಿರುವುದು ಸರಿಯಲ್ಲ ಎಂದೂ ಬಿಎಸ್'ಪಿ ಮುಖಂಡರು ತಮ್ಮ ಪತ್ರದಲ್ಲಿ ಆಕ್ಷೇಪಿಸಿದ್ದಾರೆ. ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸರಕಾರ ಹತ್ತಿಕ್ಕುತ್ತಿಲ್ಲ. ತಮಿಳರ ಮೇಲೆ ಹಲ್ಲೆ ಮುಂದುವರಿದರೆ ಅದಕ್ಕೆ ಸರಕಾರವೇ ಹೊಣೆ ಎಂದು ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.