ಅಮಿತ್ ಶಾ ವಿಮಾನ ಓಡಿಸಲು ಕಟ್ಟುಕತೆ ಕಟ್ಟಿದ ಪೈಲಟ್ ಅತಂತ್ರ!
ಅಮಿತ್ ಶಾ ವಿಮಾನ ಓಡಿಸಲು ಕಟ್ಟುಕತೆ ಕಟ್ಟಿದ ಪೈಲಟ್ ಅತಂತ್ರ| ಸಿಕ್ಕಿಬಿದ್ದ ಬಳಿಕ ಬಿಎಸ್‌ಎಫ್ ಹುದ್ದೆಗೆ ರಾಜೀನಾಮೆ| ತನಿಖೆಯಾಗುವವರೆಗೂ ಅಂಗೀಕರಿಸಲ್ಲ: ಬಿಎಸ್‌ಎಫ್
ನವದೆಹಲಿ[ಅ.08] ಕೇಂದ್ರ ಸರ್ಕಾರದ ನಂ.2 ನಾಯಕರಾಗಿರುವ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಣಿಸುವ ವಿಮಾನವನ್ನು ಚಾಲನೆ ಮಾಡುವ ಆಸೆಯೊಂದಿಗೆ ಬೇರೊಬ್ಬ ಪೈಲಟ್‌ರ ಅನುಭವವನ್ನು ತನ್ನದೆಂದು ಹೇಳಿಕೊಂಡಿದ್ದ, ಬಿಎಸ್‌ಎಫ್ ಪರವಾಗಿ ಸುಳ್ಳು ಇ-ಮೇಲ್ ಕಳುಹಿಸಿದ್ದ ಪೈಲಟ್‌ವೊಬ್ಬರು ಇದೀಗ ಅತಂತ್ರರಾಗಿದ್ದಾರೆ. ಕಳ್ಳಾಟ ಬಯಲಾಗಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಕಾರ್ಗಿಲ್ ಸಮರದ ಹೀರೋ ಕೂಡ ಆಗಿರುವ ಈ ಅಧಿಕಾರಿ ಬಿಎಸ್‌ಎಫ್‌ನ ಪೈಲಟ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಇಲಾಖಾ ವಿಚಾರಣಾ ನಡೆಯುತ್ತಿರುವುದರಿಂದ ರಾಜೀನಾಮೆ ಅಂಗೀಕರಿಸಲಾಗದು ಎಂದು ಬಿಎಸ್‌ಎಫ್ ಕಡ್ಡಿ ಮುರಿದಂತೆ ಹೇಳಿದೆ.
ಬಿಎಸ್‌ಎಫ್‌ನಲ್ಲಿ ವಿಂಗ್ ಕಮಾಂಡರ್ ಆಗಿರುವ ಜೆ.ಎಸ್. ಸಂಗವಾನ್ ಎಂಬುವರೇ ಇದೀಗ ಅತಂತ್ರ ಪರಿಸ್ಥಿತಿಗೆ ಗುರಿಯಾಗಿರುವ ಪೈಲಟ್. ಕೇಂದ್ರ ಗೃಹ ಸಚಿವರ ಓಡಾಟಕ್ಕೆ ಬಿಎಸ್‌ಎಫ್ ಬಳಿ ಪ್ರತ್ಯೇಕ ವಿಮಾನವಿಲ್ಲ. ಹೀಗಾಗಿ ಎಲ್ ಅಂಡ್ ಟಿ ಕಂಪನಿಯ ವಿಮಾನವನ್ನು ಬಿಎಸ್‌ಎಫ್ ಬಳಕೆ ಮಾಡುತ್ತದೆ. ಈ ವಿಚಾರ ತಿಳಿದಿದ್ದ ಸಂಗವಾನ್ ಅವರು, ಕಳೆದ ಜೂನ್ ಹಾಗೂ ಜುಲೈನಲ್ಲಿ ಎಲ್ ಅಂಡ್ ಟಿ ಕಂಪನಿಗೆ ಬಿಎಸ್‌ಎಫ್‌ನ ವಿಮಾನ ವಿಭಾಗದ ಹೆಸರಿನಲ್ಲಿ ಇ-ಮೇಲ್ ಕಳುಹಿಸಿದ್ದರು.
‘ಸಂಗವಾನ್ ಅವರಿಗೆ 4000 ಗಂಟೆಗಳ ವಿಮಾನ ಹಾರಾಟ ಅನುಭವವಿದೆ. ಹೀಗಾಗಿ ಅಮಿತ್ ಶಾ ವಿಮಾನ ಚಾಲನೆ ಮಾಡುವ ಅವಕಾಶವನ್ನು ನೀಡಬೇಕು’ ಎಂದು ಇ-ಮೇಲ್‌ನಲ್ಲಿ ಕೋರಲಾಗಿತ್ತು. ಇದನ್ನು ನಂಬಿದ ಎಲ್ ಅಂಡ್ ಟಿ, ಅಮಿತ್ ಪ್ರಯಾಣ ಬೆಳೆಸಲಿದ್ದ ವಿಮಾನಕ್ಕೆ ಸಂಗವಾನ್ ಅವರನ್ನೇ ನಿಯೋಜಿಸಿತ್ತು. ಇದೇ ವೇಳೆ, ಸಂಗವಾನ್ ಕುರಿತು ಬಿಎಸ್‌ಎಫ್ ಬಳಿ ವಿಚಾರಿಸಿದಾಗ ಅವರ ಬಣ್ಣ ಬಯಲಾಗಿತ್ತು. ತಕ್ಷಣವೇ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿತು.
ವಿಐಪಿಗಳ ವಿಮಾನ ಚಾಲನೆ ಮಾಡುವಷ್ಟು ಅನುಭವ ಸಂಗವಾನ್ ಅವರಿಗೆ ಇರಲಿಲ್ಲ. ಹೀಗಾಗಿ ಹಿರಿಯ ಅಧಿಕಾರಿಯ ಅನುಭವವನ್ನೇ ತಮ್ಮದು ಎಂದು ಅವರು ಎಲ್ ಅಂಡ್ ಟಿ ಕಂಪನಿಗೆ ಇ-ಮೇಲ್ ಕಳುಹಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಂದು ತಮ್ಮ ಮೊಬೈಲ್ ಸಂಖ್ಯೆಯನ್ನೇ ನೀಡಿದ್ದರು!
ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: