ಬೆಂಗಳೂರು[ಜು.27]: ದಶಕಗಳ ಕಾಲ ರೈತ ಪರ ಹೋರಾಟದ ಮೂಲಕ ಕೇಸರಿ ಪಡೆಗೆ ದಕ್ಷಿಣ ಭಾರತದ ಹೆಬ್ಬಾಗಿಲು ತೆರೆದ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯಾಡಳಿತ ಚುಕ್ಕಾಣಿ ಹಿಡಿದು ಚಾರಿತ್ರಿಕ ದಾಖಲೆ ನಿರ್ಮಿಸಿದ್ದಾರೆ.

ಯಡಿಯೂರಪ್ಪನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯಲ್ಲಾದರೂ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಹೀಗೆ ವಿಭಿನ್ನ ಪ್ರಾದೇಶಿಕ ನೆಲೆಗಟ್ಟಿನಲ್ಲೇ ಬೆಳೆದು ರಾಜಕೀಯ ಜೀವನ ರೂಪಿಸಿಕೊಂಡ ಅವರು, ಸಾರ್ವಜನಿಕ ಬದುಕಿನ ಪ್ರತಿ ಹಂತದಲ್ಲೂ ಸಂಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸುತ್ತಲೇ ಸಾಧನೆಯ ಶಿಖರಕ್ಕೇರಿದ ಧೀಮಂತ ನಾಯಕ. ವಿಪರೀತವಾದ ಸೈದ್ಧಾಂತಿಕ ನಿಲುವಿಗೆ ಅಂಟಿಕೊಳ್ಳದ ಕಾರಣಕ್ಕೆ ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುವ ಪಕ್ಷದಲ್ಲಿದ್ದರೂ ಯಡಿಯೂರಪ್ಪನವರಲ್ಲಿ ಅವರ ಟೀಕಾಕಾರರು ಸಹ ಜಾತ್ಯತೀತ ಮನೋಭಾವ ಕಂಡಿದ್ದಾರೆ.

ಮತ್ತೊಮ್ಮೆ ಸಿಎಂ ಆದ್ರು ಯಡಿಯೂರಪ್ಪ, ಹೊಸ ಇನಿಂಗ್ಸ್ ಆರಂಭ

ಒಂದು ಕಾಲದಲ್ಲಿ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಘೋಷವಾಕ್ಯವೇ ಬಿಜೆಪಿ ಕಾರ್ಯಕರ್ತರ ಉತ್ಸಾಹದ ಬುಗ್ಗೆಯಾಗಿತ್ತು. ಪುರಸಭೆ ಸದಸ್ಯನಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಅವರು ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಉತ್ತರ ಭಾರತದ ಪಕ್ಷ ಎಂಬ ಮಡಿವಂತಿಕೆ ತೊಲಗಿಸಿ ದಕ್ಷಿಣದಲ್ಲೂ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡುವಲ್ಲಿ ಯಡಿಯೂರಪ್ಪ ನವರ ಅವಿರತ ಪರಿಶ್ರಮವಿದೆ. ಈಗ ನಾಲ್ಕನೇ ಬಾರಿಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇತಿಹಾಸ ಬರೆದಿದ್ದಾರೆ.

ಬಾಲ್ಯದಲ್ಲೇ ಅನಾಥ:

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಸಿದ್ದಲಿಂಗಯ್ಯ ಹಾಗೂ ಪುಟ್ಟತಾಯಮ್ಮ ದಂಪತಿಯ ಪುತ್ರನಾಗಿ ಯಡಿಯೂರಪ್ಪ 1943ರ ಫೆಬ್ರವರಿ 27ರಂದು ಜನಿಸಿದರು. ತಮ್ಮ ನಾಲ್ಕನೇ ವಯಸ್ಸಿನಲ್ಲೇ ತಾಯಿ ಕಳೆದುಕೊಂಡ ಅವರು, ಭವಿಷ್ಯದಲ್ಲಿ ರಾಜ್ಯಾಡಳಿತ ನಡೆಸುತ್ತಾರೆಂದು ಯಾರೂ ಊಹಿಸಿರಲಿಲ್ಲ. ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಸಿ, 1965ರಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡರು. ಆ ಉದ್ಯೋಗವನ್ನು ತ್ಯಜಿಸಿ ಶಿಕಾರಿಪುರದ ವೀರಭದ್ರ ಶಾಸ್ತ್ರಿ ಅವರ ಶಂಕರ್‌ ರೈಸ್‌ಮಿಲ್‌ನಲ್ಲಿ ಗುಮಾಸ್ತರಾದರು.

ಶಿಕಾರಿಪುರ ಪ್ರವೇಶವು ಯಡಿಯೂರಪ್ಪ ಬದುಕಿನ ಹಾದಿಯನ್ನೇ ಬದಲಾಯಿಸಿತು. 1967ರಲ್ಲಿ ಆ ರೈಸ್‌ಮಿಲ… ಮಾಲಿಕರ ಪುತ್ರಿ ಮೈತ್ರಾದೇವಿಯವರನ್ನು ವಿವಾಹವಾದರು. 1972ರಲ್ಲಿ ಶಿಕಾರಿಪುರ ತಾಲೂಕಿನ ಜನಸಂಘದ ಅಧ್ಯಕ್ಷರಾದರು. ಅಲ್ಲಿಂದ ರಾಜಕೀಯ ಯುಗಕ್ಕೆ ಅಡಿಯಿಟ್ಟರು. 1975ರ ತುರ್ತು ಪರಿಸ್ಥಿತಿ ವೇಳೆ ಯಡಿಯೂರಪ್ಪ ಬಂಧನಕ್ಕೊಳಗಾಗಿ ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ 45 ದಿನಗಳು ಸೆರೆವಾಸ ಅನುಭವಿಸಿದರು. ಶಿಕಾರಿಪುರದಲ್ಲಿ ಜೀತ ಪದ್ಧತಿ ವಿರುದ್ಧ ಹೋರಾಟ ಪ್ರಾರಂಭಿಸಿದ ಅವರು, 1700 ಜೀತದಾಳುಗಳಿಗೆ ಹೊಸ ಬದುಕಿನ ದಾರಿ ತೋರಿಸಿದರು. ಅದೇ ಹೊತ್ತಿಗೆ ಬಗರ್‌ ಹುಕುಂ ರೈತರ ಪರವಾಗಿ ಯಡಿಯೂರಪ್ಪ ಹೋರಾಟಕ್ಕಿಳಿದರು. 1977ರಲ್ಲಿ ಶಿಕಾಪುರ ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾದರು.

80ರಲ್ಲಿ ಶಿಕಾರಿಪುರ ತಾಲೂಕು ಬಿಜೆಪಿ ಸಾರಥ್ಯ ವಹಿಸಿದರು. ಬಳಿಕ ಪಕ್ಷದ ಶಿವಮೊಗ್ಗ ಜಿಲ್ಲಾ ನಾಯಕತ್ವ ಸಿಕ್ಕಿತು. ಹೀಗೆ ಹಂತ ಹಂತವಾಗಿ ರಾಜಕೀಯ ಪಯಣ ಆರಂಭಿಸಿದ ಯಡಿಯೂರಪ್ಪ, 1983ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. 1981ರಲ್ಲಿ ಜೀತ ಪದ್ಧತಿ ಮುಕ್ತಿಗೆ ಪಾದಯಾತ್ರೆ, 1987ರಲ್ಲಿ ಸೈಕಲ್‌ ಜಾಥಾ ಮುಖಾಂತರ ಬರಪರ ಸ್ಥಿತಿ ಅಧ್ಯಯನ ನಡೆಸಿದ್ದು ರಾಜ್ಯದ ಗಮನ ಸೆಳೆಯತು. ಆಡಳಿತ ವರ್ಗಕ್ಕೆ ಚಾಟಿ ಬೀಸಿದ ಅವರು, ಸಂತ್ರಸ್ತರಿಗೆ ನ್ಯಾಯ ಕೊಡಿಸವಲ್ಲಿ ಕೂಡಾ ಸಫಲತೆ ಕಂಡರು.

ರೈತರು, ಶೋಷಿತರ ಪರವಾದ ಕಾಳಜಿ ಮತ್ತು ಹೋರಾಟದ ಗುರುತಿಸಿದ ಬಿಜೆಪಿ ವರಿಷ್ಠರು, 1988ರಲ್ಲಿ ರಾಜ್ಯ ಬಿಜೆಪಿ ದಂಡನಾಯಕ ಸ್ಥಾನವನ್ನು ಯಡಿಯೂರಪ್ಪನವರಿಗೆ ದಯ ಪಾಲಿಸಿದರು. ಅಲ್ಲಿಂದ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಯುಗ ಶುರುವಾಯಿತು. ಮೂರು ದಶಕಗಳು ಎಂದೆಗುಂದದೆ ಪಕ್ಷ ಸಂಘಟಿಸಿದ ಪ್ರತಿಫಲ ಮುಖ್ಯಮಂತ್ರಿಯಾಗುವ ಸುಯೋಗ ತಂದಿತು.

ರಾಜ್ಯ ರಾಜಕೀಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಯಡಿಯೂರಪ್ಪ ಅವರು ಅಲ್ಪಾವಧಿಗೆ ರಾಷ್ಟ್ರ ರಾಜಕಾರಣದಲ್ಲೂ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಬಿಜೆಪಿ ಪಕ್ಷದ ರಾಷ್ಟ್ರೀಯ ಘಟಕಕ್ಕೆ ಅವರು ನೇಮಕಗೊಂಡಿದ್ದರು. ಆದರೆ ದೆಹಲಿ ರಾಜಕಾರಣ ಒಗ್ಗಿಕೊಳ್ಳಲಾಗದೆ ಮತ್ತೆ ರಾಜ್ಯಕ್ಕೆ ಪಯಣ ಬೆಳೆಸಿದರು. 1994ರಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ಕಾಲದಲ್ಲಿ ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಮಾತು ಜನಜನಿತವಾಯಿತು. ರೈತ ವಿಚಾರಗಳಿಗೆ ದೊಡ್ಡ ದನಿಯಾಗುತ್ತಿದ್ದರು. 1999ರಲ್ಲಿ ಅಧಿಕಾರ ಹಿಡಿಯುವ ಸೂಚನೆಗಳು ಸಿಕ್ಕಿದ್ದರೂ ಕೊನೆಗೆ ತಪ್ಪಿತು.

ಅಂದು ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದ ಕ್ಷೇತ್ರದಲ್ಲಿ ಪರಾಜಿತರಾದ ಯಡಿಯೂರಪ್ಪ, 2000ರಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾದರು. 2006ರಲ್ಲಿ ಉಪ ಮುಖ್ಯಮಂತ್ರಿ ನಂತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಹೆಗಲ ಮೇಲೆ ಹಸಿರು ಶಾಲು ಕಂಗೊಳಿಸಿತುತ್ತಿತ್ತು. ಮಣ್ಣಿನ ಮಕ್ಕಳ ಕಲಾಣ್ಯಕ್ಕೆ ದುಡಿಯುತ್ತಿದ್ದ ಅವರು, ದೇಶದಲ್ಲೇ ಮೊದಲ ಬಾರಿಗೆ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್‌ ಮಂಡಿಸಿ ಇತಿಹಾಸ ಬರೆದರು.

2012ರಲ್ಲಿ ಸಂಭವಿಸಿದ ರಾಜಕೀಯ ವಿಪ್ಲವಕ್ಕೆ ಸಿಲುಕಿದ ಅವರು, ತಾವೇ ಬೆವರು ಸುರಿಸಿ ಕಟ್ಟಿದ್ದ ಬಿಜೆಪಿ ಗೂಡು ತೊರೆದು ಕರ್ನಾಟಕ ಜನತಾ ಪಕ್ಷ ಕಟ್ಟಿದರು. 2014ರ ಲೋಕಸಭಾ ಚುನಾವಣೆ ಹೊತ್ತಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸುವ ಘೋಷಣೆ ಮೊಳಗಿಸಿ ಮಾತೃ ಪಕ್ಷಕ್ಕೆ ಮರಳಿದರು. ಅಂದು ತಾವು ಸಹ ಮೊದಲ ಬಾರಿಗೆ ಶಿವಮೊಗ್ಗದಿಂದ ಲೋಕಸಭೆ ಪ್ರವೇಶಿಸಿದರು. ಅನಂತರ ಬಿಜೆಪಿ ಸಾರಥ್ಯ ಹೊತ್ತ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಮರಕ್ಕಿಳಿದರು. ಕಾಂಗ್ರೆಸ್‌ ವಿರುದ್ಧ ಗುಡುಗುತ್ತಲೇ ಜನರಲ್ಲಿ ಆಡಳಿತ ವಿರೋಧಿ ಅಲೆ ಗಟ್ಟಿಗೊಳಿಸಿದರು. ಇದರಿಂದಾಗಿ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನ ಗೆದ್ದು ಅಧಿಕಾರದ ಸನಿಹಕ್ಕೆ ಬಂದಿತು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ಬಹುಮತ ಸಿಗದೆ ಮೂರೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. ತರುವಾಯ ಜೆಡಿಎಸ್‌-ಕಾಂಗ್ರೆಸ್‌ ಸಮಿಶ್ರ ಸರ್ಕಾರ ರಚನೆಯಾಯಿತು. 14 ತಿಂಗಳ ಬಳಿಕ ಮತ್ತೆ ಮುಖ್ಯಮಂತ್ರಿ ಪದವಿ ಯಡಿಯೂರಪ್ಪನವರಿಗೆ ಒಲಿದಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಆಡಳಿತದ ಎರಡನೇ ಪರ್ವಕ್ಕೆ ಮುನ್ನಡೆ ಬರೆದಂತಾಗಿದೆ.

ಯಡಿಯೂರಪ್ಪ ಜೀವನ ಹಾದಿ

* 1972ರಲ್ಲಿ ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿ ನೇಮಕ.

* 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. 45 ದಿನಗಳ ಜೈಲುವಾಸ.

* 1977ರಲ್ಲಿ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ ಆಯ್ಕೆ.

* 1980ರಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ.

* 1981ರಲ್ಲಿ ಜೀತಾದಾಳು ವಿಮುಕ್ತಿ ಹೋರಾಟದ ನಾಯಕತ್ವ ಪಾದಯಾತ್ರೆ.

* 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನ ಸಭೆಗೆ ಪ್ರವೇಶ.

* 1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ.

* 1988ರಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

* 1988ರಲ್ಲಿ ಬಸವ ಕಲ್ಯಾಣದಿಂದ ಬೆಂಗಳೂರು ವರೆಗೆ ರೈತ ಜಾಥಾ ಹಾಗೂ ಬನವಾಸಿಯಿಂದ ಬೆಂಗಳೂರು ವರೆಗೆ ರೈತ ಜಾಥಾದ ನೇತೃತ್ವ.

* 1991ರಲ್ಲಿ ಡಾ. ಮುರಳೀ ಮನೋಹರ ಜೋಶಿ ನೇತೃತ್ವದಲ್ಲಿ ನಡೆದ ಏಕತಾ ಯಾತ್ರೆಯಲ್ಲಿ ಭಾಗಿ. ಶ್ರೀನಗರದ ಲಾಲ… ಚೌಕದಲ್ಲಿ ತ್ರಿವರ್ಣ ಧ್ವಜಾರೋಹಣ.

* 1992ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ.

* 1994ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ.

* 1998 ತಲಕಾವೇರಿಯಿಂದ ಕೆಆರ್‌ಎಸ್‌ವರೆಗೆ ರೈತ ಜಾಥಾ.

* 2000ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆ.

* 2003 ಬರ್ಗ ಹುಕುಂ ರೈತರ ಜಮೀನು ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ

* 2004ರಲ್ಲಿ 5ನೇ ಬಾರಿ ವಿಧಾನಸಭೆಗೆ ಪ್ರವೇಶ, ಪ್ರತಿಪಕ್ಷದ ನಾಯಕನಾಗಿ ಆಯ್ಕೆ.

* 2006 ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ.

* 2007ರ ನ.12ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಅಧಿಕಾರ ಸ್ವೀಕಾರ

* 2008 ಮೇ 30ರಂದು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.

* 2011 ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ

* 2014 ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸತ್‌ ಪ್ರವೇಶ.

* 2014ರಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ.

* 2016ರಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ನೇಮಕ

* 2017-2018ರಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ. 224 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ

* 2018ರ ಮೇ 17ರಂದು​ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ.

* 2018 ಮೇ 25ರಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರಾದರು.

2019 ಜು.25- ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಅಧಿಕಾರ ಸ್ವೀಕಾರ