ಬೆಂಗಳೂರು[ಜು.28]: ಬಿಜೆಪಿಗೆ ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಇಲ್ಲದಿದ್ದರೂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು ಸಂವಿಧಾನ ಬಾಹಿರ. ಅವರ ಸರ್ಕಾರಕ್ಕೆ ಸಂವಿಧಾನಿಕ ಚೌಕಟ್ಟಿನಲ್ಲಿ ಮಾನ್ಯತೆಯೇ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ವಿಧಾನಸಭೆಯಲ್ಲಿ ಒಟ್ಟು 221 ಸದಸ್ಯರಿದ್ದಾರೆ. ಹಾಗಾಗಿ ಸರ್ಕಾರ ರಚನೆಗೆ ಒಟ್ಟು ಸದಸ್ಯ ಬಲದ ಅರ್ಧಕ್ಕಿಂತ ಹೆಚ್ಚು ಅಂದರೆ 111 ಸಂಖ್ಯಾಬಲ ಬೇಕು. ಅಷ್ಟು ಸಂಖ್ಯಾಬಲ ಬಿಜೆಪಿಯವರಿಗೆ ಎಲ್ಲಿದೆ? ಅವರ ಬಳಿ ಇರುವುದು 105 ಅಷ್ಟೆ.

ಹಾಗಾಗಿ ಸಂಖ್ಯಾಬಲವೇ ಇಲ್ಲದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದೇ ಸಂವಿಧಾನ ಬಾಹಿರ. ಅವರ ಸರ್ಕಾರಕ್ಕೆ ಸಂವಿಧಾನಿಕ ಚೌಕಟ್ಟಿನಲ್ಲಿ ಮಾನ್ಯತೆಯೇ ಇಲ್ಲ ಎಂದರು.

ಸರ್ಕಾರ ರಚಿಸಲು ಹೊರಟಿರುವ ಯಡಿಯೂರಪ್ಪ ರಾಜ್ಯಪಾಲರಿಗೆ 111 ಶಾಸಕರ ಸಂಖ್ಯಾಬಲದ ಪಟ್ಟಿ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಅವರು, ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಹೆಸರನ್ನು ಅವರು ಪಟ್ಟಿಯಲ್ಲಿ ಕೊಡಲಾಗುವುದಿಲ್ಲ. ಇದರಿಂದ ಸರ್ಕಾರ ರಚನೆಗೆ ಅಗತ್ಯ ಸರಳ ಬಹುಮತ ಬಿಜೆಪಿಯಲ್ಲಿ ಇಲ್ಲವೇ ಇಲ್ಲ. ಹೀಗಿರುವಾಗ ಸೋಮವಾರ ಹೇಗೆ ಬಹುಮತ ಸಾಬೀತು ಪಡಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಮೈತ್ರಿ ಪಕ್ಷದ ಅತೃಪ್ತ ಶಾಸಕರಿಗೆ ಹಣ, ಅಧಿಕಾರ ಆಸೆ ತೋರಿಸಿ ಕೂಡಿ ಹಾಕಲಾಗಿತ್ತು. ಒಂದು ವೇಳೆ ಅವರು ಬೆಂಗಳೂರಿನಲ್ಲಿಯೇ ಇದ್ದಿದ್ದರೇ ಅಥವಾ ವಾಪಸ್ ಬಂದಿದ್ದರೆ ಮೈತ್ರಿ ಸರ್ಕಾರ ಪತನವಾಗುತ್ತಿರಲಿಲ್ಲ. ಇದರ ಹಿಂದೆ ನೇರವಾಗಿ ಬಿಜೆಪಿಯವರ ಕೈವಾಡವಿದೆ ಎಂದು ಆರೋಪಿಸಿದರು. ಜೆಡಿಎಸ್‌ನ ಕೆಲ ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿರುವುದಾಗಿ ಜಿ.ಟಿ.ದೇವೇಗೌಡ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ, ಅವರನ್ನೇ ಹೇಳಿ ಎಂದರು.