ವಿಧಾನಸಭೆ[ಜು.30]: ‘ಸ್ಪಷ್ಟ ಜನಾದೇಶವಿಲ್ಲದೆ ಕಳೆದ ಮೂರು ಬಾರಿ ನೀವು ಮುಖ್ಯಮಂತ್ರಿಯಾಗಿದ್ದಿರಿ. ಈಗಲೂ ಜನಾದೇಶವಿಲ್ಲ. ಆದಾಗ್ಯೂ, ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದೀರಿ. ಇಷ್ಟಾದರೂ ನೀವು ಪೂರ್ಣಾವಧಿ ಪೂರೈಸಬೇಕು ಎಂಬುದು ನನ್ನ ಆಶಯ. ಆದರೆ, ನೀವು ಸ್ಥಿರ ಸರ್ಕಾರ ಕೊಡಲು ಹಾಗೂ ಪೂರ್ಣಾವಧಿ ಪೂರೈಸಲು ಸಾಧ್ಯವೇ ಇಲ್ಲ.’

ಹೀಗಂತ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕಾಲೆಳೆದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, 2008ರಲ್ಲಿ ನಿಮಗೆ ಸ್ಪಷ್ಟಜನಾದೇಶ ಸಿಗಲಿಲ್ಲ. 2018ರಲ್ಲೂ ಜನಾದೇಶ ಸಿಗಲಿಲ್ಲ. ಆಗಲೂ ಸರ್ಕಾರ ರಚನೆ ಮಾಡುವುದಾಗಿ ಹೋಗಿ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿದ್ದಿರಿ. ಈಗಲೂ ನಿಮಗೆ ಜನಾದೇಶವಿಲ್ಲ. 3 ಮಂದಿ ಶಾಸಕರ ಅನರ್ಹತೆ ಆಗಿದ್ದಾಗ ಸದನದ ಬಲ 222 ಇತ್ತು. ಬಹುಮತಕ್ಕೆ 112 ಶಾಸಕರ ಬಲ ಬೇಕಾಗಿತ್ತು. ಆದರೆ, 105 ಸ್ಥಾನ ಇಟ್ಟುಕೊಂಡೇ ಅಸಂವಿಧಾನಿಕ ಹಾಗೂ ಅನೈತಿಕವಾಗಿ ಸರ್ಕಾರ ರಚನೆ ಮಾಡಿದಿರಿ ಎಂದು ಟೀಕಿಸಿದರು.

ನಮ್ಮ ಶಾಸಕರು ಅತೃಪ್ತರಾಗಿರಲಿಲ್ಲ. ನೀವೇ ಅವರನ್ನು ಅತೃಪ್ತರನ್ನಾಗಿ ಮಾಡಿದಿರಿ. ತೃಪ್ತರೋ, ಅತೃಪ್ತರೋ ಅಂತಹವರನ್ನು ಕಟ್ಟಿಕೊಂಡು ಸ್ಥಿರ ಸರ್ಕಾರ ಕೊಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಜನರೂ ಇದನ್ನು ಒಪ್ಪುವುದಿಲ್ಲ. ಮುಖ್ಯಮಂತ್ರಿಯಾಗಿ ನೀವು ಪೂರ್ಣಾವಧಿ ಇರಬೇಕು ಎಂಬುದು ಆಸೆ ನನಗಿದೆ. ಆದರೆ, ನೀವು ಪೂರ್ಣಾವಧಿ ಇರುತ್ತೀರಿ ಎಂಬ ನಂಬಿಕೆ ಇಲ್ಲ ಎಂದರು.

ನೇಕಾರರ ಸಾಲ ಮನ್ನಾ ನಾನೇ ಘೋಷಿಸಿದ್ದೆ:

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಮಾಡಿದ ಬಳಿಕ ಕೇಂದ್ರದ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ಕೊಡುವ 6 ಸಾವಿರ ರು. ಜತೆಗೆ 4 ಸಾವಿರ ರು. ಸೇರಿಸಿ ರೈತರಿಗೆ ಪ್ರತಿ ವರ್ಷ 10 ಸಾವಿರ ರು. ನೀಡುವುದಾಗಿ ಘೋಷಣೆ ಮಾಡಿದ್ದೀರಿ. ಈ ಕಾರ್ಯಕ್ರಮವನ್ನು ನನ್ನ ಅಂತಿಮ ಬಜೆಟ್‌ನಲ್ಲಿಯೇ ಘೋಷಣೆ ಮಾಡಿದ್ದೆ. ‘ರೈತ ಬೆಳಕು’ ಹೆಸರಿನಲ್ಲಿ ಒಣ ಬೇಸಾಯ ಮಾಡುವ ಸಣ್ಣ ರೈತರಿಗೆ ವಾರ್ಷಿಕ 10 ಸಾವಿರ ರು. ನೀಡುವುದಾಗಿ ಘೋಷಿಸಿದ್ದೆ. ರೈತರ ಸಾಲಮನ್ನಾದಿಂದ ಅನುಷ್ಠಾನ ಸ್ವಲ್ಪ ವಿಳಂಬವಾಯಿತು. ಉಳಿದಂತೆ ನೇಕಾರರ ಸಾಲ ಮನ್ನಾ ಸಹ ನಾನೇ ಮಾಡಿದ್ದೆ. ನನ್ನ ಅವಧಿಯಲ್ಲಿ ಎರಡು ಬಾರಿ ನೇಕಾರರ ಸಾಲ ಮನ್ನಾ ಮಾಡಿದ್ದೇನೆ. ಅಂತಿಮ ಬಜೆಟ್‌ನಲ್ಲೂ ಸಾಲ ಮನ್ನಾ ಘೋಷಿಸಿದ್ದೆ. ಇದನ್ನು ನೀವು ಪುನಃ ಪುನರುಚ್ಚಾರ ಮಾಡಿದ್ದೀರಿ. ಇದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಜತೆಗೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೀರಿ. ಅದಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವೇಳೆ ಅವರು, ಇಂದು ಇಡೀ ದಿನ ನಿಮಗೆ ಅಭಿನಂದನೆ. ಮುಂದಿನ ಅಧಿವೇಶನದಲ್ಲಿ ನಿಂದನೆ ಎಂದು ಹಾಸ್ಯಚಟಾಕಿ ಹಾರಿಸಿದರು.

ಆಡಳಿತ ಯಂತ್ರ ಸ್ಥಗಿತವಾಗಿರಲಿಲ್ಲ:

ಯಡಿಯೂರಪ್ಪ ಅವರು ಯಾವ ಮಾರ್ಗದಿಂದ ಮುಖ್ಯಮಂತ್ರಿಯಾಗಿದ್ದರೂ ಅಭಿನಂದಿಸಬೇಕು. ಆದರೆ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ. ಆಡಳಿತ ಯಂತ್ರ ಸ್ಥಗಿತ ಆಗಿರಲಿಲ್ಲ. ಉಭಯ ಪಕ್ಷಗಳ ಪ್ರಣಾಳಿಕೆಯಲ್ಲಿನ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಪ್ರಾಮಾಣಿಕವಾಗಿ ಜಾರಿ ಮಾಡುವ ಪ್ರಯತ್ನ ಮಾಡಿದ್ದೇವೆ. ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮ ಮುಂದುವರೆಸಿದ್ದೇವೆ. ಹದಿನಾಲ್ಕು ತಿಂಗಳು ಜನರು ಮೆಚ್ಚಿಕೊಳ್ಳುವ ರೀತಿಯಲ್ಲಿ ಆಡಳಿತ ನಡೆದಿದೆ ಎಂದು ಹೇಳಿದರು.