ಬೆಂಗಳೂರು :  ಆಡಳಿತಾರೂಢ ಕಾಂಗ್ರೆಸ್ಸಿನ ಅತೃಪ್ತ ಶಾಸಕರು ರಾಜೀನಾಮೆ ನೀಡುವ ವಿಚಾರದಲ್ಲಿ ಮತ್ತು ಮುಂದೆ ಪರ್ಯಾಯ ಸರ್ಕಾರ ರಚನೆ ಸಂದರ್ಭ ನಿರ್ಮಾಣವಾದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಪ್ರತಿಪಕ್ಷ ಬಿಜೆಪಿ ತೀರ್ಮಾನಿಸಿದೆ.

ಅಲ್ಲದೆ, ಈ ವಿಚಾರದಲ್ಲಿ ಪಕ್ಷದ ಮುಖಂಡರು ಯಾವುದೇ ರೀತಿಯ ಅನಗತ್ಯ ಅಥವಾ ವಿವಾದ ಸೃಷ್ಟಿಸುವಂಥ ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕಟ್ಟಪ್ಪಣೆ ಮಾಡಿದ್ದಾರೆ.

ಗುರುವಾರ ನಡೆದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕಾಂಗ್ರೆಸ್ಸಿನ ಅತೃಪ್ತ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬರುವವರೆಗೆ ಕಾದು ನೋಡೋಣ. ಎಷ್ಟುಮಂದಿ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬುದೂ ಮುಖ್ಯವಾದದ್ದು. ಹೀಗಾಗಿ, ಯಾವುದೇ ರೀತಿಯ ಆತುರಕ್ಕೆ ಬಿದ್ದು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆಯೂ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡುವುದಾಗಿ ಹೇಳಿ ನಂತರ ಹಿಂದೆ ಸರಿದಿದ್ದು ನಡೆದಿದೆ. ಇದರಿಂದ ಅನಗತ್ಯವಾಗಿ ಪಕ್ಷಕ್ಕೆ ಕೆಟ್ಟಹೆಸರು ಬಂದಿದೆ. ಕಾಂಗ್ರೆಸ್‌ ಶಾಸಕರಲ್ಲಿ ನಿಜವಾಗಿಯೂ ಅಸಮಾಧಾನವಿದ್ದರೆ ಹೊರಬರುತ್ತಾರೆ. ಇಲ್ಲದಿದ್ದರೆ ಬಿಜೆಪಿ ಕಡೆ ಬೆರಳು ತೋರಿ ಬ್ಲ್ಯಾಕ್‌ಮೇಲ್‌ ಮಾಡಬಹುದು. ಹೀಗಾಗಿ, ಪರಿಸ್ಥಿತಿ ಸ್ಪಷ್ಟವಾಗಿ ಗೋಚರವಾಗುವವರೆಗೆ ತಟಸ್ಥರಾಗಿಯೇ ಉಳಿಯುವುದು ಸೂಕ್ತ ಎಂಬ ನಿಲುವನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ನಾಯಕರು ವ್ಯಕ್ತಪಡಿಸಿದರು ಎನ್ನಲಾಗಿದೆ.

ಈಗ ಬರುವ ಮೇ 19ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಲೋಕಸಭಾ ಚುನಾವಣೆಯ ಇನ್ನುಳಿದ ಹಂತಗಳ ಮತದಾನ ನಡೆಯುತ್ತಿದೆ. ಇಲ್ಲಿ ನಡೆಯುವ ಬೆಳವಣಿಗೆಗಳನ್ನು ಬಳಸಿಕೊಂಡು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸುವ ಮೂಲಕ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಪ್ರಯತ್ನ ನಡೆಸಬಹುದು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕ ವಿಚಾರದಲ್ಲಿ ತಲೆತೂರಿಸದೆ ಮೌನವಾಗಿಯೇ ಎಲ್ಲವನ್ನೂ ವೀಕ್ಷಿಸುವುದು ಸರಿ. ಪಕ್ಷದ ಎಲ್ಲ ನಾಯಕರು ಈ ಬಗ್ಗೆ ಯಾವುದೇ ರೀತಿಯ ಅನಗತ್ಯ ಹೇಳಿಕೆಗಳನ್ನು ನೀಡುವುದನ್ನು ಕೈಬಿಡಬೇಕು ಎಂದು ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.