ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಹಿಂದೆ ವಾಸವಿದ್ದ ರೇಸ್‌ಕೋರ್ಸ್‌ ರಸ್ತೆಯಲ್ಲಿನ ನಂ.2 ಬಂಗಲೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಯಡಿಯೂರಪ್ಪ ಅವರು ಈಗ ಪ್ರತಿಪಕ್ಷದ ನಾಯಕರಾಗಿರುವುದರಿಂದ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುತ್ತಾರೆ. ಹೀಗಾಗಿ ಅವರಿಗೆ ಸರ್ಕಾರದಿಂದಲೇ ಮನೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಹೀಗಾಗಿ, ತಾವು ಹಿಂದೆ ವಾಸವಿದ್ದ ನಿವಾಸದ ಬಗ್ಗೆಯೇ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಈ ನಿವಾಸದಲ್ಲಿ ಕಳೆದ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ರಮಾನಾಥ್‌ ರೈ ಅವರು ವಾಸವಾಗಿದ್ದಾರೆ. ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿರುವುದರಿಂದ ಮತ್ತು ಸಚಿವರಾಗಿಲ್ಲದ ಕಾರಣ ಆ ನಿವಾಸವನ್ನು ತೆರವುಗೊಳಿಸಬೇಕಾಗಿದೆ.

ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ವೇಳೆ ಮತ್ತು 2008ರ ನಂತರ ಮುಖ್ಯಮಂತ್ರಿಯಾಗಿದ್ದ ವೇಳೆ ಯಡಿಯೂರಪ್ಪ ಅವರು ಇದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿಯಾದರೂ ಅವರು ತಮಗೆ ನಿಗದಿಯಾಗಿದ್ದ ‘ಅನುಗ್ರಹ’ದತ್ತ ಸುಳಿಯಲಿಲ್ಲ. ಅಷ್ಟರಮಟ್ಟಿಗೆ ಈ ನಿವಾಸ ಅದೃಷ್ಟದ್ದು ಎಂಬುದು ಅವರ ನಂಬಿಕೆಯಾಗಿತ್ತು.

ಯಡಿಯೂರಪ್ಪ ಅವರು ಬರೆದ ಪತ್ರವನ್ನು ಮುಖ್ಯ ಕಾಯ್ರದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕಳುಹಿಸಿದ್ದಾರೆ. ಅಲ್ಲಿಂದ ಇದೇ ಬಂಗಲೆ ನೀಡುವ ಆದೇಶ ಹೊರಬೀಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.