ಹಾಸನ (ಜು.06): ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಬೆಜಿಪಿ ಸರಕಾರ ರಚಿಸುವ ಕಸರತ್ತು ಆರಂಭಿಸಿದೆ. ಯಾರೂ ಊಹಿಸದ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಸೇರಿ ಹಲವರು ಈಗಾಗಲೇ ಸ್ಪೀಕರ್ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ಬಂಡಾಯ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದಾರೆ. 

ಈ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

'ಯಡಿಯೂರಪ್ಪ ಮುಖ್ಯಮಂತ್ರಿ ಆಗಲೇಬೇಕೆಂದು ಏಳುಕೋಟಿ ಕನ್ನಡಿಗರು ಬಯಸಿದ್ದಾರೆ. ಇವತ್ತಾಗಬಹುದು, ನಾಳೆ‌ ಆಗಬಹುದು... ಯಡಿಯೂರಪ್ಪ ಸಿಎಂ ಆಗೇ ಆಗ್ತಾರೆ. ಮೈತ್ರಿ ಶಾಸಕರು ಆಂತರಿಕ ಕಚ್ಚಾಟ ಮಾಡಿಕೊಂಡು ಸರ್ಕಾರ ಬಿದ್ರೆ ಬಿಜೆಪಿ ಸರ್ಕಾರ ಮಾಡುತ್ತೆ,' ಎಂದು ಪ್ರೀತಂ ಮಾಧ್ಯಮಕ್ಕೆ ಹೇಳಿದರು. 

'ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಜನರು ಬಯಸಿದ್ದರು. ಕಾಂಗ್ರೆಸ್ ವಿರುದ್ಧ ಜನಾದೇಶವಿದ್ದರೂ, ಜೆಡಿಎಸ್‌ನೊಂದಿಗೆ ಸರಕಾರ ರಚನೆಯಾಯಿತು.  ಇದರ ಫಲವನ್ನು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ್ದಾರೆ. 

#KarnatakaPolitics ಬೆಳಗ್ಗೆಯಿಂದ ನಡೆದಿದ್ದೇನು?


ಈಗಲಾದ್ರು ಜನಾಭಿಪ್ರಾಯ ಅರಿತು ಬಿಜೆಪಿ ರಾಜ್ಯದ ಅಭಿವೃದ್ಧಿ ಮಾಡಲು ಅವಕಾಶ ನೀಡಲಿ. ಕೇವಲ‌ ನಂಬರ್ ಗೇಮ್ ಆಧಾರದಲ್ಲಿ ಜೆಡಿಎಸ್ ಕಾಂಗ್ರೆಸ್ ಸರ್ಕಾರ ಮಾಡಬೇಕು ಎನ್ನೋದು ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ. ಜನ ಬಿಜೆಪಿ ಸರಕಾರ ಬೇಕೆಂದು ಬಯಸುತ್ತಿದ್ದಾರೆ. ಈಗ ನಡೆಯುತ್ತಿರೋದು ಅದಕ್ಕೆ ಪೂರಕ ಬೆಳವಣಿಗೆ,' ಎಂದರು.