ಟಿಕೆಟ್‌ ಸಿಗದೆ ಮುನಿಸಿಕೊಂಡ ಹಾಲಪ್ಪ ಜತೆ ಬಿಎಸ್‌ವೈ ಚರ್ಚೆ

First Published 3, Apr 2018, 8:15 AM IST
BS Yeddyurappa Talk With Halappa
Highlights

ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಾತುಕತೆ ನಡೆಸಿ ಸಂಧಾನ ನಡೆಸಿದರು. ಆದರೆ ಹಾಲಪ್ಪ ಅವರಿಗೆ ಟಿಕೆಟ್‌ ನೀಡಿಕೆ ಬಗ್ಗೆ ಖಚಿತವಾದ ಯಾವುದೇ ಭರವಸೆ ನೀಡದ ಹಿನ್ನೆಲೆಯಲ್ಲಿ ಮುನಿಸು ಇನ್ನೂ ಪೂರ್ಣಪ್ರಮಾಣದಲ್ಲಿ ಕಡಿಮೆಯಾಗಿಲ್ಲ.

ಬೆಂಗಳೂರು : ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಾತುಕತೆ ನಡೆಸಿ ಸಂಧಾನ ನಡೆಸಿದರು. ಆದರೆ ಹಾಲಪ್ಪ ಅವರಿಗೆ ಟಿಕೆಟ್‌ ನೀಡಿಕೆ ಬಗ್ಗೆ ಖಚಿತವಾದ ಯಾವುದೇ ಭರವಸೆ ನೀಡದ ಹಿನ್ನೆಲೆಯಲ್ಲಿ ಮುನಿಸು ಇನ್ನೂ ಪೂರ್ಣಪ್ರಮಾಣದಲ್ಲಿ ಕಡಿಮೆಯಾಗಿಲ್ಲ.

ಡಾಲ​ರ್‍ಸ್ ಕಾಲೋನಿಯಲ್ಲಿನ ನಿವಾಸದಲ್ಲಿ ಸೋಮವಾರ ಸಂಸದೆ ಶೋಭಾ ಕರಂದ್ಲಾಜೆ, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶಗೌಡ ಸೇರಿದಂತೆ ಇತರರ ಸಮ್ಮುಖದಲ್ಲಿ ಮಾತುಕತೆ ನಡೆಸಿದರು. ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಹಾಲಪ್ಪ ಅವರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆ ಇದ್ದು, ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡುವುದು ಖಚಿತವಾಗಿದೆ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಹಾಲಪ್ಪ ಅವರನ್ನು ಕರೆದು ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದು, ಪಕ್ಷದಲ್ಲಿ ಸೂಕ್ತವಾದ ಸ್ಥಾನಮಾನ ನೀಡಲಾಗುವುದು. ಯಾರದೋ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳದೆ ಬಿಜೆಪಿಯಲ್ಲಿ ಉಳಿಯಬೇಕು. ನಿಮ್ಮ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದೆ ಎಂದು ಹೇಳಿ ಸಾಗರ ಕ್ಷೇತ್ರದ ಸ್ಥಿತಿಗತಿಗಳ ಕುರಿತು ವಿವರಿಸಿದರು ಎಂದು ಹೇಳಲಾಗಿದೆ. ಅಲ್ಲದೇ, ಪಕ್ಷ ತೊರೆದರೆ ಕ್ಷೇತ್ರದ ಮತದಾರರಿಗೆ ಬೇರೆ ಸಂದೇಶ ರವಾನೆಯಾಗಲಿದೆ. ರಾಜಕೀಯವಾಗಿಯೂ ಹಿನ್ನಡೆಯಾಗಲಿದೆ ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಭೆ ಬಳಿಕ ಮಾತನಾಡಿದ ಹರತಾಳು ಹಾಲಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚೆ ಖುಷಿ ತಂದಿದೆ. ನನಗೆ ಬೇಸರ ಇತ್ತು. ಆದರೆ, ಮುನಿಸು ಇರಲಿಲ್ಲ. ಕ್ಷೇತ್ರದಲ್ಲಿ ಅದರ ಪಾಡಿಗೆ ಪ್ರಚಾರ ನಡೆಯುತ್ತದೆ, ಸಾಗರದಲ್ಲಿ ಟಿಕೆಟ್‌ ಅಂತಿಮವಾಗಿರುವ ಬಗ್ಗೆ ಅಧ್ಯಕ್ಷರನ್ನೇ ಕೇಳಿ ಎಂದು ಹೇಳಿದರು.

ಬಿಜೆಪಿ ತೊರೆಯುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ಟಿಕೆಟ್‌ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಕಾಂಗ್ರೆಸ್‌ನಲ್ಲಿ ಹಲವು ನಾಯಕರ ಪರಿಚಯ ಇದೆ. ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರು ಕರೆ ಮಾಡಿ ಮಾತಾಡಿದ್ದಾರೆ. ಖುದ್ದು ಭೇಟಿಯಾಗುವುದಾಗಿ ತಿಳಿಸಿದ್ದೇನೆ. ಕುಟುಂಬದ ಸದಸ್ಯರ ಜತೆ ದೇವಸ್ಥಾನಕ್ಕೆ ತೆರಳಿದ ಕಾರಣ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದೇನೆ. ಬೇಸರ ಕಡಿಮೆಯಾಗಿದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಹಾಲಪ್ಪ ಅವರು ಸ್ಪಲ್ಪ ಬೇಸರ ಮಾಡಿಕೊಂಡಿದ್ದರು. ಯಡಿಯೂರಪ್ಪ ಅವರೊಂದಿಗೆ ಚರ್ಚೆ ಬಳಿಕ ಸಂತೋಷಗೊಂಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಮರಳಿ ಪ್ರಚಾರದಲ್ಲಿ ತೊಡಗಲಿದ್ದಾರೆ. ಟಿಕೆಟ್‌ ಪಟ್ಟಿಪ್ರಕಟವಾಗಿಲ್ಲ. ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ಹಾಲಪ್ಪ ಅವರು ಬಿಜೆಪಿಯಲ್ಲಿಯೇ ಇರುತ್ತಾರೆ ಎಂದರು.

loader