ಸಿದ್ದರಾಮಯ್ಯ ಬಗ್ಗೆ ಬಿಎಸ್ ವೈ ಮೃದು ಧೋರಣೆ

First Published 26, May 2018, 9:17 AM IST
BS Yeddyurappa Praises CM Siddaramaiah
Highlights

ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ .ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರ ಬಗ್ಗೆ ಮೃದು ಧೋರಣೆ ತಳೆದಿದ್ದಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ಣ ಎಂದು ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಬೆಂಗಳೂರು : ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ .ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರ ಬಗ್ಗೆ ಮೃದು ಧೋರಣೆ ತಳೆದಿದ್ದಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ಣ ಎಂದು ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ವಿಧಾನಸಭೆಯಲ್ಲಿ ಕುಮಾರಸ್ವಾಮಿ ಅವರ ಸುದೀರ್ಘ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷವಾದ ಕಾಂಗ್ರೆಸ್ ಪಕ್ಷದ ಬಗ್ಗೆ ಮೃದು ಭಾವ ಪ್ರದರ್ಶಿಸುವ ಮೂಲಕ ಹೊಸ ರಾಜಕೀಯ ದಾಳ ಉರುಳಿಸುವ ಪ್ರಯತ್ನ ಮಾಡಿದರು. ಕುಮಾರಸ್ವಾಮಿ ಅವರು ಪ್ರಮಾಣ ವಚವನ ಸ್ವೀಕರಿಸುವ ಸಮಾರಂಭವನ್ನು ನಾನು ದೃಶ್ಯ ಮಾಧ್ಯಮಗಳ ಮೂಲಕ ನೋಡುತ್ತಿದ್ದೆ. ಕಾಂಗ್ರೆಸ್ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ವೇದಿಕೆ ಬಳಿ ಬಂದಾಗ ಸಿದ್ದರಾಮಯ್ಯ ಅವರು ಮೂಲೆ ಯಲ್ಲಿ ಕುಳಿತುಕೊಂಡಿದ್ದರು. 

ನೀವು (ಕುಮಾರಸ್ವಾಮಿ) ಆ ಪುಣ್ಯಾ ತ್ಮನ (ಸಿದ್ದರಾಮಯ್ಯ) ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೀರಿ. ಆದರೆ, ವೇದಿಕೆ ಮೇಲೆ ಎಲ್ಲ ನಾಯಕರ ಜತೆ ಕೈಹಿಡಿದು ಪೋಸು ಕೊಟ್ಟಿರಿ. ಪಕ್ಕದಲ್ಲಿ ಸಿದ್ದರಾಮಯ್ಯ ಇರಲಿಲ್ಲ ಎಂದು ಕುಮಾರಸ್ವಾಮಿಗೆ ಕುಟುಕಿದರು. ನಿಮ್ಮನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದ ಜೆಡಿಎಸ್‌ಗೆ ಮುತ್ತಿಕ್ಕಿದ್ದೀರಿ. 

ನಾವೇನು ಜೆಡಿಎಸ್ಸನ್ನು ತಬ್ಬಿಕೊಳ್ಳಲು ಪ್ರಯತ್ನ ಮಾಡಿದ್ದೆವಾ? ಯಾಕೆ ಕಾಂಗ್ರೆಸ್ ನವರು ಸಿಎಂ ಹುದ್ದೆ ಕೇಳಲಿಲ್ಲ? ಆತುರವಾಗಿ ಅವರೊಂದಿಗೆ ಮೈತ್ರಿ ಅಗತ್ಯ ಏನಿತ್ತು? ಈ ಅಪ್ಪ ಮಕ್ಕಳು ಮಹಾರಥಿ ಕರ್ಣನಿಗೆ ಮಾಡಿ ದಂತೆ ನಿಮಗೆ ದ್ರೋಹ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ಸನ್ನು ಅಪ್ಪ ಮಕ್ಕಳು ಇಲ್ಲದಂತೆ ಮಾಡದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ ಎಂದರು.

loader