Asianet Suvarna News Asianet Suvarna News

ಯಡಿಯೂರಪ್ಪ ಸಿಎಂ ಆದರೆ ರಾಜ್ಯದ ಜನತೆ ಏನೆಲ್ಲಾ ನಿರೀಕ್ಷಿಸಬಹುದು ಗೊತ್ತೆ..?

‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಯಡಿಯೂರಪ್ಪ ಅವರು ಯಾತ್ರೆಯ ಅನುಭವಗಳನ್ನು ಹಂಚಿಕೊಳ್ಳುವು ದರ ಜತೆಗೆ ಪಕ್ಷದ ಸಂಘಟನೆ, ರಾಜ್ಯದ ನೀರಾವರಿ ಯೋಜನೆ ಗಳಿಗಾಗಿ ಒಂದು ಲಕ್ಷ ಕೋಟಿ ರುಪಾಯಿ ಮೀಸಲು, ಮಹದಾಯಿ ವಿವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಬಗ್ಗೆಯೂ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಕೆಳಕಂಡಂತಿದೆ:

BS Yeddyurappa Interview

ಸಂದರ್ಶನ : ವಿಜಯ್ ಮಲಗಿಹಾಳ – ಕನ್ನಡ ಪ್ರಭ

ಬೆಂಗಳೂರು : ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ಅಂಗವಾಗಿ ಸುಮಾರು 85 ದಿನಗಳ ಕಾಲ ಸುದೀರ್ಘ ರಾಜ್ಯ ಪ್ರವಾಸ ಮಾಡುವ ಮೂಲಕ ದಾಖಲೆ ಮೆರೆದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಿಂದೆಯೂ ಅನೇಕ ಮುಖಂಡರು ಯಾತ್ರೆಗಳನ್ನು ಕೈಗೊಂಡಿದ್ದರೂ ಒಂದೇ ಹಂತದಲ್ಲಿ ಇಷ್ಟೊಂದು ಸುದೀರ್ಘ ಪ್ರವಾಸ ಕೈಗೊಂಡಿ ದ್ದು ಇಲ್ಲವೇ ಇಲ್ಲ ಎನ್ನಬಹುದು. ಅದೂ ಎಪ್ಪತ್ತೈದರ ವಯಸ್ಸಿನಲ್ಲಿ ಇಪ್ಪತ್ತೈದರ ಹುಡುಗನಂತೆ ಸತತವಾಗಿ 225 ಕ್ಷೇತ್ರಗಳಲ್ಲೂ ಸಂಚರಿಸಿ ಸಮಾವೇಶಗಳನ್ನು ನಡೆಸಿದ್ದು ಸಣ್ಣ ಮಾತೇನಲ್ಲ.

ಅವರೊಂದಿಗೆ ಹೆಜ್ಜೆ ಹಾಕು ವುದಕ್ಕೆ ಬಿಜೆಪಿಯ ಸಣ್ಣ ವಯಸ್ಸಿನ ಇತರ ಮುಖಂಡರೇ ಸುಸ್ತಾಗಿದ್ದರು. ನ.2ರಂದು ಆರಂಭಗೊಂಡ ಯಾತ್ರೆ ಜ. 25ಕ್ಕೆ ಮೈಸೂರಿನಲ್ಲಿ ಅಂತ್ಯವಾಗಿತ್ತು. ಆ ಎರಡೂ ಸಮಾವೇಶಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಾಲ್ಗೊಂಡಿದ್ದರು. ಇದೀಗ ಯಾತ್ರೆಯ ಸಮಾರೋಪ ಭಾನುವಾರ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಮಾರಂಭದ ಮೂಲಕ ರಾಜ್ಯ ಬಿಜೆಪಿಯು ಮುಂಬರುವ ಚುನಾವಣೆಯ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿದೆ.

ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಯಡಿಯೂರಪ್ಪ ಅವರು ಯಾತ್ರೆಯ ಅನುಭವಗಳನ್ನು ಹಂಚಿಕೊಳ್ಳುವು ದರ ಜತೆಗೆ ಪಕ್ಷದ ಸಂಘಟನೆ, ರಾಜ್ಯದ ನೀರಾವರಿ ಯೋಜನೆ ಗಳಿಗಾಗಿ ಒಂದು ಲಕ್ಷ ಕೋಟಿ ರುಪಾಯಿ ಮೀಸಲು, ಮಹದಾಯಿ ವಿವಾದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಬಗ್ಗೆಯೂ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಕೆಳಕಂಡಂತಿದೆ:

ದಶಕಗಳ ಹಿಂದೆ ನೀವು ಮಾಡಿದ ಯಾತ್ರೆಗಳಿಗೂ ಈಗಿನ ಸುದೀರ್ಘ ಪರಿವರ್ತನಾ ಯಾತ್ರೆಗೂ ವ್ಯತ್ಯಾಸವಿದೆಯೇ?

ನಾನು ಹಿಂದೆ ಓಡಾಡಿರುವುದಕ್ಕೂ ಈಗ ಓಡಾಡಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜನ ಈ ರೀತಿ ಸ್ಪಂದಿಸುತ್ತಿರುವುದು ಹಿಂದೆಂದೂ ನೋಡಿರಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಈ ಸರ್ಕಾರದ ಬಗೆಗಿನ ಆಕ್ರೋಶ. ಯಾತ್ರೆ ವೇಳೆ ನನ್ನ ನೋಡಲು ಬಂದಿದ್ದರು ಎನ್ನುವುದಕ್ಕಿಂತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧದ ಅಸಹನೆಯಿಂದ ಬಂದಿದ್ದರು ಎನ್ನುವುದು ವಾಸ್ತವ.

 

ಈ ವಯಸ್ಸಿನಲ್ಲಿಯೂ ಹರೆಯದ ಹುಡುಗನಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಸಂಚಾರ ಮಾಡಿದ್ದರ ಹಿಂದಿರುವ ಗುಟ್ಟೇನು?

ಜನರ ಮಧ್ಯೆ ಇದ್ದರೆ ನನ್ನ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ಇದು ನನ್ನ ಅನುಭವ. ವಿಶ್ರಾಂತಿ ತೆಗೆದುಕೊಂಡರೆ ನನ್ನ ಆರೋಗ್ಯ ಏರುಪೇರಾಗುತ್ತದೆಯೇ ಹೊರತು ಪ್ರವಾಸ ಮಾಡಿದರೆ ಅಲ್ಲ. ಈ 85 ದಿನಗಳ ಅವಧಿಯಲ್ಲಿ ಕೇವಲ ಒಂದು ದಿನ ಗಂಟಲು ನೋವು ಬಂದಿದ್ದು ಬಿಟ್ಟರೆ ಬೇರೆ ಯಾವ ತೊಂದರೆಯೂ ನನ್ನನ್ನು ಬಾಧಿಸಿಲ್ಲ. ಈ 85 ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಯಾತ್ರೆ ಸುಗಮವಾಗಿ ಸಾಗಬೇಕು ಎಂದು ನಾನು ದೇವರಲ್ಲೂ ಪ್ರತಿನಿತ್ಯ ಪ್ರಾರ್ಥನೆ ಮಾಡುತ್ತಿದ್ದೆ.

 

ಯಾತ್ರೆಯ ಬಗ್ಗೆ ನಿಮ್ಮ ವೈಯಕ್ತಿಕ ಅನುಭವ ಹೇಗಿತ್ತು? ನಿಮಗಾಗಿರುವ ಲಾಭ ಏನು?

ರಾಜ್ಯದ ಜನರ ಜ್ವಲಂತ ಸಮಸ್ಯೆಗಳನ್ನು ನಾನೇ ಖುದ್ದಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ಕೇಳಿ ತಿಳಿದುಕೊಳ್ಳುವ ಅವಕಾಶವನ್ನು ಈ ಯಾತ್ರೆ ಒದಗಿಸಿತ್ತು. ಜನರ ಸಮಸ್ಯೆಗಳ ಬಗ್ಗೆ ನನ್ನ ಕಣ್ತೆರೆಸಿದ ಪ್ರವಾಸ ಇದು. ರಾಜ್ಯದ ಇತಿಹಾಸದಲ್ಲಿ ಒಂದೇ ಬಾರಿಗೆ 224 ಕ್ಷೇತ್ರ ಪ್ರವಾಸ ಮಾಡಿದ ಉದಾಹರಣೆಯಿಲ್ಲ. ಪ್ರತಿನಿತ್ಯ 3-4 ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೆ. ಬಹಳ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಮಹಿಳೆಯರು, ಎಲ್ಲ ವರ್ಗದ ಜನರು ಬರುತ್ತಿದ್ದರು.

ಪ್ರತಿ ಸಮಾವೇಶದಲ್ಲೂ ಕನಿಷ್ಠ 10 ಸಾವಿರ ಜನರು ಸೇರುತ್ತಿದ್ದರು. ಒಟ್ಟು 85 ದಿನಗಳ ಕಾಲ ಸುಮಾರು 10,500 ಕಿ.ಮೀ.ನಷ್ಟು ಸಂಚರಿಸಿ ಅಂದಾಜು 1.9 ಕೋಟಿಗೂ ಹೆಚ್ಚು ಜನರನ್ನು ನೇರವಾಗಿ ಸಾರ್ವಜನಿಕ ಸಭೆ ಸಮಾರಂಭಗಳ ಮೂಲಕ ಉದ್ದೇಶಿಸಿ ಮಾತನಾಡಿದ್ದೇನೆ. ಅಂದರೆ, ಸುಮಾರು ಅರ್ಧದಷ್ಟು ಮತದಾರರ ದರ್ಶನ ಮಾಡಿದಂತಾಯಿತು. ಹೀಗಾಗಿ, ಇದೊಂದು ಅಪೂರ್ವವಾದ ಸಂದರ್ಭ.

 

ನಿಮ್ಮ ಪರಿವರ್ತನಾ ಯಾತ್ರೆಗೆ ಬಂದ ಜನರಿಗೆ ನೀವು ನೀಡಿರುವ ಪ್ರಮುಖ ಭರವಸೆಯಾದರೂ ಏನು?

ಕೆರೆ ಕಟ್ಟೆಗಳಲ್ಲಿ ನೀರು ತುಂಬಿಸಬೇಕು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗಬೇಕು. ಬರಗಾಲದಿಂದ ಬೆಳೆ ನಾಶವಾದಾಗ ಆವರ್ತ ನಿಧಿಯಿಂದ ಪರಿಹಾರ ನೀಡಬೇಕು ಎಂಬುದು ಸಾಮಾನ್ಯವಾಗಿ ಎಲ್ಲ ಕ್ಷೇತ್ರಗಳಲ್ಲೂ ರೈತರು ನನ್ನ ಮುಂದಿಟ್ಟ ಬೇಡಿಕೆಗಳು. ನಾನು ಅಧಿಕಾರಕ್ಕೆ ಬಂದ ನಂತರ ನೀರಾವರಿ ಯೋಜನೆಗಳಿಗಾಗಿ ಒಂದು ಲಕ್ಷ ಕೋಟಿ ರು. ಮೀಸಲಿಟ್ಟು, ಪ್ರತಿ ವರ್ಷ 20 ಸಾವಿರ ಕೋಟಿ ರು. ವೆಚ್ಚ ಮಾಡುತ್ತೇನೆ ಎಂಬ ಭರವಸೆಯನ್ನು ರೈತರಿಗೆ ನೀಡಿದ್ದೇನೆ. ಇನ್ನುಳಿದಂತೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪಂಗಡದ ಜನರ ಅನೇಕ ಸಮಸ್ಯೆ ಗಳಿವೆ. ಮಹಿಳೆಯರ ಸಬಲೀಕರಣದ ಬಗ್ಗೆ ಕಾರ್ಯ ಕ್ರಮಗಳನ್ನು ರೂಪಿಸಬೇಕಿದೆ. ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಇದರ ಬಗ್ಗೆ ನಾನು ಯಾತ್ರೆ ವೇಳೆ ಜನರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಸಿಕ್ಕಿತ್ತು. ಇವೆಲ್ಲವನ್ನೂ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು.

 

ಇತ್ತೀಚೆಗೆ ಹರಪನಹಳ್ಳಿ ಸೇರಿದಂತೆ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸಂಬಂಧ ನಿಮ್ಮೆದುರೇ ಜಟಾಪಟಿ ನಡೆದು ನೀವು ಮುನಿಸಿಕೊಂಡಿದ್ದೂ ನಡೆದಿದೆಯಲ್ಲ?

ಇದು ಸ್ವಾಭಾವಿಕ. ಅನೇಕ ಕ್ಷೇತ್ರಗಳಲ್ಲಿ ನಮ್ಮ ಪರಿವರ್ತನಾ ಯಾತ್ರೆಗೆ ಜನರನ್ನು ಸೇರಿಸಲು, ಕಾರ್ಯಕ್ರಮ ಆಯೋಜಿಸಲು ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಧಿಕಾರಕ್ಕೆ ಬರುವ ಪಕ್ಷ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ನಾನೇಕೆ ಪ್ರಯತ್ನ ಮಾಡಬಾರದು ಎಂಬ ಕಾರಣಕ್ಕಾಗಿ ಮೂರ್ನಾಲ್ಕು ಆಕಾಂಕ್ಷಿಗಳು ಸೃಷ್ಟಿಯಾಗಿರುವುದು ನಿಜ.

 

 ಬಹಿರಂಗವಾಗಿ ಕೆಲವೆಡೆ ನೀವೇ ಅಭ್ಯರ್ಥಿಗಳನ್ನು ಘೋಷಿಸಿದ್ದೀರಿ. ಇನ್ನೊಂದಿಷ್ಟು ಕಡೆ ನೀವು ಗಪ್‌ಚುಪ್. ಇದಕ್ಕೆ ಪಕ್ಷದ ಅಣತಿ ಕಾರಣವೇ?

ಸುಮಾರು100 ಕ್ಷೇತ್ರಗಳಲ್ಲಿ ಒಬ್ಬೊಬ್ಬ ಆಕಾಂಕ್ಷಿಗಳಿದ್ದಾರೆ. ಅಲ್ಲಿ ಪೈಪೋಟಿ ಮಾಡುವಂಥ ಬಲಾಢ್ಯರು ಇಲ್ಲ. ಅಂಥ ಕೆಲವು ಕ್ಷೇತ್ರಗಳಲ್ಲಿ ‘ಗೋ ಅಹೆಡ್’ (ಮುಂದುವರೆಯಿರಿ) ಎಂದು ಹೇಳಿದ್ದೇವೆ. ಉಳಿದ ಕ್ಷೇತ್ರಗಳಲ್ಲಿ ಒಂದಲ್ಲ ಎರಡು ಬಾರಿ ಸಮೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ.

 

ಹೊಸ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅನೇಕ ಜನಪ್ರಿಯ ಘೋಷಣೆಗಳನ್ನು ಮಾಡಲು ಸಜ್ಜಾಗುತ್ತಿದ್ದಾರಂತೆ?

ಪ್ರಸಕ್ತ ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಅನುದಾನದ ಪೈಕಿ ಶೇ.50ರಷ್ಟನ್ನೂ ವೆಚ್ಚ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇನ್ನುಳಿದ ಮೂರು ತಿಂಗಳಲ್ಲಿ ಏನು ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಸಾಧನಾ ಸಮಾವೇಶದ ಮೂಲಕ ಸಿದ್ದ ರಾಮಯ್ಯ ಹೋದಲ್ಲೆಲ್ಲ 100, 200 ಕೋಟಿ ರು.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಹೇಗಿದ್ದರೂ ಮನೆಗೆ ಹೋಗುತ್ತಿದ್ದೇನೆ ಎಂಬ ಕಾರಣಕ್ಕಾಗಿ ಸುಳ್ಳು ಭರವಸೆಗಳನ್ನು ನೀಡಿ ಬಂದಿದ್ದಾರೆ. ಆದರೆ, ಜನಸಾಮಾನ್ಯರು ಇದಕ್ಕೆಲ್ಲ ಮರುಳಾಗುವುದಿಲ್ಲ.

 

ರಾಜ್ಯ ಬಿಜೆಪಿ ಈಗ ಸಂಪೂರ್ಣವಾಗಿ ದೆಹಲಿ ಹೈಕಮಾಂಡ್ ನಿಯಂತ್ರಣಕ್ಕೆ ಹೋಗಿದೆ. ಹಿಂದೆಂದೂ ಹೀಗಾಗಿರಲಿಲ್ಲ?

ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎಂಬ ಸಂಕಲ್ಪದ ಅಂಗವಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು ಎಂಬ ಅಪೇಕ್ಷೆ ಪಕ್ಷದ ವರಿಷ್ಠರಲ್ಲಿದೆ. ಇದಕ್ಕಾಗಿ ಕೇಂದ್ರದ ಇಬ್ಬರು ಪ್ರಮುಖ ಸಚಿವರನ್ನು ಪಕ್ಷದ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಶತಾಯಗತಾಯ ಕರ್ನಾಟಕದಲ್ಲಿ ಪಕ್ಷ ಗೆಲ್ಲಬೇಕು ಎಂಬ ಉದ್ದೇಶ ಅವರದ್ದಾಗಿರುವುದರಿಂದ ರಾಜ್ಯ ಘಟಕ ಅವರ ನಿಯಂತ್ರಣಕ್ಕೆ ಹೋಗಿದೆ ಎನ್ನುವುದಕ್ಕಿಂತ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವುದು ಸರಿಯಾಗುತ್ತದೆ.

 

ಉತ್ತರ ಭಾರತದಲ್ಲಿ ಬಿಜೆಪಿ ಅನುಸರಿಸಿದ ಪ್ರಯೋಗವನ್ನೇ ಕರ್ನಾಟಕದಲ್ಲೂ ಅನುಷ್ಠಾನಗೊಳಿಸಲು ಬಿಜೆಪಿ ಮುಂದಾದಂತೆ ಕಾಣುತ್ತಿದೆ? ಉತ್ತರದ ಪ್ರಯೋಗ ದಕ್ಷಿಣದಲ್ಲೂ ಯಶಸ್ವಿಯಾಗುತ್ತಾ?

ಉತ್ತರ ಪ್ರದೇಶದಲ್ಲಿನ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ನೆಲ ಕಚ್ಚಿತು. ಕಾಂಗ್ರೆಸ್ ಕೇವಲ ಏಳು ಸ್ಥಾನಕ್ಕೆ ಸೀಮಿತ ವಾಯಿತು. ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವಲ್ಲಿ ಸಫಲವಾಯಿತು. ಅಂದರೆ, ಅಮಿತ್ ಶಾ ಅವರ ಚಾಣಕ್ಯ ತಂತ್ರ ಅಲ್ಲಿ ಯಶಸ್ವಿಯಾಗಿದೆ ಎಂಬುದು ಸಾಬೀತಾಯಿತು. ಅದೇ ತಂತ್ರ ಕರ್ನಾಟಕದಲ್ಲೂ ಯಶಸ್ಸು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ.

 

ಸಾಕಷ್ಟು ಸಮೀಕ್ಷೆಗಳು ಕರ್ನಾಟದಲ್ಲಿ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ಸೂಚಿಸುತ್ತಿವೆ?

ನಾನು ಯಾವುದೇ ಸಮೀಕ್ಷೆಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡಲು ಹೋಗುವುದಿಲ್ಲ. ಆದರೆ, ನಮಗೆ ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯೇ ಅಂತಿಮ. ಶೀಘ್ರ ದಲ್ಲೇ ಆಂತರಿಕ ಸಮೀಕ್ಷೆಯ ವಿವರಗಳು ನಮಗೆ ಲಭ್ಯವಾಗಲಿವೆ. ಈಗಲೇ ಚುನಾವಣೆ ನಡೆದರೆ ನಮ್ಮ ಪಕ್ಷ 125 ಸ್ಥಾನ ಗಳಿಸುವುದು ನಿಶ್ಚಿತ. ಇದು ಚುನಾವಣೆ ಸಮೀಪಿಸುತ್ತಿರುವಂತೆಯೇ ಹೆಚ್ಚಾಗಲಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನೀವು ಮಾಡುವ ಪ್ರಮುಖ ಆರೋಪ ಏನು? ಪ್ರತಿ ಯೋಜನೆ-ಕಾಮಗಾರಿಯಲ್ಲೂ ಮಿತಿ ಮೀರಿದ ಭ್ರಷ್ಟಾಚಾರ, ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ, ಮರಳು ಲೂಟಿ, ರೈತರಿಗೆ ವಿದ್ಯುತ್ ಕೊರತೆ, ಕುಡಿವ ನೀರಿನ ತೊಂದರೆ. ಯಾತ್ರೆ ವೇಳೆಯೂ ಜನರು ಇವುಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

 

ಕನ್ನಡಕ್ಕೆ ಪ್ರತ್ಯೇಕ ಧ್ವಜ ರೂಪಿಸುವುದಕ್ಕೆ ಬಿಜೆಪಿಯ ವಿರೋಧ ಇದೆಯಂತೆ?

ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಹೇಳುತ್ತಿದ್ದೇನೆ, ಇದಕ್ಕೆ ನಮ್ಮ ಪಕ್ಷದ ವಿರೋಧ ಇಲ್ಲ. ಈಗಿರುವ ಧ್ವಜದ ಸ್ವರೂಪ ಅಥವಾ ಬಣ್ಣ ಬದಲಾಯಿಸಬೇಕು ಎಂಬುದಾದರೆ ಅದಕ್ಕೆ ತಜ್ಞರನ್ನೂ ಒಳಗೊಂಡಂತೆ ಕನ್ನಡಕ್ಕಾಗಿ ದುಡಿದ ಪ್ರಮುಖರ ಸಮಿತಿ ರಚಿಸಲಿ. ಅವರು ಕುಳಿತುಕೊಂಡು ಚರ್ಚಿಸಿ ನಿರ್ಧಾರಕ್ಕೆ ಬರುತ್ತಾರೆ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಇದು ರಾಜ್ಯದ ಗೌರವ ಹಾಗೂ ಅಸ್ಮಿತೆಯ ವಿಷಯ. ಇದು ರಾಜಕೀಯದ ದೊಂಬರಾಟ ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ.

 

ನಿಮ್ಮ ಪರಿವರ್ತನಾ ಯಾತ್ರೆ ವೇಳೆ ಈ ಎಲ್ಲ ವಿಷಯಗಳನ್ನು ಜನಸಾಮಾನ್ಯರು ನಿಮ್ಮ ಗಮನಕ್ಕೆ ತರಲಿಲ್ಲವೇ?

ಇಲ್ಲ. ಜನಸಾಮಾನ್ಯರು ಇಂಥ ವಿಷಯಗಳಿಂದ ದೂರ ಇದ್ದಾರೆ. ಯಾರೊಬ್ಬರೂ ಈ ಬಗ್ಗೆ ಪ್ರಸ್ತಾಪಿ ಸಲಿಲ್ಲ. ಒಬ್ಬರೂ ಒಡಕಿನ ಮಾತು ಹೇಳಲಿಲ್ಲ. ಇವ್ಯಾ ವುವೂ ಜನರ ಸಮಸ್ಯೆಗಳಲ್ಲ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಅನುಕೂಲಕ್ಕಾಗಿ ಹುಟ್ಟುಹಾಕಿರುವ ಸಮಸ್ಯೆಗಳು ಎನ್ನುವುದು ಜನರಿಗೂ ಅರ್ಥವಾಗಿದೆ.

 

ಬಿಜೆಪಿ ಪ್ರಾದೇಶಿಕತೆಗಿಂತ ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡುತ್ತದೆ ಎಂದು ಕಾಂಗ್ರೆಸ್ ದೂರುತ್ತಿದೆಯಲ್ಲಾ?

ಕಾಂಗ್ರೆಸ್ಸಿನವರು ತಲೆತಿರುಕರಂತೆ ಮಾತನಾಡು ತ್ತಾರೆ. ನಾನಾಗಲೀ ಅಥವಾ ನಮ್ಮ ಪಕ್ಷದ ಮುಖಂಡ ರಾಗಲೀ ಪ್ರಾದೇಶಿಕತೆಗೆ ಧಕ್ಕೆ ಉಂಟಾಗುವಂಥ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ನಾವೆಲ್ಲರೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತ್ರ ಮಾತನಾಡಿದ್ದೇವೆ. ಇಲ್ಲಿನ ಕೃಷಿ, ನೀರಾವರಿ, ಮೂಲಸೌಕರ್ಯ ಮತ್ತಿತರ ವಿಷಯಗಳ ಬಗ್ಗೆ ಮಾತನಾಡಿದ್ದು ರಾಷ್ಟ್ರೀಯತೆ ಹೇಗಾಗುತ್ತದೆ ಹೇಳಿ.

 

ಕರ್ನಾಟಕಕ್ಕೆ ಕುಡಿಯುವ ನೀರು ನೀಡಲು ತಮ್ಮ ಅಭ್ಯಂತರವಿಲ್ಲ ಎಂದು ಮಹದಾಯಿ ಬಗ್ಗೆ ನಿಮಗೆ ಪತ್ರ ಬರೆದಿದ್ದ ಮನೋಹರ್ ಪರಿಕರ್ ಅವರು ಉಲ್ಟಾ ಹೊಡೆದರಲ್ಲ?

ಪರಿಕರ್ ಉಲ್ಟಾ ಹೊಡೆದಿಲ್ಲ. ಉಲ್ಟಾ ಹೊಡೆದಿದ್ದು ಸಿದ್ದರಾಮಯ್ಯ. ಗೋವಾ ಕಾಂಗ್ರೆಸ್ ಮುಖಂಡರನ್ನು ಮನವೊಲಿಸುವುದಾಗಿ ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದ್ದ ಸಿದ್ದರಾಮಯ್ಯ ಅವರು ಪರಿಕರ್ ಪತ್ರದ ನಂತರ ತಮ್ಮ ಮಾತು ಉಳಿಸಿಕೊಳ್ಳಲಿಲ್ಲ.

ಪರಿಕರ್ ನೀರು ನೀಡುವುದಾಗಿ ಹೇಳಿದ ತಕ್ಷಣ ಗೋವಾ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರ ಬಾಯಿ ಮುಚ್ಚಿಸಿದರೇ? ಗೋವಾದಲ್ಲಿ ಬಿಜೆಪಿ ಸರ್ಕಾರ ಕೂಡ ಮಿತ್ರ ಪಕ್ಷಗಳ ಬೆಂಬಲದಿಂದ ಅಸ್ತಿತ್ವದಲ್ಲಿದೆ. ಆದರೂ  ರಿಸ್ಕ್ ತೆಗೆದುಕೊಂಡಿದ್ದರು. ಅದನ್ನು ಬಳಸಿಕೊಳ್ಳುವಲ್ಲಿ ಸಿದ್ದರಾಮಯ್ಯ ವಿಫಲರಾದರು.

 

ಈ ವಿವಾದದಲ್ಲಿ ಸಿದ್ದರಾಮಯ್ಯ ವಿಫಲರಾದದ್ದು ಹೇಗೆ?

ಗೋವಾ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸದಂತೆ ಸಿದ್ದರಾಮಯ್ಯ ತಡೆಯಬಹುದಿತ್ತು. ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಅವರು ಹೊಸ ವರ್ಷಾಚರಣೆಗಾಗಿ ಗೋವಾದಲ್ಲೇ ಇದ್ದರು. ಅವರಿಂದ ಒಂದು ಶಬ್ದವನ್ನೂ ಹೇಳಿಸುವ ಪ್ರಯತ್ನ ಮಾಡಲಿಲ್ಲ. ಏನನ್ನೂ ಮಾಡದೆ ಸಿದ್ದರಾಮಯ್ಯ ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಅವರತ್ತ ಬೆರಳು ತೋರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಈ ಸಮಸ್ಯೆ ಬಗೆಹರಿಯುವುದು ಬೇಕಾಗಿರಲಿಲ್ಲ. ಹೀಗಾಗಿಯೇ ವಿವಾದ ಜೀವಂತ ಇಡುವ ಪ್ರಯತ್ನ ಮಾಡಿದರು.

 

ಗೋವಾ ಸಿಎಂ  ಅವರು ನಿಮಗೆ ಬರೆದ ಪತ್ರವನ್ನು ಮುಖ್ಯಮಂತ್ರಿಯಾಗಿ ನನಗೂ ಬರೆಯಬಹುದಿತ್ತಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ?

ಅದು ಬೇರೆ ವಿಷಯ. ಪತ್ರ ಯಾರಿಗೆ ಬರೆದರು ಎನ್ನುವುದು ಮುಖ್ಯವಲ್ಲ. ಆದರೆ, ಬರೆದ ಪತ್ರದಿಂದ ಹೇಗೆ ಲಾಭ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಿದ್ದರಾಮಯ್ಯ ಯೋಚಿಸಬೇಕಿತ್ತು. ಅದರ ಬದಲು ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಮನೋಹರ್ ಪರಿಕರ್ ಬಗ್ಗೆ ಬಹಳ ಹಗುರವಾಗಿ ಮಾತನಾಡಿದರು.

 

ಈಗ ಅಂತಿಮವಾಗಿ ರಾಜ್ಯ ಬಿಜೆಪಿಯಿಂದ ಮಹದಾಯಿ ವಿವಾದಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇಟ್ಟುಕೊಳ್ಳಬಹುದೇ?

ಸುಲಭವಾಗಿ ಬಗೆಹರಿಯಬಹುದಾಗಿದ್ದ ವಿಷಯವನ್ನು ರಾಜ್ಯ ಕಾಂಗ್ರೆಸ್ ಮುಖಂಡರು ನ್ಯಾಯಾಧಿಕರಣದ ಮುಂದೆ ಸರಿಯಾಗಿ ವಾದ ಮಾಡಿ ನ್ಯಾಯ ಪಡೆಯಬೇಕು. ಅದನ್ನು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಮಾಡಬೇಕು. ನ್ಯಾಯ ಸಿಗುವ ವಿಶ್ವಾಸವಿದೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನೂ ಬಿಜೆಪಿ ನೀಡಲಿದೆ.

 

ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹಿಂದು ಮತಗಳ ಧ್ರುವೀಕರಣಕ್ಕೆ ಮುಂದಾಗಿದೆಯಂತೆ?

ಅಲ್ರೀ ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ತತ್ವ ಅಳವಡಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ತ್ರಿವಳಿ ತಲಾಖ್ ನಿಷೇಧಕ್ಕೆ ಬಿಜೆಪಿ ಸರ್ಕಾರ ಶ್ರಮಿಸುತ್ತಿರುವುದು ಸಣ್ಣ ವಿಷಯವಲ್ಲ. ನಾವು ಯಾವುದೇ ಒಂದು ವರ್ಗದ ಪರ ಅಥವಾ ವಿರುದ್ಧ ಅಂತ ಇಲ್ಲ. ಪ್ರಧಾನಿ ತತ್ವವನ್ನೇ ಪಕ್ಷವೂ ಅನುಸರಿಸುತ್ತಿದೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಇದನ್ನೇ ಪಾಲಿಸಿದ್ದೇವೆ. ನಮ್ಮ ಅಜೆಂಡಾ ಅಭಿವೃದ್ಧಿ ಅಷ್ಟೆ.

 

ಮುಸ್ಲಿಂ ಮತ ಒಡೆಯುವ ಉದ್ದೇಶದಿಂದ ಬಿಜೆಪಿಯು ಒವೈಸಿ ಪಕ್ಷದೊಂದಿಗೆ ಮಾತುಕತೆಗೆ ಪ್ರಯತ್ನಿಸಿದೆಯಂತೆ

ಇದು ತೀರಾ ಅತಿರೇಕವಾದದ್ದು. ಕೋಮುವಾದಿ ಒವೈಸಿಯ ಮಜ್ಲಿಸ್ ಪಕ್ಷದೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಹೊಂದಾಣಿಕೆ ಮಾಡಿಕೊಳ್ಳುವುದು ಕನಸು ಮನಸಿನಲ್ಲಿಯೂ ಊಹಿಸುವುದಕ್ಕೆ ಆಗುವುದಿಲ್ಲ.

Follow Us:
Download App:
  • android
  • ios