Asianet Suvarna News Asianet Suvarna News

ಬಿಜೆಪಿ ನಾಯಕರಿಗೆ ಬಿಎಸ್ ವೈ ಬ್ರೇಕ್

ಲೋಕಸಭಾ ಚುನಾವಣೇ ಮುಕ್ತಾಯವಾದರೂ ಕೂಡ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಇದೀಗ ಕಟ್ಟಪ್ಪಣೆಯೊಂದನ್ನು ಹೊರಡಿಸಿದ್ದಾರೆ. 

BS Yeddyurappa Break To BJP Leader Foreign Tour
Author
Bengaluru, First Published Apr 27, 2019, 12:03 PM IST

ಬೆಂಗಳೂರು : ಪಕ್ಷದ ಮುಖಂಡರು ವಿದೇಶ ಪ್ರವಾಸ, ಹನಿಮೂನ್ ಮತ್ತೊಂದು ಮಗದೊಂದನ್ನು ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಗಿದ ನಂತರವೇ ಇಟ್ಟುಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಟ್ಟಪ್ಪಣೆ ಮಾಡಿದ್ದಾರೆ. 

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿನ ಮತದಾನ ಪ್ರಕ್ರಿಯೆ ಕುರಿತು ಆಳವಾದ ಅಂಕಿ-ಅಂಶಗಳನ್ನು ಒಳಗೊಂಡ ಮಾಹಿತಿ ಸಂಗ್ರಹಿಸುವ ಸಲುವಾಗಿಯೇ ನಡೆದ ಲೋಕಸಭಾ ಚುನಾವಣೆಯ ಉಸ್ತುವಾರಿಗಳು, ಪ್ರಭಾರಿಗಳು, ಸಹ ಪ್ರಭಾರಿಗಳು, ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು, ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ಪಕ್ಷಕ್ಕೆ ಮಹತ್ವದ್ದು. ಇದನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಎರಡೂ ಕ್ಷೇತ್ರಗಳಿಗೆ ಹಿರಿಯ ನಾಯಕರನ್ನು ಒಳಗೊಂಡ ಉಸ್ತುವಾರಿಗಳ ತಂಡವನ್ನು ರಚಿಸಲಾಗಿದೆ. ಜವಾಬ್ದಾರಿ ದೃಷ್ಟಿಯಿಂದ ತಂಡಗಳನ್ನು ರಚಿಸಲಾಗಿದೆ. ಹಾಗಂತ ಬೇರೆಯವರು ಆ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಬಾರದು ಎಂದರ್ಥವಲ್ಲ. ನಿಮ್ಮ ನಿಮ್ಮ ಶಕ್ತಾನುಸಾರ ನಿಮಗೆ ಯಾವ ಕ್ಷೇತ್ರದಲ್ಲಿ ಪ್ರಭಾವವಿದೆಯೋ ಅಲ್ಲಿ ತೆರಳಿ ಪ್ರಚಾರ ನಡೆಸುವ ಮೂಲಕ ಗೆಲ್ಲುವುದಕ್ಕೆ ಶ್ರಮಿಸಬೇಕು ಎಂದು ಸೂಚಿಸಿದರು.

ಲೋಕಸಭಾ ಚುನಾವಣೆ ಮುಗಿದಿದೆ ಎಂಬ ಕಾರಣಕ್ಕಾಗಿ ಮುಖಂಡರು ವಿಶ್ರಾಂತಿಗಾಗಿ ತೆರಳುವುದು ಬೇಡ. ಈ ಎರಡು ವಿಧಾನಸಭಾಕ್ಷೇತ್ರಗಳ ಉಪಚುನಾವಣೆಯೂ ಅಷ್ಟೇ ಮುಖ್ಯ.  ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದಂತೆ ಈ ಎರಡೂ ಕ್ಷೇತ್ರಗಳಲ್ಲೂ ಶ್ರಮಿಸಬೇಕು. ಇದರಿಂದ ಮುಂದೆ ನಮಗೇ ಅನುಕೂಲವಾಗುತ್ತದೆ ಎಂದು ಹೇಳುವ ಮೂಲಕ ಪಕ್ಷದ ಸಂಖ್ಯಾಬಲ ಹೆಚ್ಚಿದಲ್ಲಿ ಪರ್ಯಾಯ ಸರ್ಕಾರ ರಚಿಸಲು ಸಹಾಯಕ ವಾಗುತ್ತದೆ ಎಂಬುದನ್ನು ಯಡಿಯೂರಪ್ಪ ಸೂಚ್ಯವಾಗಿ ಹೇಳಿದರು. ಸಭೆಯಲ್ಲಿ ಪಕ್ಷದ ನಾಯಕರಾದ ಬಿ.ಎಲ್.ಸಂತೋಷ್, ಡಿ.ವಿ. ಸದಾನಂದಗೌಡ, ಅರವಿಂದ್ ಲಿಂಬಾವಳಿ, ಬಿ. ಶ್ರೀರಾಮುಲು, ಎನ್.ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 

Follow Us:
Download App:
  • android
  • ios