ಬಿಜೆಪಿಯಲ್ಲಿ  ಮುನಿಸಿಕೊಂಡಿರುವ  ನಾಯಕರ ಒಂದು ಬಣ ಕೊನೆಗೂ  ಸಮಾಧಾನಗೊಂಡಿದೆ.  ಬೆಳಗಾವಿ ಭಾಗದ ಆ ನಾಯಕರನ್ನು  ಮನವೊಲಿಸುವಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ  ಯಶಸ್ವಿಯಾಗಿದ್ದಾರೆ.        

ಬೆಂಗಳೂರು(ಮೇ.16): ಬಿಜೆಪಿಯಲ್ಲಿ ಮುನಿಸಿಕೊಂಡಿರುವ ನಾಯಕರ ಒಂದು ಬಣ ಕೊನೆಗೂ ಸಮಾಧಾನಗೊಂಡಿದೆ. ಬೆಳಗಾವಿ ಭಾಗದ ಆ ನಾಯಕರನ್ನು ಮನವೊಲಿಸುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಅಸಮಾಧಾನಿತರ ತಂಡದ ಜತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಹತ್ವದ ಸಭೆ ನಡೆಸಿದ್ದು ಅತೃಪ್ತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿ, ಉಮೇಶ್​ ಕತ್ತಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರ ಜತೆ ಸಭೆ ನಡೆಸಿ, ಅತೃಪ್ತರ ಅಸಮಾಧಾನದ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಮಾಧ್ಯಮಗಳಲ್ಲಿ ತಮಗೆ ಟಿಕೆಟ್ ತಪ್ಪುವ ಬಗ್ಗೆ ವರದಿಯಾಗಿರುವುದನ್ನು ಅತೃಪ್ತ ನಾಯಕರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಯಡಿಯೂರಪ್ಪ, ಸಾರ್ವತ್ರಿಕ ಚುನಾವಣೆಯ ಎಲ್ಲ ಕ್ಷೇತ್ರಗಳ ಟಿಕೆಟ್​ನ್ನು ಸಮೀಕ್ಷೆಯ ಮೂಲಕವೇ ಅಂತಿಮವಾಗಲಿದ್ದು, ಸಮೀಕ್ಷೆ ಹೊರತುಪಡಿಸಿ ರಾಜಕೀಯ ಕಾರಣಗಳಿಗೆ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಅಂತಿಮವಾಗಿ ಎಲ್ಲರೂ ಒಗ್ಗಟ್ಟಾಗಿ ಹೋಗುವ ಅಭಿಪ್ರಾಯ ವ್ಯಕ್ತವಾಗಿದೆ. ಸಭೆಯ ನಂತರ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಸಣ್ಣಪುಟ್ಟ ಅಸಮಾಧಾನಗಳಿದ್ದದ್ದು ನಿಜ, ಆದರೆ ಈಗ ಯಡಿಯೂರಪ್ಪನವರ ಜತೆ ಮಾತುಕತೆ ನಂತರ ಎಲ್ಲ ಬಗೆಹರಿದಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಮಾಜಿ ಸಚಿವ ಉಮೇಶ್​ ಕತ್ತಿ, ನಮ್ಮಲ್ಲಿ ಅಸಮಾಧಾನದ ಲವಲೇಶವೂ ಇಲ್ಲ, ಬೆಳಗಾವಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಮುಂದಿನ ಚುನಾವಣೆಯಲ್ಲಿ ಅತೀಹೆಚ್ಚು ಸ್ಥಾನಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ಬೆಳಗಾವಿಯಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಿದಾಗ ಗೈರುಹಾಜರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದ ಬಾಲಚಂದ್ರ ಜಾರಕಿಹೊಳಿ, ನಿನ್ನೆಯ ಸಭೆಯ ನಂತರ ಬಹುತೇಕ ಸಮಾಧಾನಗೊಂಡಿದ್ದಾರೆ. ಬಹುಮುಖ್ಯವಾಗಿ ರಾಜಕೀಯ ವೈಮನಸ್ಸಿನ ಕಾರಣಕ್ಕೆ ಟಿಕೆಟ್ ತಪ್ಪಿಸುವುದಿಲ್ಲ ಎಂಬ ಮಾತನ್ನಾಡಿರುವುದು ಅತೃಪ್ತರಿಗೆ ಸಮಾಧಾನ ತಂದಿದೆ. ಅಂತಿಮವಾಗಿ ಅತೃಪ್ತ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್.