ಬೆಂಗಳೂರು[ಜ.06]: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ವಿಚಾರವಾಗಿ ರಾಜಕೀಯ ಕೆಸರೆರಚಾಟವೇ ನಡೆಯುತ್ತಿದೆ. ಆದರೆ ಎಚ್‌ಎಎಲ್‌ ಮಾತ್ರ ತೀವ್ರ ಆರ್ಥಿಕ ಸಂಕಷ್ಟದಿಂದ ನರಳುತ್ತಿದೆ. ತನ್ನ ಉದ್ಯೋಗಿಗಳಿಗೆ ಸಂಬಳ ಕೊಡುವ ಸಲುವಾಗಿ 1000 ಕೋಟಿ ರು. ಸಾಲ ಪಡೆದಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಏಪ್ರಿಲ್‌ ಹೊತ್ತಿಗೆ ಹೊಸ ಖರೀದಿ ಮಾಡಲು ಅಥವಾ ಈಗಾಗಲೇ ಮಾಡಿರುವ ಖರೀದಿಗೆ ಹಣ ಪಾವತಿಸಲು ಎಚ್‌ಎಎಲ್‌ ಬಳಿ ಹಣವೇ ಇರುವುದಿಲ್ಲ. ಹೀಗಾಗಿ ಎಲ್ಲ ಯೋಜನೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

‘ಕೈಯಲ್ಲಿ ಹಣವಿಲ್ಲ. ಹೀಗಾಗಿ 1 ಸಾವಿರ ಕೋಟಿ ರು. ಹಣವನ್ನು ಓವರ್‌ಡ್ರ್ಯಾಫ್ಟ್‌ ಪಡೆದಿದ್ದೇವೆ. ಮಾ.31ರ ಹೊತ್ತಿಗೆ ನಮ್ಮ ಬಳಿ ಖಾತೆಯಲ್ಲಿ ಮೈನಸ್‌ 6000 ಕೋಟಿ ರು. ಇರುತ್ತದೆ. ದೈನಂದಿನ ಕೆಲಸ ಕಾರ್ಯಗಳಿಗಾಗಿ ನಾವು ಸಾಲ ಮಾಡಬಹುದಾಗಿದೆ. ಆದರೆ ಯೋಜನೆಗಳಿಗೆ ಆಗದು’ ಎಂದು ಎಚ್‌ಎಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ತಿಳಿಸಿದ್ದಾರೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಎಚ್‌ಎಎಲ್‌ ಖರ್ಚಿಗೆ ಮಾಸಿಕ 1400 ಕೋಟಿ ರು. ಹಣ ಬೇಕಾಗಿದೆ. ಆ ಪೈಕಿ 358 ಕೋಟಿ ರು. ಉದ್ಯೋಗಿಗಳ ವೇತನಕ್ಕೆ ಮೀಸಲಾದರೆ, ಉಳಿದ ಹಣ ಖರೀದಿ ಪ್ರಕ್ರಿಯೆಗೆ ಬಳಕೆಯಾಗುತ್ತದೆ. ಎಚ್‌ಎಎಲ್‌ಗೆ ಭಾರತೀಯ ವಾಯುಪಡೆಯೇ ಅತಿದೊಡ್ಡ ಗ್ರಾಹಕನಾಗಿದ್ದು, ಅಲ್ಲಿಂದ 14500 ಕೋಟಿ ರು. ಬಾಕಿ ಬರಬೇಕಾಗಿದೆ. ಡಿ.31ಕ್ಕೆ ಅನುಗುಣವಾಗುವಂತೆ ಎಚ್‌ಎಎಲ್‌ಗೆ ವಿವಿಧ ಸಂಸ್ಥೆಗಳಿಂದ 15700 ಕೋಟಿ ರು. ಬರಬೇಕಿದ್ದು, ಮಾ.31ರ ಹೊತ್ತಿಗೆ ಇದು 20 ಸಾವಿರ ಕೋಟಿ ರು. ತಲುಪಬಹುದು ಎಂದು ಮಾಧವನ್‌ ತಿಳಿಸಿದ್ದಾರೆ.

1950 ಕೋಟಿ ರು.ವರೆಗೆ ಓವರ್‌ಡ್ರ್ಯಾಫ್‌ ಪಡೆಯಲು ಎಚ್‌ಎಎಲ್‌ಗೆ ಮಿತಿ ಇದೆ. ಅದನ್ನು ಹೆಚ್ಚಳ ಮಾಡಬೇಕು ಎಂದು ಕಂಪನಿ ಬೇಡಿಕೆ ಮಂಡಿಸಿದೆ.