ನವದೆಹಲಿ[ಫೆ.14]: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಹಾಗೂ ಎಂಜಲು ಉಗುಳಿದರೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸುವಂತೆ ಸಂಸದೀಯ ಸಮಿತಿಯೊಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸ್ವಚ್ಛ ಭಾರತ ಮಿಷನ್‌ಗೆ ಕಾನೂನಿನ ಅಧಿಕಾರ ನೀಡಲು ಸಮಗ್ರ ಮಾದರಿಯ ಶಾಸನವೊಂದನ್ನು ರೂಪಿಸಬೇಕು. ಇದರಿಂದ ನಗರ ಪಾಲಿಕೆಗಳು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸುವ ಮತ್ತು ಎಂಜಲು ಉಗುಳಿ ಹೊಲಸು ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಬಹುದಾಗಿದೆ ಎಂದು ದಿಲೀಪ್‌ ಕುಮಾರ್‌ ಮನಸುಖ್‌ಲಾಲ್‌ ಗಾಂಧಿ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

ಅಲ್ಲದೇ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಸ್ವಚ್ಛ ಭಾರತ ಯೋಜನೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು. ಯೋಜನೆಯನ್ನು ಕಾನೂನಾತ್ಮಕವಾಗಿ ಬಲಗೊಳಿಸಬೇಕು ಎಂದು ಸಮಿತಿ ತಿಳಿಸಿದೆ.