ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಅಂತಿಮ ವಿಚಾರಣೆಯಲ್ಲಿ ಕರ್ನಾಟಕ ಮತ್ತು ಕೇರಳ ತಮ್ಮ ಮೌಖಿಕ ವಾದ ಮಂಡನೆಯನ್ನು ಮುಕ್ತಾಯಗೊಳಿಸಿವೆ.
ನವದೆಹಲಿ: ಕಾವೇರಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಅಂತಿಮ ವಿಚಾರಣೆಯಲ್ಲಿ ಕರ್ನಾಟಕ ಮತ್ತು ಕೇರಳ ತಮ್ಮ ಮೌಖಿಕ ವಾದ ಮಂಡನೆಯನ್ನು ಮುಕ್ತಾಯಗೊಳಿಸಿವೆ.
ರಾಜ್ಯದ ಪರ ವಾದ ಮಂಡನೆ ಮಾಡಿದ ವಕೀಲ ಮೋಹನ್ ಕಾತರಕಿ, ಕರ್ನಾಟಕಕ್ಕೆ ಕಾವೇರಿ ನೀರಿನಲ್ಲಿ ಪ್ರಸಕ್ತ ಇರುವ ಪಾಲನ್ನು 270 ಟಿಎಂಸಿಯನ್ನು 320 ಟಿಎಂಸಿಗೆ ಏರಿಸಬೇಕು. ಪ್ರಸಕ್ತ ತಮಿಳುನಾಡಿಗೆ ಕರ್ನಾಟಕ ನೀಡಬೇಕಿರುವ 192 ಟಿಎಂಸಿಯ ಬಾಧ್ಯತೆಯನ್ನು 102 ಟಿಎಂಸಿಗೆ ಇಳಿಸಬೇಕು. ತಮಿಳುನಾಡಿನಲ್ಲಿ ಈಶಾನ್ಯ ಮಾರುತದ ಮಳೆ ಬರುವುದು ಅಕ್ಟೋಬರ್ ಬಳಿಕ ತಮಿಳುನಾಡು ತನ್ನ ಭತ್ತದ ಕೃಷಿಯನ್ನು ಪ್ರಾರಂಭಿಸುವುದು ಬೇಸಗೆ (ಆಗಸ್ಟ್) ನಲ್ಲಿ. ಯಾಕೆ ಭತ್ತದ ಕೃಷಿಯನ್ನು ಬೇಸಗೆಯಲ್ಲಿ ಪ್ರಾರಂಭಿಸಬೇಕು? ಈಶಾನ್ಯ ಮಾರುತದ ಮಳೆ ಸುರಿದ ಮೇಲೆ ಪ್ರಾರಂಭಿಸಬಹುದಲ್ಲವೇ? ಎಂದು ವಾದಿಸಿದರು.
ಬಳಿಕ ವಾದ ಮಂಡಿಸಿದ ರಾಜ್ಯದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್, ಅಂತರ್ ನದಿ ಕೊಳ್ಳ ಯೋಜನೆಗಳಿಗೆ ಅವಕಾಶ ನೀಡಬೇಕು. ಪರಿಸರ ಬಳಕೆಗೆ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೆ ಎಲ್ಲ ರಾಜ್ಯಗಳು ತಮ್ಮ ಕೊಡುಗೆ ನೀಡಬೇಕು. ಬೆಂಗಳೂರಿಗೆ 2011ರ ಜನಗಣತಿಯ ಪ್ರಕಾರ ನೀರು ಹಂಚಿಕೆ ಮಾಡಬೇಕು. ಈಗ ನ್ಯಾಯಾಧಿಕರಣವು ಬೆಂಗಳೂರಿನ ಮೂರನೇ ಒಂದು ಭಾಗವನ್ನು ಕಾವೇರಿ ಸೀಮೆ ಎಂದು ಪರಿಗಣಿಸಿ ನೀರು ಹಂಚಿಕೆ ಮಾಡಿದ್ದು ಉಳಿದ ಮೂರನೇ ಎರಡು ಭಾಗವನ್ನು ಕಾವೇರಿ ಕೊಳ್ಳದಿಂದ ಹೊರಗಿಡಲಾಗಿದೆ. ಇಡೀ ಬೆಂಗಳೂರನ್ನು ಕಾವೇರಿ ಕೊಳ್ಳದ ವ್ಯಾಪ್ತಿಗೆ ತಂದು
ಬೆಂಗಳೂರಿಗೆ ಕಾವೇರಿ ನೀರಿನಲ್ಲಿ ಹೆಚ್ಚಿನ ಪಾಲು ನೀಡಬೇಕು ಎಂದು ವಾದಿಸಿದರು.
(ಸಾಂದರ್ಭಿಕ ಚಿತ್ರ)
