ಬೆಳಗಾವಿ (ಮಾ. 19): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಸಮಾರಂಭ ಸೋಮವಾರ ಅದ್ಧೂರಿಯಾಗಿ ನೆರವೇರಿತು. ಗ್ರಾಮೀಣ ಭಾಗದಲ್ಲಿ ಕಡಿಮೆ ವೆಚ್ಚದ ಪರಿಸರ ಸ್ನೇಹಿ ಸೇತುವೆ ನಿರ್ಮಿಸಿ ಸೇತು ಬಂಧು ಮತ್ತು ‘ಬ್ರಿಡ್ಜ್‌ಮನ್‌’ ಎಂದೇ ಖ್ಯಾತರಾಗಿರುವ, ಪದ್ಮಶ್ರೀ ಪುರಸ್ಕೃತ ಬಿ.ಗಿರೀಶ ಭಾರದ್ವಾಜ್‌ಗೆ ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪದವಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ 64881 ಬಿ.ಇ., 619 ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಚರ್‌, 4425 ಎಂಬಿಎ, 1801 ಎಂಸಿಎ, 2859 ಎಂ.ಟೆಕ್‌, 26 ಮಾಸ್ಟರ್‌ ಆಫ್‌ ಆರ್ಕಿಟೆಕ್ಚರ್‌, 418 ಪಿಎಚ್‌.ಡಿ. ಹಾಗೂ 33 ಎಂಸ್ಸಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಥಮ ರಾರ‍ಯಂಕ್‌ ಪಡೆದುಕೊಂಡಿರುವ ದಾವಣಗೆರೆಯ ಜೈನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಸುಚಿತ್ರಾ.ಎನ್‌ ಅವರಿಗೆ 9 ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪದವಿ ಸ್ವೀಕರಿಸಿ ಮಾತನಾಡಿದ ಗಿರೀಶ ಭಾರದ್ವಾಜ್‌, ವಿದ್ಯಾರ್ಥಿಗಳು ಕನಸು ಕಾಣಬೇಕು. ಕನಸನ್ನು ನನಸಾಗಿಸಿಕೊಳ್ಳಲು ನಿರಂತರವಾಗಿ ಶ್ರಮಿಸಬೇಕು. ಹೊಸ ಸಂಶೋಧನೆ ಕೈಗೊಳ್ಳುವ ಜವಾಬ್ದಾರಿಯೂ ವಿದ್ಯಾರ್ಥಿಗಳ ಮೇಲಿದೆ ಎಂದರು.

ಉಪರಾಷ್ಟ್ರಪತಿ, ರಾಜ್ಯಪಾಲರು ಗೈರು:

ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಅವರ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಶೋಕಾಚರಣೆ ಆಚರಿಸುತ್ತಿರುವುದರಿಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಗೈರಾಗಿದ್ದರು. ಅವರೊಟ್ಟಿಗೆ ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ಕೂಡ ಘಟಿಕೋತ್ಸವ ಸಮಾರಂಭಕ್ಕೆ ಗೈರಾಗಿದ್ದರು.