ಅಂಕೋಲಾ (ಜು. 18): ಸೇತುವೆ ಕುಸಿದ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಮೃತದೇಹವನ್ನು ನೀರಿನಲ್ಲಿಯೇ ಸಾಗಿಸಿದ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಕೇಣಿಯ ಗಾಂವಕರವಾಡಾದಲ್ಲಿ ಈ ವರ್ಷವೂ ನಡೆದಿದೆ.

ಸ್ಥಳೀಯ ನಿವಾಸಿ 80 ವರ್ಷದ ರಾಮಾ ನಾರಾಯಣ ಗಾಂವಕರ ಎನ್ನುವ ವೃದ್ಧ ಬುಧವಾರ ಬೆಳಗ್ಗೆ ಮೃತಪಟ್ಟಿದ್ದರು. ಗ್ರಾಮದ ರುದ್ರಭೂಮಿಗೆ ಸಾಗುವ ಕಾಲು ಸೇತುವೆಯೊಂದು ಮಳೆ ನೀರಿಗೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಮೃತ ದೇಹವನ್ನು ಎದೆಯೆತ್ತರದ ನೀರಿನಲ್ಲೇ ಹೊತ್ತು ನಡೆದುಕೊಂಡೆ ಹೋಗಿ ಸಾಗಿಸಲಾಯಿತು.

ಶವವನ್ನು ಸುಡಲು ಬೇಕಾಗಿದ್ದ ಕಟ್ಟಿಗೆಯನ್ನೂ ಸಂಬಂಧಿಗಳು ನೀರಿನಲ್ಲಿ ಮುಳುಗಿಕೊಂಡೇ ಸಾಗಿಸಿದ್ದಾರೆ. 2 ವರ್ಷದ ಹಿಂದೆ ರುದ್ರಭೂಮಿಗೆ ಸಾಗಲು ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಕಳೆದ ವರ್ಷದ ಮಳೆಗೆ ಅದು ಕುಸಿದಿತ್ತು. ಕಳೆದ ವರ್ಷವೂ ಇಲ್ಲಿ ವೃದ್ಧೆಯೊಬ್ಬರು ಮೃತಪಟ್ಟಾಗ ಇದೇ ರೀತಿ ಶವವನ್ನು ನೀರಿನಲ್ಲಿಯೇ ಸಾಗಿಸಿ ಶವ ಸಂಸ್ಕಾರ ನಡೆಸಲಾಗಿತ್ತು.