ದಾಳಿ ಮಾಡಿ, ವಾಪಸ್‌ ಬಂದು, ಮರು ದಾಳಿಯ ಸಾಮರ್ಥ್ಯ. ವಿಷ್ಣುವಿನ ಸುದರ್ಶನ ಚಕ್ರ ಮಾದರಿಯಲ್ಲಿ ಭಾರತದಿಂದ ಕ್ಷಿಪಣಿ ಅಭಿವೃದ್ಧಿ? ಇದು ಚೀನಾ, ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವ ಸುದ್ದಿ..!

ಕುರುಕ್ಷೇತ್ರ: ಚೀನಾ, ಪಾಕಿಸ್ತಾನದ ಎಲ್ಲ ಭಾಗ ತಲುಪಬಲ್ಲ, 5000 ಕಿ.ಮೀ. ದೂರದವರೆಗೂ ಸಾಗುವ ಸಾಮರ್ಥ್ಯ ಹೊಂದಿರುವ ಅಗ್ನಿ- 5 ಕ್ಷಿಪಣಿಯ ಪ್ರಯೋಗ ಯಶಸ್ವಿಯಾದ ಹುಮ್ಮಸ್ಸಿನಲ್ಲಿರುವ ಭಾರ ತೀಯ ವಿಜ್ಞಾನಿಗಳು ಇದೀಗ ಮತ್ತೊಂದು ಕ್ಷಿಪಣಿ ಯೋಜನೆ ಕೈಗೆತ್ತಿಕೊಳ್ಳಲು ಸಿದ್ಧತೆ ಆರಂಭಿಸಿದ್ದಾರೆ. ವಿಷ್ಣುವಿನ ‘ಸುದರ್ಶನ ಚಕ್ರ'ದಿಂದ ಪ್ರೇರಿತವಾದ ಕ್ಷಿಪಣಿ ಇದಾಗಿದೆ ಎಂಬುದು ವಿಶೇಷ.

ಶಬ್ದಕ್ಕಿಂತ 10 ಪಟ್ಟು ವೇಗವಾಗಿ (ಮ್ಯಾಕ್‌ 10) ಸಾಗುವ ಈ ಕ್ಷಿಪಣಿ, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ದು, ನಿಗದಿತ ಗುರಿ ಮೇಲೆ ದಾಳಿ ಮಾಡಿ, ಅಲ್ಲಿ ಆದ ಹಾನಿಯನ್ನು ಪರಾಮರ್ಶಿಸಿ, ವಾಪಸ್‌ ಬಂದು ಮತ್ತೊಂದು ದಾಳಿಗೆ ಸಜ್ಜಾಗುವ ಸಾಮರ್ಥ್ಯ ಹೊಂದಿರಲಿದೆ. ಇದನ್ನು ‘ಬೂಮರಾಂಗ್‌' (ತಿರುಗುಬಾಣ) ಕ್ಷಿಪಣಿ ಎಂದು ವಿಜ್ಞಾನಿಗಳು ಕರೆಯುತ್ತಿದ್ದಾರೆ. ಬ್ರಹ್ಮೋಸ್‌ ಕ್ಷಿಪಣಿ ಯೋಜನೆಯಡಿ ಇದನ್ನು ತಯಾರಿಸಲು ಉದ್ದೇಶಿಸಲಾಗಿದೆ.

ವಿಷ್ಣುವಿನ ಸುದರ್ಶನ ಚಕ್ರ ಮಾದರಿಯಲ್ಲಿ ಕ್ಷಿಪಣಿ ಅಭಿವೃದ್ಧಿಪಡಿಸಬೇಕು ಎಂಬುದು ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಕನಸು. ಸುದರ್ಶನ ಚಕ್ರ ಮಾದರಿಯಲ್ಲಿ ಮರುಬಳಕೆಯ ಕ್ಷಿಪಣಿ ಅಭಿವೃದ್ಧಿ ಅವರ ಆಸೆಯಾಗಿತ್ತು. ಇದೊಂದು ಸವಾಲಿನ ಯೋಜನೆಯಾಗಿದೆ. ಆದರೆ, ಸೂಪರ್‌ಸಾನಿಕ್‌ ಕ್ಷಿಪಣಿ ಯೋಜನೆಯಲ್ಲಿ ವಿಜ್ಞಾನಿಗಳು ಸಾಧಿಸಿರುವ ಪ್ರಗತಿಯಿಂದ ಅದನ್ನು ಸಾಧಿಸುವ ಸಾಮರ್ಥ್ಯವಿದೆ ಎಂದು ಬ್ರಹ್ಮೋಸ್‌ ಕ್ಷಿಪಣಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸುಧೀರ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

(epaper.kannadaprabha.in)