ಬೆಂಗಳೂರು [ಜೂ.21]  : ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದಿಂದ ನಿರ್ಮಿಸಿರುವ ಸುಸಜ್ಜಿತ ಐದು ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಗುರುವಾರ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉದ್ಘಾಟಿಸಿದರು. 

 ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೈಸೂರು ಮೂಲದ ಸುಮಾರು 9 ವರ್ಷದ ಬಾಲಕ ಸೃಜನ್ ಹಾಗೂ ಆತನ ತಂದೆ ಸೋಮಶೇಖರ್ ವೇದಿಕೆ ಮೇಲೇರಿ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಿದರು. 

ಈ ವೇಳೆ ಸೃಜನ್ ಆರೋಗ್ಯವನ್ನು ಸಿಎಂ ವಿಚಾರಿಸಿದರು. ಸೃಜನ್ 16 ತಿಂಗಳ ಮಗುವಾಗಿದ್ದಾಗ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದ. ಅಂದು ಚಿಕಿತ್ಸೆಗೆ 30 ಲಕ್ಷ ರು. ವೆಚ್ಚವಾಗುವುದಾಗಿ ಖಾಸಗಿ ಆಸ್ಪತ್ರೆಗಳು ಹೇಳುತ್ತಿರುವುದಾಗಿ ಸಹಾಯ ಕೋರಿ ಸೋಮಶೇಖರ್ ತಮ್ಮ ಬಳಿ ಬಂದಿದ್ದರು. 

ಕಿದ್ವಾಯಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿ, ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೆ. ಇದೀಗ ಸೃಜನ್ ಬಹುತೇಕ ಗುಣಮುಖನಾಗಿದ್ದಾನೆ ಎಂದರು.