ಇತ್ತೀಚೆಗೆ ಅಂತಾರಾಷ್ಟ್ರೀಯ ತೈಲಬೆಲೆ ವ್ಯತ್ಯಾಸದ ಕಾರಣ ಪೆಟ್ರೋಲ್-ಡೀಸೆಲ್ ಬೆಲೆ ದೇಶದ ಕೆಲವು ಭಾಗಗಳಲ್ಲಿ 80 ರು. ಸನಿಹಕ್ಕೆ ಬಂದು ಮುಟ್ಟಿದೆ.
ಕೊಲ್ಹಾಪುರ: ಇತ್ತೀಚೆಗೆ ಅಂತಾರಾಷ್ಟ್ರೀಯ ತೈಲಬೆಲೆ ವ್ಯತ್ಯಾಸದ ಕಾರಣ ಪೆಟ್ರೋಲ್-ಡೀಸೆಲ್ ಬೆಲೆ ದೇಶದ ಕೆಲವು ಭಾಗಗಳಲ್ಲಿ 80 ರು. ಸನಿಹಕ್ಕೆ ಬಂದು ಮುಟ್ಟಿದೆ.
ಇದೇ ವೇಳೆ, ಪೆಟ್ರೋಲ್ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೇರುತ್ತಿರುವ ವಿವಿಧ ತೆರಿಗೆಯ ಬಗ್ಗೆಯೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಪೆಟ್ರೋಲ್ ದರದ ಮಧ್ಯೆ 9 ರು. ಹಾಗೂ ಡೀಸೆಲ್ ದರದ ಮಧ್ಯೆ ಸುಮಾರು 3.50 ರು. ವ್ಯತ್ಯಾಸ ಇರುವುದು ಗೊತ್ತಾಗಿದೆ.
ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಮ್ಮಿ ಇರುವ ಕರ್ನಾಟಕದ ಭಾಗಗಳಿಗೆ ಈ ತೈಲೋತ್ಪನ್ನ ತುಂಬಿಸಿಕೊಳ್ಳಲು ಮಹಾರಾಷ್ಟ್ರದ ಗಡಿಭಾಗದ ಜನರು ಕರ್ನಾಟಕದತ್ತ ದೌಡಾಯಿಸುತ್ತಿದ್ದಾರೆ. ಇದೇ ವೇಳೆ, ಕರ್ನಾಟಕದ ಪೆಟ್ರೋಲ್-ಡೀಸೆಲ್ ಬಂಕ್ ಮಾಲೀಕರು ‘ಕರ್ನಾಟಕದಲ್ಲಿ ಮಹಾರಾಷ್ಟ್ರಕ್ಕಿಂತ ಪೆಟ್ರೋಲ್ ಬೆಲೆ 9ರು. ಹಾಗೂ ಡೀಸೆಲ್ ಬೆಲೆ 3.50 ರು. ಅಗ್ಗ’ ಎಂದು ಫಲಕ ಹಾಕಿದ್ದು, ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ತೈಲೋತ್ಪನ್ನಗಳ ಮೇಲೆ ಆಯಾ ರಾಜ್ಯಗಳ ತೆರಿಗೆಯು ವಿಭಿನ್ನ ಪ್ರಕಾರದಲ್ಲಿದ್ದುದೇ ಈ ದರ ವ್ಯತ್ಯಾಸಕ್ಕೆ ಕಾರಣವಾಗಿದೆ. ಇಂಡಿಯನ್ ಆಯಿಲ್ ವೆಬ್ ಸೈಟನ್ನು ಗಮನಿಸಿದಾಗ ಗುರುವಾರದ ಪೆಟ್ರೋಲ್ ದರ (ಲೀಟರ್‌ಗೆ) ಮುಂಬೈನಲ್ಲಿ 79.63 ರು. ಇದ್ದರೆ, ಬೆಂಗಳೂರಿನಲ್ಲಿ 71.63 ರು. ಇತ್ತು. ಇದು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಇನ್ನಷ್ಟು ವ್ಯತ್ಯಾಸವಾಗುತ್ತದೆ. ಡೀಸೆಲ್ ದರ ಮುಂಬೈನಲ್ಲಿ 62.35 ರು. ಇದ್ದರೆ, ಬೆಂಗಳೂರಿನಲ್ಲಿ 58.80 ರು. ಇತ್ತು
(ಸಾಂದರ್ಭಿಕ ಚಿತ್ರ)
