ಮುಂಬೈ(ಜೂ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಬಾಂಬೆ ಹೈಕೋರ್ಟ್ ಅಸ್ತು ಎಂದಿದೆ. ಆದರೆ ಶೇ.16ರಷ್ಟು ಮೀಸಲಾತಿ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್, ಆದರೆ ಮರಾಠಾ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ಅಗತ್ಯವಿಲ್ಲ ಎಂದು ತಿಳಿಸಿದೆ. ಮರಾಠ ಸಮುದಾಯಕ್ಕೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.12 ರಷ್ಟು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಶೇ.13 ಮೀಸಲಾತಿ ನೀಡಬಹುದೆಂದು ಸಲಹೆ ನೀಡಿದೆ.

ಮಹಾರಾಷ್ಟ್ರ ವಿಧಾನಸಭೆ 2018ರಲ್ಲಿ ಮರಾಠಾ ಸಮುದಾಯಕ್ಕೆ ಶೇ.16 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿತ್ತು. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರಂಜಿತ್ ಮೋರೆ, ನ್ಯಾ.ಭರತಿ ದಂಗ್ರೆ ನೇತೃತ್ವದ ವಿಭಾಗೀಯ ಪೀಠ, ಮೀಸಲಾತಿ ಮಸೂದೆಗೆ ಸೈ ಎಂದಿದ್ದು ಮೀಸಲಾತಿ ಪ್ರಮಾಣವನ್ನು ಬದಲಾವಣೆ ಮಾಡಬಹುದು ಎಂದು ಸೂಚಿಸಿದೆ. 

ಹೈಕೋರ್ಟ್ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಮರಾಠಾ ಮೀಸಲಾತಿ ಹೋರಾಟಗಾರರು, ನಮ್ಮ ನ್ಯಾಯಯುತ ಬೇಡಿಕೆಗೆ ಕಾನೂನಾತ್ಮಕ ಜಯ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.