Asianet Suvarna News Asianet Suvarna News

ನಾಗನ ಹೊಸ ಸೀಡಿ! ಪಿ.ಸಿ. ಮೋಹನ್ ಅವರೆ ನನ್ನ ಪರಿಚಯ ಇಲ್ಲವೆ, ಕಾಲ್ ಡಿಟೇಲ್ಸ್ ತೆಗೆಸಿ ಗೊತ್ತಾಗುತ್ತೆ

ತನ್ನ ಮನೆಯಲ್ಲಿ ಕೋಟ್ಯಂತರ ರು. ಹಳೆ ನೋಟುಗಳು ಸಿಕ್ಕ ನಂತರ ತಲೆಮರೆಸಿಕೊಂಡಿರುವ ನಾಗ, ಸೋಮವಾರ ತಡರಾತ್ರಿ ರಹಸ್ಯ ತಾಣದಿಂದ ಬಿಡುಗಡೆ ಮಾಡಿರುವ 2ನೇ ಸೀಡಿ ಸುವರ್ಣ ನ್ಯೂಸ್ಹಾಗೂ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಅದರಲ್ಲಿ ತನ್ನ ವಿರುದ್ಧ ಗಣ್ಯರು ಸಂಚು ರೂಪಿಸಿರುವ ಬಗ್ಗೆ ಕಿಡಿ ಕಾರಿದ್ದಾನೆ.

Bomb Naga release new CD

ಬೆಂಗಳೂರು(ಮೇ.09): ಹದಿನೈದು ದಿನದ ಹಿಂದಷ್ಟೇ ರಹಸ್ಯ ತಾಣದಿಂದ ಸೀಡಿ ಯೊಂದನ್ನು ಬಿಡುಗಡೆ ಮಾಡಿ ಗಣ್ಯರ ಮೇಲೆ ಆರೋಪಗ ಳನ್ನು ಮಾಡಿದ್ದ ಬೆಂಗಳೂರು ಮಹಾನಗರಪಾಲಿಕೆಯ ಮಾಜಿ ಸದಸ್ಯ, ರೌಡಿಶೀಟರ್‌ ನಾಗರಾಜ್‌ ಅಲಿಯಾಸ್‌ ನಾಗ, ಇದೀಗ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.
15 ವರ್ಷದ ದೋಸ್ತಿ: ಪಿ.ಸಿ. ಮೋಹನ್‌ ನನಗೆ 15 ವರ್ಷದಿಂದ ಆತ್ಮೀಯ ಸ್ನೇಹಿತರು. ಈಗ ನಾನು ಕಷ್ಟದಲ್ಲಿರುವಾಗ ನನಗೂ ನಾಗನಿಗೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಸಂಬಂಧ ಇರುವ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ ಡಿಸೆಂಬರ್‌ 29ರಿಂದ ಜನವರಿ 31ರವರೆಗಿನ ನನ್ನ ಕಾಲ್‌ ಡೀಟೆಲ್ಸ್‌ ತೆಗೆಸಿ ನೋಡಬಹುದು. ಆಗ ಸತ್ಯ ಗೊತ್ತಾಗುತ್ತದೆ. ಪಿ.ಸಿ.ಮೋಹನ್‌ ಅವರ ಪತ್ನಿಯ ಸ್ವಂತ ತಮ್ಮ ದಿವಾಕರ್‌ರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ, ಇನ್ಸ್‌ಪೆಕ್ಟರ್‌ ಸೇರಿ ಯಾರಾರ‍ಯರು ನನ್ನ ಜೊತೆ ಮಾತನಾಡಿದ್ದರು ಎಂಬ ಸತ್ಯ ಕೂಡ ಬಯಲಾಗುತ್ತದೆ ಎಂದು ನಾಗ ಹೇಳಿದ್ದಾನೆ.
ತನ್ನ ಮನೆಯಲ್ಲಿ ಕೋಟ್ಯಂತರ ರು. ಹಳೆ ನೋಟುಗಳು ಸಿಕ್ಕ ನಂತರ ತಲೆಮರೆಸಿಕೊಂಡಿರುವ ನಾಗ, ಸೋಮವಾರ ತಡರಾತ್ರಿ ರಹಸ್ಯ ತಾಣದಿಂದ ಬಿಡುಗಡೆ ಮಾಡಿರುವ 2ನೇ ಸೀಡಿ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಅದರಲ್ಲಿ ತನ್ನ ವಿರುದ್ಧ ಗಣ್ಯರು ಸಂಚು ರೂಪಿಸಿರುವ ಬಗ್ಗೆ ಕಿಡಿ ಕಾರಿದ್ದಾನೆ.

ಜುಜುಬಿ ಕೇಸ್‌

ನನ್ನ ವಿರುದ್ಧ 40ರಿಂದ 50 ಕೇಸುಗಳಿವೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಆದರೆ, ನನ್ನ ಮೇಲಿರುವ ಕೇಸುಗಳೆಲ್ಲ 100-200 ರು. ದಂಡ ಹಾಕಿ ಬಿಟ್ಟುಬಿಡುವ ಕೇಸುಗಳಷ್ಟೆ. ಗಂಭೀರ ಪ್ರಕರಣ ಗಳಲ್ಲ. ರೌಡಿ ಅನ್ನುವ ಪದದ ಅರ್ಥವೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.
‘ನೋಟು ರದ್ದತಿಯ ನಂತರ ಐಪಿಎಸ್‌ ಅಧಿಕಾರಿಗಳು ನನ್ನತ್ರ ಬಂದು ಹಳೆ ನೋಟನ್ನು ಹೊಸ ನೋಟಿಗೆ ಬದಲಾವಣೆ ಮಾಡಿಸಿಕೊಂಡು ಹೋದಿರಿ. ಆದರೂ ಕೋಟ್ಯಂತರ ಮೌಲ್ಯದ ಹಳೆ ನೋಟುಗಳು ನಿಮ್ಮತ್ರ ಉಳಿದಿವೆ. ಅದನ್ನು ನೋಡಿ ಹುಚ್ಚು ಹಿಡಿದಂತಾಗಿ ನನ್ನ ಮೇಲೆ ಹುಚ್ಚುಚ್ಚಾಗಿ ಕೇಸ್‌ ಹಾಕುತ್ತಿದ್ದೀರಿ' ಎಂದೂ ನಾಗ ನೇರವಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.  

ಪರಂ ಹೊಗಳಿಕೆ

ಇದೇ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್‌ರನ್ನು ಬಾಯ್ತುಂಬಾ ಹೊಗಳಿರುವ ನಾಗ, ನೀವು ಮಾತನಾಡಿದ್ದನ್ನು ಮಾಧ್ಯಮದಲ್ಲಿ ಕೇಳಿದೆ. ಜೀವರಾಜ್‌ ಆಳ್ವರ ಮಾತು ಕೇಳಿದಷ್ಟೇ ಸಂತೋಷವಾಯಿತು. ನೀವು ನಿಜವಾದ ಜಂಟಲ್‌ಮನ್‌. ನೀವು ಬಾ ಅಂದರೆ ಹತ್ತು ನಿಮಿಷದಲ್ಲಿ ನಿಮ್ಮ ಮನೆಯೆದುರು ಹಾಜರಾಗುತ್ತೇನೆ ಎಂದಿದ್ದಾನೆ.

ಮಾನ ಹರಾಜು

‘ನಾನು ಮನಸ್ಸು ಮಾಡಿದ್ದರೆ ಇಡೀ ಪ್ರಕರಣವನ್ನು ಸಿಬಿಐಗೆ ಒಯ್ಯಬಹುದಿತ್ತು. ಹಾಗೆ ಮಾಡಿದ್ದರೆ, ಹಿರಿಯ ಐಪಿಎಸ್‌ ಅಧಿಕಾರಿಗಳ ಬಣ್ಣ ಬಯಲಾಗುತ್ತಿತ್ತು. ಕರ್ನಾಟಕದ ಮಾನ ಹರಾಜಾಗುತ್ತಿತ್ತು', ಎಂದೂ ನಾಗ ಬಾಂಬ್‌ ಸಿಡಿಸಿದ್ದಾನೆ. ಅಲ್ಲದೆ, ‘ನನ್ನ ಮಕ್ಕಳನ್ನು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನಾಗಿ ಮಾಡಬೇಕು ಅಂತಿದ್ದೆ. ನೀವು (ಪೊಲೀಸರು) ಅವರ ಬಾಳನ್ನು ಹಾಳು ಮಾಡಿಬಿಟ್ರಿ. ಇಡೀ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಪೊಲೀಸರೇ, ನೀವು ಅನ್ಯಾಯ ಮಾಡಿದ್ದರೆ ನಿಮ್ಮ ಹೆಂಡತಿ, ಮಕ್ಕಳು ನಿಮ್ಮನ್ನು ಬಿಟ್ಟು ಓಡಿ ಹೋಗುತ್ತಾರೆ' ಎಂದು ಹಿಡಿಶಾಪ ಹಾಕಿದ್ದಾನೆ.
ಸಿದ್ದು ಹೆಸರೂ ಉಲ್ಲೇಖ: ವಿಡಿಯೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನೂ ನಾಗ ಉಲ್ಲೇಖ ಮಾಡಿದ್ದಾನೆ. ‘ನಾನೇನಾದರೂ ವಿಧಾನಸೌಧ ಮುಂದೆ ಬಂದು ಹೆಚ್ಚು ಕಮ್ಮಿ ಮಾಡಿಕೊಂಡರೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಟ್ಟಹೆಸರು ಬರುತ್ತೆ' ಎಂದೂ ಹೇಳಿದ್ದಾನೆ.
ಎಲೆಕ್ಷನ್‌ಗೆ ನಿಲ್ಲಲ್ಲ:

 

ತಾನು ಚುನಾವಣೆಗೆ ನಿಲ್ಲುವ ಭೀತಿಯಿಂದ ತನಗೆ ಕಾಟ ಕೊಡಲಾಗುತ್ತಿದೆ ಎಂದು ಆರೋಪಿಸಿರುವ ನಾಗ, ‘2018ರಲ್ಲಿ ಎಲೆಕ್ಷನ್‌ ಬರುತ್ತೆ. ಇದಕ್ಕೆ ತಾನೇ ನನಗೆ ಕಾಟ ಕೊಡ್ತಿರೋದು. ನಾನು ನಿಲ್ಲೋದಿಲ್ಲ. ಯಾರಿಗಾದ್ರೂ ಸಪೋರ್ಟ್‌ ಮಾಡ್ತೀನಿ ಅಷ್ಟೆ. ಅವರು ಗೆದ್ದುಕೊಳ್ಳಲಿ...' ಎನ್ನುತ್ತಾ ಕಣ್ಣೀರು ಹಾಕುತ್ತಾನೆ.

ವರದಿ: ರವಿಕುಮಾರ್.ಪಿ.ಎಸ್

Follow Us:
Download App:
  • android
  • ios