ಜೈಪುರ (ಸೆ. 20): ಬರೋಬ್ಬರಿ 20 ವರ್ಷಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದ ವೇಳೆ ಚೈನ್‌ ಎಳೆದು ರೈಲು ನಿಲ್ಲಿಸಿದ್ದ ಪ್ರಕರಣ ಸಂಬಂಧ ಚಿತ್ರನಟರಾದ ಸನ್ನಿ ಡಿಯೋಲ್‌ ಹಾಗೂ ಕರೀಷ್ಮಾ ಕಪೂರ್‌ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.

ಈ ಇಬ್ಬರ ವಿರುದ್ಧ ರೈಲ್ವೇ ನ್ಯಾಯಾಲಯವೊಂದು ದೋಷಾರೋಪ ಹೊರಿಸಿದೆ. ರೈಲ್ವೇ ನ್ಯಾಯಾಲಯದ ಈ ನಿರ್ಧಾರವನ್ನು ಪ್ರಶ್ನಿಸಿ ಸೆಷನ್ಸ್‌ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಆರೋಪಿಗಳ ಪರ ವಕೀಲ ಎ.ಕೆ ಜೈನ್‌ ಹೇಳಿದ್ದಾರೆ.

1997 ರಲ್ಲಿ ಅಜ್ಮೇರ್‌ ಜಿಲ್ಲೆಯ ಪುಲೇರಾದ ಸಂವರ್ಧ ಎಂಬಲ್ಲಿ ‘ಬಜರಂಗ್‌’ ಸಿನಿಮಾ ಚಿತ್ರೀಕರಣದ ವೇಳೆ ಅಪ್‌ಲಿಂಕ್‌ ಎಕ್ಸ್‌ಪ್ರೆಸ್‌ ರೈಲಿನ ತುರ್ತು ಚೈನ್‌ ಎಳೆದು ನಿಲ್ಲಿಸಿದ್ದರಿಂದ ರೈಲಿನ ಸಂಚಾರ 25 ನಿಮಿಷ ತಡವಾಗಿತ್ತು. ಪ್ರಕರಣ ಸಂಬಂಧ ನರೇನಾದ ಸಹಾಯಕ ಸ್ಟೇಷನ್‌ ಮಾಸ್ಟರ್‌ ಸೀತಾರಾಂ ಮಲಾಕಾರ್‌ ರೈಲ್ವೇ ಕಾಯ್ದೆಯ ವಿವಿಧ ಪ್ರಕರಣಗಳಡಿ ಡಿಯೋಲ್‌ ಹಾಗೂ ಕಪೂರ್‌ ಮೇಲೆ ಪ್ರಕರಣ ದಾಖಲಿಸಿದ್ದರು.

2009ರಲ್ಲಿ ಪ್ರಕರಣ ಸಂಬಂಧ ರೈಲ್ವೇ ನ್ಯಾಯಾಲಯದಲ್ಲಿ ಆರೋಪಗಳನ್ನು ಓದಿ ಹೇಳಲಾಗಿದ್ದರೂ, 2010ರಲ್ಲಿ ಸೆಷನ್ಸ್‌ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಲಾಗಿತ್ತು. ಬಳಿಕ 2010 ಸೆ. 17ರಂದು ಸೆಷನ್ಸ್‌ ಕೋರ್ಟ್‌ ಇಬ್ಬರನ್ನು ಆರೋಪ ಮುಕ್ತಗೊಳಿಸಿತ್ತು. ಆದರೆ ಈಗ ಮತ್ತೆ ಡಿಯೋಲ್‌ ಹಾಗೂ ಕಪೂರ್‌ ವಿರುದ್ಧ ರೈಲ್ವೇ ನ್ಯಾಯಾಲಯ ದೋಷಾರೋಪ ಹೊರಿಸಿದೆ.

ಸೆ. 24 ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಜೈನ್‌ ಹೇಳಿದ್ದಾರೆ. ಇವರ ಹೊರತಾಗಿ ಸ್ಟಂಟ್‌ಮ್ಯಾನ್‌ ತಿನು ವರ್ಮಾ ಹಾಗೂ ಸತೀಶ್‌ ಶಾ ಮೇಲೆ ಆರೋಪಗಳಿದ್ದರೂ, ಅವರು ಅದನ್ನು ಪ್ರಶ್ನಿಸಿರಲಿಲ್ಲ.